ಮೈಸೂರು: ರಾಜ ಮನೆತನದವರು ನಡೆಸುವ ನವರಾತ್ರಿ ಉತ್ಸವದ ಪ್ರಮುಖ ಭಾಗವಾಗಿರುವ ಖಾಸಗಿ ದರ್ಬಾರ್‌ಗಾಗಿ ಮಂಗಳವಾರ ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸ್ವರ್ಣ ಸಿಂಹಾಸನ, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಿಸಲಾಯಿತು. ನವರಾತ್ರಿ ಹಿನ್ನೆಲೆಯಲ್ಲಿ ಸೆ.29ರಿಂದ ಅ.8ರವರೆಗೆ ಅರಮನೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿದ್ದು, ಪ್ರತಿ ದಿನ ಸಂಜೆ ಖಾಸಗಿ ದರ್ಬಾರ್ ನಡೆಯಲಿದೆ.
ಪೂಜಾ ಕಾರ್ಯ: ಸಿಂಹಾಸನ ಮತ್ತು ಭದ್ರಾಸನ ಜೋಡಣೆ ಹಿನ್ನೆಲೆಯಲ್ಲಿ ಮಂಗಳವಾರ ಮುಂಜಾನೆಯಿಂದಲೇ ಅರಮನೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಅರಮನೆ ಪುರೋಹಿತರಾದ ಹರಿ ಅವರ ನೇತೃತ್ವದಲ್ಲಿ ಬೆಳಗ್ಗೆ 8.10ಗಂಟೆಯಿಂದ ನವಗ್ರಹ ಹೋಮ, ಗಣಪತಿ ಹೋಮ, ಚಾಮುಂಡಿ ಪೂಜೆ ನೆರವೇರಿಸಿ, ಅಂತಿಮವಾಗಿ ಶಾಂತಿ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಅರಮನೆ ಅಂಗಳದಲ್ಲಿ ವೇದ ಘೋಷ ಮೊಳಗಿತು.
ಶಾಂತಿ ಪೂಜೆ ಮಾಡಿದ ನಂತರ ಬೆಳಗ್ಗೆ 10.45ಕ್ಕೆ ಅರಮನೆಯ ನೆಲಮಾಳಿಗೆಯಲ್ಲಿರುವ ಭದ್ರತಾ ಕೊಠಡಿಯನ್ನು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ತೆರೆಯಲಾಯಿತು. ಬೆಳಗ್ಗೆ 11.23ರೊಳಗೆ ಸಿಂಹಾಸನದ ಜೋಡಣಾ ಕಾರ್ಯ ಆರಂಭಿಸಬೇಕಾದ ಹಿನ್ನೆಲೆಯಲ್ಲಿ ಭದ್ರತಾಕೊಠಡಿಯಲ್ಲಿರಿಸಲಾಗಿದ್ದ ಸಿಂಹಾಸನ ಹಾಗೂ ಭದ್ರಾಸನದ ಬಿಡಿ ಭಾಗಗಳನ್ನು ಪ್ರತ್ಯೇಕಿಸಲಾಯಿತು.
ಶಸ್ತ್ರಸಜ್ಜಿತ ಪೊಲೀಸರ ಕಣ್ಗಾವಲಿನಲ್ಲಿ ಒಂದೊಂದೇ ಬಿಡಿ ಭಾಗವನ್ನು ದರ್ಬಾರ್ ಹಾಲ್‌ಗೆ ತರಲಾಯಿತು. ಸುಮಾರು 13 ಬಿಡಿ ಭಾಗಗಳಾಗಿ ವಿಂಗಡಿಸಲಾಗಿದ್ದ ಸಿಂಹಾಸನವನ್ನು ಜೋಡಿಸಿ, ಪರದೆ ಬಿಡಲಾಯಿತು. ಸಿಂಹಾಸನ ಜೋಡಣೆ ಬಳಿಕ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿಯ ಭದ್ರಾಸನ ಜೋಡಿಸಲಾಯಿತು. ರತ್ನಖಚಿತ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸಿದ ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕನ್ನಡಿ ತೊಟ್ಟಿಗೆ ತೆರಳಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಿದ್ದಾರೆ.
ಈ ಸಂದರ್ಭದಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಅವರು ಯದುವೀರ್ ಅವರ ಪಾದಪೂಜೆ ನೆರವೇರಿಸಲಿದ್ದಾರೆ. ಸಿಂಹಾಸನ ಜೋಡಣೆ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ 1ಗಂಟೆವರೆಗೆ ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಸಿಂಹಾಸನ ಜೋಡಣೆಗೆ ಬರುವ ಸಿಬ್ಬಂದಿಗಳಿಗೆ ಮೊಬೈಲ್ ತೆಗೆದುಕೊಂಡು ಬರದಂತೆ ಸೂಚನೆ ನೀಡಲಾಗಿತ್ತು. ಸಿಸಿ ಕ್ಯಾಮರಾಗಳಿಗೂ ಪರದೆ ಎಳೆಯಲಾಗಿತ್ತು.
ನವರಾತ್ರಿಯ ಮೊದಲ ದಿನವಾದ ಸೆ.29ರಂದು ಸ್ವರ್ಣ ಸಿಂಹಾಸನಕ್ಕೆ ಸಿಂಹಗಳನ್ನು ಜೋಡಿಸಿದ ನಂತರ ಖಾಸಗಿ ದರ್ಬಾರ್ ನಡೆಯುತ್ತದೆ. ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2.30ಗಂಟೆವರೆಗೆ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆಯುಧ ಪೂಜೆ ದಿನವಾದ ಅ.7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2.30ರವರೆಗೆ ಹಾಗೂ ವಿಜಯದಶಮಿ ದಿನವಾದ ಅ.8ರಂದು ದಿನವಿಡೀ ಅರಮನೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.