ಸ್ವೀಡನ್: ಮಹಿಳೆಯೊಬ್ಬಳು ಕಳೆದ 28 ವರ್ಷಗಳಿಂದ ತನ್ನ ಮಗನನ್ನು ಕೋಣೆಯೊಂದರಲ್ಲಿ ಕೂಡಿಹಾಕಿದ ಘಟನೆ ಸ್ಟಾಕ್ ಹೋಮ್ ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ವೇಳೆ ಈ ಮಾಹಿತಿ ಬಹಿರಂಗವಾಗಿದ್ದು, ಈ ಮಹಿಳೆ ತನ್ನ ಮಗ 13 ವರ್ಷವಿದ್ದಾಗಲೇ ಮನೆಯಲ್ಲಿ ಕೂಡಿ ಹಾಕಿದ್ದಳು ಎಂದು ತಿಳಿದುಬಂದಿದೆ. ಇದೀಗ ಮಹಿಳೆಗೆ 71 ವರ್ಷ ಮತ್ತು ಆಕೆಯ ಮಗನಿಗೆ 41 ವರ್ಷವಾಗಿದ್ದು, ಸಂಬಂಧಿಕರೊಬ್ಬರು ಈ ವಿಚಾರವನ್ನು ತಿಳಿದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೋಪಿ ಮಹಿಳೆ, ಮಗನಿಗೆ ದೇಹದ ಹಲವೆಡೆ ಗಾಯಗಳಾಗಿದ್ದರಿಂದ, ಕೋಣೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಸಮಾಜಾಯಿಸಿ ನೀಡಿದ್ದಾಳೆ.
ಇದನ್ನೂ ಓದಿ: ಬಹು ದಿನಗಳ ಬಳಿಕ ಮತ್ತೆ ಬಣ್ಣ ಹಚ್ಚಲಿದ್ದಾರೆ ‘ಸುಪ್ರೀಂ ಹೀರೋ’ ಶಶಿಕುಮಾರ್
ಆದರೇ ಸಂಬಂಧಿಯೊಬ್ಬರು ಆರೋಪಿಯ ಮನೆಗೆ ಭೇಟಿ ನೀಡಿದ್ದ ವೇಳೆ ಈ ವಿಚಾರ ಮುನ್ನೆಲೆಗೆ ಬಂದಿದ್ದು, ಕೋಣೆಯೊಂದರಿಂದ ಅಸಹ್ಯ ವಾಸನೆ ಬರುತ್ತಿದ್ದರಿಂದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನರಳುತ್ತಿದ್ದ ವ್ಯಕ್ತಿಯೊಬ್ಬ ಕಂಡುಬಂದಿದ್ದು ಆತನಿಗೆ ಹಲ್ಲುಗಳಿರಲಿಲ್ಲ. ಮಾತ್ರವಲ್ಲದೆ ಮಾತನಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿ, ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಮಹಿಳೆ ಮಾನಸಿಕ ಅಸ್ವಸ್ಥೆಯೆಂದು ತಿಳಿದುಬಂದಿದ್ದು, ಇದೀಗ ಸ್ಟಾಕ್ ಹೋಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್: ಸ್ಪೇನ್ ಟೆನಿಸಿಗ ಎನ್ರಿಕ್ ಲೋಪೆಝ್ ಪೆರೆಝ್ ಗೆ 8 ವರ್ಷ ನಿಷೇಧ