Advertisement

ಸಜ್ಜೆಯಿಂದ ಸಿಹಿ ಬಾಳು 

08:15 AM Feb 19, 2018 | |

ದಿನದ ಒಂದು ಹೊತ್ತು ಸಜ್ಜೆಯಿಂದ ತಯಾರಿಸಿದ ದೋಸೆ ರೊಟ್ಟಿಯೇ ಇವರ ಆಹಾರ. ಸಜ್ಜೆ ಉಂಡ ಕಾರಣ ಈವರೆಗೆ ಅವರಿಗೆ ಒಂದೇ ಒಂದು ಕಾಯಿಲೆಯೂ ಬಂದಿಲ್ಲ. ನೀರಾವರಿಯ ಸಮಸ್ಯೆಯಿರುವ ಅಲ್ಲಿನ ಒಣಭೂಮಿಯಲ್ಲಿ ಕಬ್ಬು, ಈರುಳ್ಳಿ, ಶೇಂಗಾ ಮುಂತಾದ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ ಎಂದು ಗೊತ್ತಾದಾಗ  ಇವರ ಪೂರ್ವಜರು ಸಿರಿಧಾನ್ಯಗಳನ್ನು ಬೆಳೆಯಲು ಮುಂದಾದರಂತೆ. 

Advertisement

ಸವದತ್ತಿ ತಾಲೂಕಿನ ಯರಗಟ್ಟಿ ಸತ್ತಿಗೇರಿಯ ದೊಂಡಪ್ಪ ಬಾಳಪ್ಪ ಅಜ್ಜನ್ನನವರ್‌, ಒಂದೂವರೆ ಎಕರೆಯಲ್ಲಿ ಸಜ್ಜೆ ಬೆಳೆದು, ಬಳಸುವ ಜೊತೆ ಉಳಿಕೆಯಾಗುವ ನಾಲ್ಕು ಕ್ವಿಂಟಾಲ್‌ ಧಾನ್ಯವನ್ನು ಮಾರಾಟ ಮಾಡುತ್ತಾರೆ. ಮಳೆಗಾಲದ ಪೂರ್ವ ಅಂದರೆ ಮೇ, ಜೂನ್‌ ತಿಂಗಳಲ್ಲಿ ಬಿತ್ತನೆ ಕೆಲಸ ಆರಂಭವಾಗುತ್ತದೆ. ಒಂದೂವರೆ ಎಕರೆಗೆ ಒಂದುವರೆ ಕೆ.ಜಿ. ಬಿತ್ತನೆ ಬೀಜ ಬೇಕು. ಸಜ್ಜೆ ಬೀಜಕ್ಕೆ ಕೆ.ಜಿ.ಗೆ  100.00 ರೂಪಾಯಿ.  ಇವರು ಹಿಂದಿನ ವರ್ಷ ಬೆಳೆದದ್ದನ್ನು ಜೋಪಾನವಾಗಿರಿಸಿ ಉಪಯೋಗಿಸುತ್ತಾರೆ. ಇತರ ಬೆಳೆಗಳಿಗೆ ಹೋಲಿಸಿದರೆ ಇದು ಶೂನ್ಯ ಬಂಡವಾಳದಲ್ಲಿ ನಿರ್ವಹಣೆಯಿಲ್ಲದೆ, ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದಾದ ಸುಲಭ ಬೆಳೆ. ವರ್ಷದಲ್ಲಿ ಒಂದು ಬಾರಿ ಮಾತ್ರ ಉತ್ತಮ ಇಳುವರಿ ಪಡೆಯಬಹುದು. ನೀರಾವರಿ ವ್ಯವಸ್ಥೆಯಿದೆಯೆಂದುಕೊಂಡು ಎರಡನೆ ಬೆಳೆ ಬಿತ್ತಿದರೆ ಅದರಿಂದ ಹೆಚ್ಚಿನ ಇಳುವರಿ ನಿರೀಕ್ಷಿಸುವಂತಿಲ್ಲ. 

