Advertisement

ಕಸಗುಡಿಸಿ, ಸಂಬಳ ಕೇಳಬೇಡಿ!

11:40 AM Jul 10, 2018 | |

ಬೆಂಗಳೂರು: ಕಳೆದ ಏಳು ತಿಂಗಳಿಂದ ವೇತನ ನೀಡದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿ, ಅಮಾಯಕ ಪೌರಕಾರ್ಮಿಕ ಪ್ರಾಣ ಕಳೆದುಕೊಂಡ ಘಟನೆ ಭಾನುವಾರ ದತ್ತಾತ್ರೇಯನಗರ ವಾರ್ಡ್‌ನಲ್ಲಿ ನಡೆದಿದೆ.

Advertisement

ಏಳು ತಿಂಗಳಿನಿಂದ ಮನೆ ಬಾಡಿಗೆ ಪಾವತಿಸಿದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡುವಂತೆ ತಾಕೀತು ಮಾಡುತ್ತಿದ್ದ ಮನೆ ಮಾಲೀಕ, ಮಕ್ಕಳಿಗೆ ಆಹಾರ ಕೊಡಿಸಲಾಗದಷ್ಟು ಅಸಹಾಯಕ ಸ್ಥಿತಿ, ಹಣವಿಲ್ಲದೆ ಜೀವನ ನಿರ್ವಹಣೆ ಅಸಾಧ್ಯ ಎನಿಸಿದ್ದರಿಂದ ಮನನೊಂದ ಸುಬ್ರಹ್ಮಣ್ಯ (35) ಎಂಬ ಪೌರಕಾರ್ಮಿಕ ಭಾನುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹಲವು ವರ್ಷಗಳಿಂದ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸುಬ್ರಮಣ್ಯ, ಹಲವು ತಿಂಗಳ ಹಿಂದೆ ಗುತ್ತಿಗೆ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಸಿದ್ದರು. ಆದರೆ, ಕಳೆದ ಏಳು ತಿಂಗಳಿಂದ ಪಾಲಿಕೆ ಅಧಿಕಾರಿಗಳಿ ವೇತನ ಬಿಡುಗಡೆ ಮಾಡಿಲ್ಲ. ಹೀಗಾಗಿ ಜೀವನ ನಡೆಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಗಳು ಹೇಳಿದ್ದಾರೆ. ಮೃತ ಸುಬ್ರಹ್ಮಣ್ಯ ಅವರ ಮರಣೋತ್ತರ ಪರೀಕ್ಷೆ ನಡೆದ ಕೆ.ಸಿ.ಜನರಲ್‌ ಆಸ್ಪತ್ರೆ ಬಳಿ ನೆರೆದ ಪೌರಕಾರ್ಮಿಕರು ಹಾಗೂ ಮೃತರ ಸಂಬಂಧಿಗಳು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ತ್ಯಾಜ್ಯ ನಿರ್ವಹಣೆಯಲ್ಲಿ ಅಕ್ರಮ ತಡೆಯುತ್ತೇವೆಂದು ಹೊರಟ ಅಧಿಕಾರಿಗಳು, ಅಕ್ರಮ ತಡೆಯುವ ಬದಲಿಗೆ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಸಮಸ್ಯೆಗೆ ಸಿಲುಕಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೆ. ಕೆಲಸ ಮಾಡಿದರೂ ಕಳೆದ ಏಳು ತಿಂಗಳಿನಿಂದ ಪೌರಕಾರ್ಮಿಕರಿಗೆ ವೇತನ ಪಾವತಿಸಿಲ್ಲ. ಹಲವು ಬಾರಿ ಮನವಿ ಮಾಡಿದರೂ, ವೇತನ ದೊರೆಯದ ಪರಿಣಾಮ ಸುಬ್ರಹ್ಮಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಘನತ್ಯಾಜ್ಯ ವಿಲೇವಾರಿಯಲ್ಲಿ ಸುಧಾರಣೆ ತರಲು ಬಯೋಮೆಟ್ರಿಕ್‌ ಹಾಜರಾತಿ ಪದ್ಧತಿ ಜಾರಿಗೆ ತಂದ ಅಧಿಕಾರಿಗಳು ಪಾಲಿಕೆಯಲ್ಲಿದ್ದ 30 ಸಾವಿರ ಕಾರ್ಮಿಕರನ್ನು 18 ಸಾವಿರಕ್ಕೆ ಇಳಿಸಿದ್ದಾರೆ. ಎಲ್ಲರ ಬಯೋಮೆಟ್ರಿಕ್‌ ಹಾಜರಾತಿಯನ್ನು ಪಡೆದುಕೊಂಡಿದ್ದಾರೆ. ಆನಂತರವೂ ನಕಲಿ ಪೌರಕಾರ್ಮಿಕರಿದ್ದಾರೆಂದು ಸುಮಾರು 2,500ಕ್ಕೂ ಹೆಚ್ಚು ಕಾರ್ಮಿಕರ ವೇತನವನ್ನು ಏಳು ತಿಂಗಳಿನಿಂದ ತಡೆಹಿಡಿದಿದ್ದು, ಪೌರಕಾರ್ಮಿಕರು ಕಷ್ಟ ಅನುಭವಿಸುವಂತಾಗಿದೆ. 

