Advertisement

ಸ್ವರಾಜ್‌ ಇಂಡಿಯಾ ಸಮಿತಿ ತೀರ್ಮಾನಕ್ಕೆ ಬದ್ಧ 

06:56 AM Feb 27, 2019 | Team Udayavani |

ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ವರಾಜ್‌ ಇಂಡಿಯಾ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ, ಬೇಡವೇ ಎಂಬ ಬಗ್ಗೆ ರಾಷ್ಟ್ರೀಯ ಸಮಿತಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ರೈತಸಂಘದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

Advertisement

ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ನಡೆದ ರಾಜ್ಯ ರೈತಸಂಘದ ಸಭೆಯಲ್ಲಿ ಲೋಕಸಭಾ ಚುನಾವಣೆಗೆ ಸ್ವರಾಜ್‌ ಇಂಡಿಯಾ ಪಕ್ಷ ಸ್ಪರ್ಧಿಸುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು. ಮಂಡ್ಯ ಹೊರತುಪಡಿಸಿದಂತೆ ರೈತಸಂಘದ ಉಳಿದ ತಾಲೂಕು ಸಮಿತಿಗಳು ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದವು. 

ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ದೇವನೂರು ಮಹಾದೇವ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಅಭಿರುಚಿ ಗಣೇಶ್‌, ರಾಜ್ಯ ಉಪಾಧ್ಯಕ್ಷ ಬಿ.ಕೃಪಾಕರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿದಂತೆ ಹಲವರು ಜಿಲ್ಲಾ ಸಮಿತಿಯ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ರಾಜ್ಯಸಮಿತಿಯ ಮುಂದಿಟ್ಟು ರಾಷ್ಟ್ರೀಯ ಸಮಿತಿಗೆ ಕಳುಹಿಸಲು ನಿರ್ಧರಿಸಿದರು.

ರಾಷ್ಟ್ರೀಯ ಸಮಿತಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬೆಂಬಲಿಸೋಣ, ಬೇಡ ಎಂದರೆ ಚುನಾವಣೆಯಿಂದ ದೂರು ಉಳಿಯೋಣ, ಯಾರನ್ನೂ ಬೆಂಬಲಿಸದೆ ತಟಸ್ಥವಾಗಿ ಉಳಿಯುವಂತೆ ಸೂಚಿಸದರೆ ಅದಕ್ಕೂ ಬದ್ಧರಾಗೋಣ. ರಾಷ್ಟ್ರೀಯ ಸಮಿತಿ ತೀರ್ಮಾನಕ್ಕೆ ಎಲ್ಲರೂ ತಲೆಬಾಗುವಂತೆ ತಿಳಿಸಿದಾಗ ಎಲ್ಲರೂ ಒಪ್ಪಿಗೆ ಸೂಚಿಸಿದರು.

ಸಭೆಯ ನಿರ್ಧಾರ: ಚುನಾವಣೆಗೆ ಪೂರ್ವ ತಯಾರಿ ಆಗಬೇಕಿತ್ತು. ಆರು ತಿಂಗಳು ಮುನ್ನವೇ ಸ್ವರಾಜ್‌ ಇಂಡಿಯಾ ಪಕ್ಷದ ಅಭ್ಯರ್ಥಿಯನ್ನು ಘೋಷಿಸಿ ಲೋಕಸಭಾ ಕ್ಷೇತ್ರದ ಎಂಟು ತಾಲೂಕುಗಳಿಗೂ ಪರಿಚಯಿಸಿದ್ದರೆ ಪಕ್ಷಕ್ಕೆ ಹೆಚ್ಚಿನ ಬಲ ಬರುತ್ತಿತ್ತು. ಈ ಬಗ್ಗೆ ಪಕ್ಷದ ಮುಖ್ಯಸ್ಥರು ಆಸಕ್ತಿ ತೋರಲಿಲ್ಲ. ಈಗ ಚುನಾವಣೆ ಸಮೀಪಿಸಿರುವಾಗ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಸೂಕ್ತವಲ್ಲ.

Advertisement

ಚುನಾವಣಾ ಸೋಲುಗಳು ಮಾನಸಿಕ ಹಿನ್ನಡೆ ಉಂಟುಮಾಡುತ್ತವೆ. ಹಾಗಾಗಿ ಸ್ಪರ್ಧೆ ಬೇಡ ಎಂದು ಜಿಪಂ ಮಾಜಿ ಸದಸ್ಯ ಎ.ಎಲ್‌.ಕೆಂಪೂಗೌಡ ತಿಳಿಸಿದರು. ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 2 ಕೋಟಿ ರೂ. ಬೇಕು. ದುಡ್ಡಿಲ್ಲದೆ ಚುನಾವಣೆ ನಡೆಸಲಾಗುವುದಿಲ್ಲ. ಪಾಂಡವಪುರದಲ್ಲಿ ಶಕ್ತಿಯುತವಾಗಿ ಬೆಳೆದಿರುವ ಪಕ್ಷದ ಮುಖಂಡರೇ ಚುನಾವಣೆ ಬೇಡ ಎಂದಿದ್ದಾರೆ ಎಂದು ಕೆ.ಆರ್‌.ಪೇಟೆ ತಾಲೂಕು ಅಧ್ಯಕ್ಷ ರಾಜೇಗೌಡ ಹೇಳಿದರು.

