ಹೊನ್ನಾವರ: ಗೋಕರ್ಣ ಮೂಲದ ಕುಮಾರಿ ನೇಹಾ ಅವರು ಬಂಗಾಳದ ಅತ್ಯಂತ ಪ್ರತಿಷ್ಠಿತ ಮತ್ತು 1943ರಲ್ಲಿ ಆರಂಭವಾದ ರಾಷ್ಟ್ರೀಯ ಮಟ್ಟದ ಗಂಗಾ ನದಿಯಲ್ಲಿ ಈಜುವ ಮುಕ್ತ ಸ್ಪರ್ಧೆಯಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದಿದ್ದಾಳೆ.
ಗೋಕರ್ಣ ಸಣ್ಣ ಭಡ್ತಿ ಕುಟುಂಬದ ಕುಮಾರಿ ನೇಹಾ ತನ್ನ ತಂದೆ ನಾಗರಾಜ ಮತ್ತು ತಾಯಿ ನೇತ್ರಾ ಅವರೊಂದಿಗೆ ಕಲ್ಕತ್ತಾದಲ್ಲಿ ನೆಲೆಸಿದ್ದಾಳೆ.
2 ತಾಸು 28 ನಿಮಿಷಗಳಲ್ಲಿ 19 ಕಿಮೀ ಅಂತರವನ್ನು ಈಜಿರುವ ನೇಹಾ ಸ್ಪರ್ಧೆಗೆ ಇಳಿದಾಗ ಗಂಗಾ ನದಿಯ ನೀರು ಕೆಂಪಾಗಿ ಹರಿಯುತ್ತಿತ್ತು. ಕಲ್ಕತ್ತಾ ಮುರ್ಶಿದಾಬಾದದಲ್ಲಿ ನಡೆದ ಈ ಸ್ಪರ್ಧೆಯ ಬಹುಮಾನವನ್ನು ಹೆಸರಾಂತ ಕ್ರಿಕೆಟ್ ಆಟಗಾರ ಯುಸೂಫ್ ಪಠಾಣರಿಂದ ಸ್ವೀಕರಿಸಿದ್ದಾಳೆ. ಪಠಾಣ್ ಅವರು ನೇಹಾಳನ್ನು ಓಲಂಪಿಕ್ ನಲ್ಲಿ ಕಾಣಲು ಬಯಸುವುದಾಗಿ ಅಭಿನಂದಿಸಿದ್ದಾರೆ.
ಈಜಿನಲ್ಲಿ ಮತ್ತು ಓಟದಲ್ಲಿಯೂ ಬಂಗಾಳ ರಾಜ್ಯದ ಕ್ರೀಡಾಪ್ರೇಮಿಗಳ ಮೆಚ್ಚುಗೆ ಪಡೆದಿರುವ ನೇಹಾಳನ್ನು ಓಟದಲ್ಲಿ ಚಿರತೆ, ಈಜಿನಲ್ಲಿ ಮೊಸಳೆ ಎಂದು ಅಲ್ಲಿಯ ಮಾಧ್ಯಮಗಳು ಪ್ರಶಂಸಿಸಿವೆ. ನೇಹಾಳ ಅಜ್ಜ ಹೊನ್ನಾವರ ಖರ್ವಾದಲ್ಲಿ ಆರೋಗ್ಯಾಧಿಕಾರಿಯಾಗಿದ್ದರು. ಉತ್ತರ ಕನ್ನಡ ಜಿಲ್ಲೆ ನೇಹಾಳ ಸಾಧನೆಗಾಗಿ ಹೆಮ್ಮೆ ಪಡುತ್ತದೆ.