Advertisement

ಇದರೊಂದಿಗೆ ಬಯೋಮೆಟ್ರಿಕ್‌ ವ್ಯವಸ್ಥೆಯಲ್ಲಿಯೂ ಅಕ್ರಮವಾಗಿ ಕಾರ್ಮಿಕರನ್ನು ಸೇರಿಸಿಲಾಗಿದೆ ಎಂದು ಆರೋಪಿಸಿರುವ ಅಧಿಕಾರಿಗಳು, 2 ವರ್ಷದಿಂದ ಈಚೆಗೆ ಕೆಲಸಕ್ಕೆ ಸೇರಿರುವ ಪೌರ ಕಾರ್ಮಿಕರನ್ನು ಕೆಲಸದಿಂದ ತೆಗೆಯಲು ಮುಂದಾಗಿದ್ದಾರೆ. ಜತೆಗೆ 1 ವರ್ಷದಿಂದೀಚೆಗೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ವೇತನ ನೀಡಿ ಕೆಲಸದಿಂದ ತೆಗೆಯುವಂತೆ ಆದೇಶಿಸಿರುವುದು ಪೌರಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. 

5 ಲಕ್ಷ ಪರಿಹಾರ, ಉದ್ಯೋಗ ಭರವಸೆ: ವಿಷಯ ತಿಳಿದ ಕೂಡಲೆ ಕೆ.ಸಿ.ಜನರಲ್‌ ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್‌ ಆರ್‌.ಸಂಪತ್‌ರಾಜ್‌, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ, ಐದು ಲಕ್ಷ ರೂ. ಪರಿಹಾರದ ಚೆಕ್‌ ವಿತರಿಸಿದರು. ಜತೆಗೆ ಸುಬ್ರಹ್ಮಣ್ಯ ಅವರ ಪತ್ನಿ ಕವಿತಾ ಅವರಿಗೆ ಉದ್ಯೋಗ ಕಲ್ಪಿಸುವ ಭರವಸೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಮೇಯರ್‌, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ. 

ಇಬ್ಬರು ಅಧಿಕಾರಿಗಳು ಅಮಾನತು: ಸುಬ್ರಹ್ಮಣ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದು, ಪೂರ್ವ ವಲಯದ ಆರೋಗ್ಯಾಧಿಕಾರಿ ಉಮಾಶಂಕರ್‌ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜು ಅಮಾನತುಗೊಂಡಿದ್ದಾರೆ.

ಪೌರಕಾರ್ಮಿಕರಿಗೆ ವೇತನ ನೀಡುವಂತೆ ಹಲವು ಬಾರಿ ಒತ್ತಾಯ ಮಾಡಿದರೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಕ್ರಮಕ್ಕೆ ಮುಂದಾಗಿಲ್ಲ. ಏಳು ತಿಂಗಳಿನಿಂದ ವೇತನ ನೀಡಿದ್ದರೆ ಪೌರಕಾರ್ಮಿಕರು ಜೀವನ ನಡೆಸುವುದು ಹೇಗೆ? ಪೌರಕಾರ್ಮಿಕರ ಹಿತಕಾಯುವಲ್ಲಿ ಆಡಳಿತ ವಿಫ‌ಲವಾಗಿದೆ.
-ಪದ್ಮನಾಭರೆಡ್ಡಿ, ವಿರೋಧ ಪಕ್ಷ ನಾಯಕ 

ತ್ಯಾಜ್ಯ ವಿಲೇವಾರಿಯಲ್ಲಿ ಅಕ್ರಮ ತಡೆಯುತ್ತೇವೆಂದು ಹಲವು ಕ್ರಮಗಳನ್ನು ಕೈಗೊಂಡ ಅಧಿಕಾರಿಗಳು, ಏನು ಅಕ್ರಮ ನಡೆಯುತ್ತಿದೆ ಎಂಬುದನ್ನು ಬಹಿರಂಗಪಡಿಸುವ ಬದಲಿಗೆ, ಅಮಾಯಕ ಪೌರಕಾರ್ಮಿಕರಿಗೆ ವೇತನ ನೀಡಿದೆ ಜೀವ ಕಳೆದುಕೊಳ್ಳುವಂತೆ ಮಾಡಿದ್ದಾರೆ.
-ಬಾಲಸುಬ್ರಹ್ಮಣ್ಯ, ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರ ಸಂಘದ ಪ್ರ.ಕಾರ್ಯದರ್ಶಿ

ಕೇಂದ್ರ ಕಚೇರಿಯಿಂದ ಬಾಕಿ ವೇತನ ಬಿಡುಗಡೆ ಮಾಡಲಾಗಿದೆ. ಅದರಂತೆ ಸುಬ್ರಹ್ಮಣ್ಯನ ವೇತನ ಕೂಡ ಬಿಡುಗಡೆಯಾಗಿದೆ. ಆದರೆ, ಉಪವಲಯ ಮಟ್ಟದ ಅಧಿಕಾರಿಗಳು ಹಣ ಬಿಡುಗಡೆ ಮಾಡಿಲ್ಲ. ಆ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಸುಬ್ರಹ್ಮಣ್ಯ ಆತ್ಮಹತ್ಯೆಗೆ ಬಿಬಿಎಂಪಿಯೇ ಕಾರಣ. ಅನುಕಂಪದ ಆಧಾರದಲ್ಲಿ ಅವರ ಕುಟಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ಜತೆಗೆ ಬಯೋಮೆಟ್ರಿಕ್‌ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಕೂಡಲೇ ಬಾಕಿ ವೇತನ ಬಿಡುಗಡೆ ಮಾಡಬೇಕು.
-ಎಂ.ಸಿ.ಶ್ರೀನಿವಾಸ್‌, ಅಸಂಘಟಿತ ಕಾರ್ಮಿಕರ ಸಹಕಾರ ಸಂಘದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next