ವಾಡಿ: ಸಾರ್ವಭೌಮ ಸಮಾಜವಾದಿ, ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಸಮಾಜ ನಿರ್ಮಾಣವೇ ಸಂವಿಧಾನದ ಮೂಲ ಆಶಯವಾಗಿದೆ ಎಂದು ನಗರ ಪೊಲೀಸ್ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ ಹೇಳಿದರು.
ಸ್ಥಳೀಯ ಠಾಣೆಯಲ್ಲಿ ಏರ್ಪಡಿಸಲಾಗಿದ್ದ “ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಪ್ರಸ್ತಾವನೆ ಓದಿ ಪ್ರಮಾಣ ಮಾಡುವ ಮೂಲಕ ಅವರು ಮಾತನಾಡಿದರು.
ಸಾಮಾಜಿಕ, ಅರ್ಥಿಕ, ರಾಜಕೀಯ ನ್ಯಾಯ ನೀಡಿರುವ ನಮ್ಮ ಕಾನೂನು, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮ ಶ್ರದ್ಧೆ, ಉಪಾಸನಾ ಸ್ವಾತಂತ್ರ್ಯ ಹೇಳಿಕೊಟ್ಟಿದೆ. ವಿವಿಧ ಸ್ಥಳಗಳಲ್ಲಿ ಸ್ಥಾನಮಾನ ಹಾಗೂ ಅವಕಾಶ ಸಮಾನತೆ ಕಲ್ಪಿಸಿಕೊಟ್ಟಿದೆ. ಈ ಮಹತ್ವದ ವಿಚಾರಗಳನ್ನು ಜನತೆಗೆ ತಲುಪಿಸುವ ಮತ್ತು ಜಾಗೃತಿ ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ಅಧಿಕಾರಿ ಮತ್ತು ಜನಪ್ರತಿನಿಧಿ ಮೇಲಿದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಗೂ ಗೌರವ ನೀಡುವ ಮತ್ತು ರಾಷ್ಟ್ರದ ಏಕತೆ, ಅಖಂಡತೆಯನ್ನು ಸ್ಮರಿಸಿ ಭಾತೃತ್ವ ಭಾವನೆ ವೃದ್ಧಿಗೊಳಿಸಲು ಶ್ರದ್ಧಾಪೂರ್ವಕ ಸಂಕಲ್ಪ ತೊಡುವ ದಿನ ನವೆಂಬರ್ 26 ಆಗಿದೆ. ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸಿಕೊಳ್ಳದಿದ್ದರೇ ಸಂವಿಧಾನ ದಿನಾಚರಣೆಗೆ ಯಾವುದೇ ಅರ್ಥವಿರುವುದಿಲ್ಲ. ಭಾರತ ಸಂವಿಧಾನಕ್ಕೆ ಬಾಬಾಸಾಹೇಬರ ಕೊಡುಗೆ ದೊಡ್ಡದಿದೆ ಎಂದು ಹೇಳಿದರು.
ಅಪರಾಧ ವಿಭಾಗದ ಪಿಎಸ್‌ಐ ತಿರುಮಲೇಶ, ಪ್ರೊಬೇಷನರಿ ಪಿಎಸ್‌ಐ ಅಮೋಜ್ ಕಾಂಬಳೆ, ಎಎಸ್‌ಐ ಚನ್ನಮಲ್ಲಪ್ಪ ಪಾಟೀಲ, ಅಶೋಕ ಕಟ್ಟಿ, ಚಂದ್ರಶೇಖರ ದೊರೆ, ಲಕ್ಷ್ಮಣ ವಾಣಿ, ಜನಸ್ನೇಹಿ ಪೊಲೀಸ್ ಲಕ್ಷ್ಮಣ ತಳಕೇರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.