 ಸಾಲು ತೆಗೆದು ಬಿತ್ತುವ ವಿಧಾನವನ್ನು ಇವರು ಅನುಸರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಬಿತ್ತಿದ ಮೊದಲ ವಾರದಲ್ಲಿ ಮಳೆ ಬರುತ್ತಿರುವುದರಿಂದ ಪ್ರತ್ಯೇಕವಾಗಿ ನೀರುಹಾಯಿಸುವ ಕೆಲಸ ಇವರಿಗಿಲ್ಲ. ಎಂಟು ದಿನಗಳಲ್ಲಿ ಮೊಳಕೆ ಬರುತ್ತದೆ. ಇಪ್ಪತ್ತು ದಿನಕ್ಕೊಂದು ಬಾರಿಯಂತೆ ಎರಡು ಸಲ ಎಡೆಯೊಡೆಯುತ್ತಾರೆ. ಮೂರು ತಿಂಗಳಲ್ಲಿ ತೆನೆ ಬಂದು ನಾಲ್ಕನೆ ತಿಂಗಳ ಕೊನೆಗೆ ಬೆಳೆ ಕಟಾವಿಗೆ ಸಿದ್ಧಗೊಳ್ಳುತ್ತದೆ. ಕಳೆದ ವರ್ಷ ಆರು ಕ್ವಿಂಟಾಲ್‌ ಸಜ್ಜೆ ಕೈ ಸೇರಿದೆ. ಕ್ವಿಂಟಾಲ್‌ಗೆ ರೂ. 3000 ರೂ. ನಂತೆ ಮನೆಗೆ ಬಂದು ಖರೀದಿಸುತ್ತಾರೆ. 

   ಆಗಾಗ ಗೊಬ್ಬರ ನೀಡುವ, ಕಳೆ ತೆಗೆಯುವ, ನೀರುಹಾಯಿಸುವ, ಔಷಧ ಸಿಂಪಡಿಸುವ ಕೆಲಸಗಳು ಇಲ್ಲಿಲ್ಲ. ಸಾವಯವದಲ್ಲಿ ಬೆಳೆಯುತ್ತಿರುವುದರಿಂದ ಈವರೆಗೆ ಬೆಳೆಗೆ ರೋಗಗಳು ಬಾಧಿಸಲಿಲ್ಲವಂತೆ. ತೆನೆ ಮುರಿದು ನಂತರ ಒಂದು ತಿಂಗಳುಗಳ ಕಾಲ ಬೈಹುಲ್ಲಿನ ರಾಶಿ ಕಟ್ಟಿದಂತೆ ರಾಶಿಯಲ್ಲಿ ಕೂಡಿಟ್ಟು ಬಿಡುತ್ತಾರೆ. ಹೀಗೆ ಇಡುವುದರಿಂದ ಬೀಜ ತೆನೆಯಿಂದ ಸುಲಭವಾಗಿ ಬೇರ್ಪಡುತ್ತದೆ. ಒಂದು ತಿಂಗಳ ನಂತರ ಒಂದು ಬಾರಿ ತೆನೆಗೆ ಕೋಲಿನಿಂದ ಬಡಿದರೆ ಉಳಿದ ಸಜ್ಜೆ ತೆನೆಯಿಂದ ಸುಲಭವಾಗಿ ಬೇರ್ಪಡುತ್ತದೆ. ತೆನೆ ಎತ್ತುಗಳ ನೆಚ್ಚಿನ ಆಹಾರ. ಸಜ್ಜೆಯನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಗೋಣಿ ಚೀಲಕ್ಕೆ ತುಂಬಿಸಿದರೆ ಅಲ್ಲಿಗೆ ಅದರ ಕೆಲಸ ಮುಗಿಯಿತು. ಎಲ್ಲಾ ಕೆಲಸಗಳನ್ನು ಮನೆ ಮಂದಿಯೆ ಮಾಡಿ ಮುಗಿಸುವುದರಿಂದ ಸಜ್ಜೆ ಬೆಳೆಯಲು ತಗಲುವ ಖರ್ಚು ಶೂನ್ಯವೆಂದೇ ಹೇಳಬಹುದು.

 ಸಿರಿಧಾನ್ಯಗಳನ್ನು ಬೆಳೆಯುವ, ಆ ಮೂಲಕ ಒಣ ಭೂಮಿಯನ್ನು ಹಸಿರಾಗಿಸುವ ಪ್ರಯತ್ನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಒಂದು ಬೃಹತ್‌ ಅಭಿಯಾನವಾಗಿ ನಡೆಯುತ್ತಿದೆ. ಈಗಾಗಲೇ ಸಾವಿರಾರು ಎಕರೆಯಲ್ಲಿ ಸಿರಿಧಾನ್ಯ ಬೆಳೆಯಲಾಗಿದ್ದು ಬೆಳೆಗಾರರಿಂದ ಖರೀದಿಸುವ ವ್ಯವಸ್ಥೆಯೂ ಇಲ್ಲಿದೆ. ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆ, ಸಿರಿ ಧಾನ್ಯಗಳಿಂದ ಬಹು ಬಗೆಯ ತಿನಸುಗಳನ್ನು ತಯಾರಿಸುತ್ತಿದೆ.

Advertisement

ಮಾಹಿತಿಗೆ- 7353161257 
 ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next