ಹುಬ್ಬಳ್ಳಿ: ಸಮರ್ಪಕ ನೀರಾವರಿ ಸೌಲಭ್ಯವಿಲ್ಲದೆ ಕಬ್ಬಿನ ಬೆಳೆ ಮಾಯವಾಗಿ ಅದೇ ಜಾಗದಲ್ಲಿ ಸಜ್ಜೆ, ಗೋವಿನಜೋಳ ಇನ್ನಿತರ ಮಳೆಯಾಶ್ರಿತ ಬೆಳೆಗಳು ಕಾಣಿಸಿಕೊಂಡಿದ್ದವು. ಕಬ್ಬು ಇಲ್ಲದೆ ಇದ್ದ ಸಕ್ಕರೆ ಕಾರ್ಖಾನೆಗಳು ಕಣ್ಣುಮುಚ್ಚುವ ಸ್ಥಿತಿಗೆ ತಲುಪಿದ್ದವು. ಇದೀಗ ಮತ್ತದೇ ನೆಲದಲ್ಲಿ ಕಬ್ಬಿನ ಬೆಳೆ ನಳನಳಿಸುತ್ತಿದೆ. ಅತ್ಯಾಧುನಿಕ ಸಕ್ಕರೆ ಕಾರ್ಖಾನೆಯೊಂದು ರೈತರು ಬೆಳೆ ಕಬ್ಬು ಅರೆಯಲು ಮುಂದಡಿ ಇರಿಸಿದೆ.
ಇದು ಐತಿಹಾಸಿಕ ನೆಲ ಬದಾಮಿ ತಾಲೂಕಿನ ಚಿತ್ರಣ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಇತಿಹಾಸ ಪುಟದಲ್ಲಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಚಾಲುಕ್ಯರ ಆಳ್ವಿಕೆಯೊಂದಿಗೆ ಮಹತ್ವದ ಸಾಂಸ್ಕೃತಿಕ ಕೊಡುಗೆಯನ್ನು ವಿಶ್ವಕ್ಕೆ ನೀಡಿದ್ದು, ಇಂದಿಗೂ ಜಗತ್ತಿನ ಅನೇಕ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಪಕ್ಕದಲ್ಲಿ ಮಲಪ್ರಭಾ ನದಿ ಇದ್ದರೂ ಸಮರ್ಪಕ ನೀರಾವರಿ ಕಾಣದ ತಾಲೂಕು ಇದಾಗಿತ್ತು. ಇದೀಗ ಹೆರಕಲ್ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಪಡೆದಿದ್ದು, ರೈತರು ಮತ್ತೆ ಕಬ್ಬಿನ ಬೆಳೆಗೆ ಮರಳಿದ್ದಾರೆ. ಕಬ್ಬು ಅರೆಯಲು ಸಕ್ಕರೆ, ಸಿಮೆಂಟ್ ಸೇರಿದಂತೆ ವಿವಿಧ ಉದ್ಯಮ ಲೋಕದಲ್ಲಿ ಯಶಸ್ವಿ ಹೆಜ್ಜೆ ಇರಿಸಿರುವ ನಿರಾಣಿ ಸಮೂಹ ಬಾದಾಮಿಯಲ್ಲಿ ಎಂಆರ್‌ಎನ್ ಕೇನ್ ಶುಗರ್ಸ್ ಸಕ್ಕರೆ ಕಾರ್ಖಾನೆ ಆರಂಭಿಸಿದೆ. ಎಂಆರ್‌ಎನ್ ಕೇನ್ ಶುಗರ್ಸ್ ಸಕ್ಕರೆ ಕಾರ್ಖಾನೆ ಕಳೆದ ವರ್ಷವೇ ಪ್ರಾಯೋಗಿಕವಾಗಿ ಕಬ್ಬು ಅರೆಯುವ ಕಾರ್ಯ ಕೈಗೊಂಡಿದ್ದು, ನ.1ರಂದು ಕಾರ್ಖಾನೆ ವಿಧ್ಯುಕ್ತವಾಗಿ ಉದ್ಘಾಟನೆಗೊಂಡು, ರೈತರ ಕಬ್ಬು ಅರೆಯುವುದನ್ನು ಆರಂಭಿಸಲಿದೆ.
ವರವಾದ ಹೆರಕಲ್ ಯೋಜನೆ: ತೆರೆದ ಹಾಗೂ ಕೊಳವೆ ಬಾವಿಯಿಂದಲೇ ನೀರಾವರಿ ಸೌಲಭ್ಯ ಹೊಂದಿದ್ದ, ಬಹುತೇಕ ಭೂಮಿ ಮಳೆಯಾಶ್ರಿತವಾಗಿದ್ದ ಬಾದಾಮಿ ತಾಲೂಕಿಗೆ ನೀರಾವರಿ ಸೌಲಭ್ಯ ಹಾಗೂ ಕೆರೆಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಹೆರಕಲ್ ಏತ ನೀರಾವರಿ ಯೋಜನೆ ವರವಾಗಿ ಪರಿಣಮಿಸಿದೆ. ಶಾಸಕ ಮುರುಗೇಶ ನಿರಾಣಿ ಪ್ರಯತ್ನದ ಫಲವಾಗಿ ಯುಕೆಪಿ ಹಂತ-3ರ ಅಡಿಯಲ್ಲಿ ಕೃಷ್ಣಾ ನದಿಯ ಸುಮಾರು 3.66 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು ಅಂದಾಜು 15,334 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಹಾಗೂ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದೊಂದಿಗೆ ಹೆರಕಲ್ ಜಲಾಶಯ ಯೋಜನೆ ಆರಂಭಗೊಂಡಿತ್ತು.
ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 2.40 ಟಿಎಂಸಿ ಅಡಿ ನೀರು ಬಳಸಿಕೊಂಡು ನೀರಾವರಿ ಸೌಲಭ್ಯ ಹಾಗೂ ಬಾದಾಮಿ ತಾಲೂಕಿನ ಸುಮಾರು 8 ಕೆರೆಗಳಿಗೆ ನೀರುತುಂಬಿಸುವ ಕಾರ್ಯ ನಡೆಯುತ್ತಿದೆ. ಹೆರಕಲ್ ಏತನೀರಾವರಿ ಯೋಜನೆ ಎರಡನೇ ಹಂತದ ಕಾಮಗಾರಿಗೆ ಮುಂದಡಿ ಇರಿಸಲಾಗಿದೆ. ಹೆರಕಲ್ ದಕ್ಷಿಣ ವಿಸ್ತರಣೆ ಏತ ನೀರಾವರಿ ಯೋಜನೆಯನ್ನು ಅಂದಾಜು 107.26ಕೋಟಿ ರೂ.ವೆಚ್ಚದಲ್ಲಿ 1.13 ಟಿಎಂಸಿ ಅಡಿ ನೀರುಬಳಸಿಕೊಳ್ಳಲಾಗುತ್ತಿದೆ. ಕಲಾದಗಿ ಸಮೀಪ ಘಟಪ್ರಭಾ ನದಿ ನೀರನ್ನು ಲಿಫ್ಟ್ ಮಾಡುವ ಮೂಲಕ ಸುಮಾರು 18.90 ಕಿಮೀ ದೂರದ ಕಾಲುವೆ ಮೂಲಕ ಕೈನಕಟ್ಟಿ ಗ್ರಾಮದವರೆಗೆತೆಗೆದುಕೊಂಡು ಹೋಗಲಾಗುತ್ತದೆ. ಹೈದರಾಬಾದ್ ಮೂಲಕ ಕೊಯಾ ಆ್ಯಂಡ್ ಕಂಪನಿ ಕನ್‌ಸ್ಟ್ರಕ್ಷನ್‌ಗೆ ಗುತ್ತಿಗೆ ನೀಡಲಾಗಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಕ್ಕೆ ಕಾಲಮಿತಿ ನೀಡಲಾಗಿದೆ.
ಅತ್ಯಾಧುನಿಕ ಸಕ್ಕರೆ ಕಾರ್ಖಾನೆ: ಬಾದಾಮಿ ತಾಲೂಕಿಗೆ ನೀರಾವರಿ ಸೌಲಭ್ಯ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೆ ಅಲ್ಲದೆ, ನಿರಾಣಿ ಸಮೂಹ ಸಂಸ್ಥೆ ಚೇರ್ಮನ್ ಮುರುಗೇಶ ನಿರಾಣಿ ಬಾದಾಮಿ ತಾಲೂಕಿನ ಕರ್ಲಾಪುರದಲ್ಲಿ ಎಂಆರ್‌ಎನ್ ಕೇನ್ ಶುಗರ್ಸ್ ಆರಂಭಿಸಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳ ಸಕ್ಕರೆ ಕಾರ್ಖಾನೆ ಇದಾಗಿದೆ. ಎಂಆರ್‌ಎನ್ ಕೇನ್ ಶುಗರ್ಸ್ ವಾರ್ಷಿಕ 6 ಸಾವಿರ ಟನ್ ಸಕ್ಕರೆ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, 2 ಲಕ್ಷ ಲೀಟರ್ ಇಥೆನಾಲ್ ಉತ್ಪಾದಿಸಲಿದೆ. ಪ್ರಧಾನಿ ಮೋದಿ ಪರಿಕಲ್ಪನೆಯಂತೆ ರೈತರಿಗೆ ಹೆಚ್ಚು ಲಾಭ ತರುವ ನಿಟ್ಟಿನಲ್ಲಿ ಕಬ್ಬಿನ ಹಾಲಿನಿಂದಲೇ ನೇರವಾಗಿ ಇಥೆನಾಲ್ ಉತ್ಪಾದನೆ ತಂತ್ರಜ್ಞಾನವನ್ನು ಇದು ಹೊಂದಿದ್ದು, ಸುಮಾರು 35 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತದೆ. ಸುಮಾರು 6 ಸಾವಿರ ಕಬ್ಬು ಬೆಳೆಯುವ ಕುಟುಂಬಗಳು ಕಾರ್ಖಾನೆ ವ್ಯಾಪ್ತಿಯಲ್ಲಿದ್ದು, ವಿಶೇಷವಾಗಿ ಸಣ್ಣ ಹಿಡುವಳಿದಾರ ರೈತರಿಗೆ ಅನುಕೂಲವಾಗುತ್ತಿದೆ. 1,000 ಜನರಿಗೆ ಉದ್ಯೋಗ ನೀಡಲಾಗಿದೆ. 400 ಟ್ರ್ಯಾಕ್ಟರ್‌ಗಳುಕಾರ್ಖಾನೆ ಕೆಲಸಕ್ಕೆ ಬಳಕೆಯಾಗುತ್ತಿವೆ.
-ಅಮರೇಗೌಡ ಗೋನವಾರ