ಮದ್ದೂರು ತಾಲೂಕು ಅಧ್ಯಕ್ಷ ಜಿ.ರಾಮಕೃಷ್ಣಯ್ಯ ಮಾತನಾಡಿ, ನಮ್ಮ ತಾಲೂಕು ಸಮಿತಿಯವರು ಚುನಾವಣೆ ಬೇಡ ಎನ್ನುತ್ತಿದ್ದಾರೆ. ಆದರೆ, ಸ್ಪರ್ಧೆ ಬೇಕು ಎನ್ನುವುದು ನನ್ನ ಅಭಿಪ್ರಾಯ. ಚುನಾವಣೆಗಳಲ್ಲಿ ಸೋಲು-ಗೆಲುವು ಬೇರೆ. ಪಾಲ್ಗೊಳ್ಳುವಿಕೆ ಮುಖ್ಯ. ಮುಂದೆ ವಿಧಾನಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾದಾಗ ನಾವು ಸ್ಪರ್ಧಿಸುವಂತಿಲ್ಲ. ಇಲ್ಲವಾದರೆ ನಮಗೆ ಚುನಾವಣೆಯೇ ಬೇಡ ಎಂದು ನಿರ್ಣಯ ಮಾಡಿಬಿಡಿ ಎಂದು ತಿಳಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್‌ ಮಾತನಾಡಿ, ರೈತ ಹೋರಾಟಕ್ಕೆ ರಾಜಕೀಯ ಶಕ್ತಿ ಬೇಕಿದೆ. ರೈತರ ಸಮಸ್ಯೆಗಳು ದಿನೇ ದಿನೆ ಉಲ್ಬಣಿಸುತ್ತಿವೆ. ರೈತರ ಕಡೆ ಯಾರೂ ಗಮನಹರಿಸುತ್ತಿಲ್ಲ. ಅಧಿಕಾರ ಹಿಡಿಯುವುದೇ ರಾಜಕಾರಣಿಗಳ ಮೂಲ ಉದ್ದೇಶವಾಗಿದೆ.

ಭ್ರಷ್ಟ ರಾಜಕೀಯ ಪಕ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದ್ದು, ಅವರ ವಿರುದ್ಧ ಹೋರಾಟ ನಡೆಸದಿದ್ದರೆ ಸಮಸ್ಯೆಗಳನ್ನು ಮುಂದೂಡಿದಂತಾಗುವುದು. ರೈತಸಂಘಕ್ಕೆ ಮೇಲುಕೋಟೆ ಕ್ಷೇತ್ರದಲ್ಲಿ 75 ಸಾವಿರದಷ್ಟು ಮತಗಳು ಹರಿದು ಬಂದಿರುವುದರಿಂದಲೇ ಚಿತ್ರನಟಿ ಸುಮಲತಾ ಬೆಂಬಲ ಕೋರಿ ಬಂದಿದ್ದಾರೆ. ಒಂದೂವರೆ ಲಕ್ಷದಷ್ಟಿದ್ದ ಬಿಜೆಪಿ ಮತಗಳು ಎರಡೂವರೆ ಲಕ್ಷಕ್ಕೆ ಹೆಚ್ಚಿದೆ.

ನಾವು ಚುನಾವಣೆ ಎದುರಿಸದಿದ್ದರೆ ಬಿಜೆಪಿಗೆ ನೆಲೆ ದೊರಕಿಸಿಕೊಟ್ಟಂತಾಗುತ್ತದೆ. ನಮ್ಮ ಶಕ್ತಿ ಉಳಿಸಿಕೊಳ್ಳಲು ಸ್ಪರ್ಧೆ ಬೇಕು ರಾಜಕೀಯ ಶಕ್ತಿ ಉಳಿಸಿಕೊಂಡಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು. ಸಭೆಯಲ್ಲಿ ರೈತಸಂಘದ ಸುನೀತಾ ಪುಟ್ಟಣ್ಣಯ್ಯ, ಬೋರೇಗೌಡ, ಶಂಕರೇಗೌಡ, ಪಿ.ಕೆ.ನಾರಾಯಣಗೌಡ, ಸಿದ್ದೇಗೌಡ, ಜಯರಾಮೇಗೌಡ ಸೇರಿದಂತೆ ರೈತಸಂಘದ ಕಾರ್ಯಕರ್ತರಿದ್ದರು.
 
ರಾಜಕೀಯ ಧ್ವನಿ ಮುಖ್ಯ: ದೇವನೂರು ಮಹಾದೇವ: ಚುನಾವಣೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ರಾಜಕೀಯ ಧ್ವನಿ ಮುಖ್ಯ. ಚುನಾವಣೆ ಸ್ಪರ್ಧೆ ಬಗ್ಗೆ ಒಗ್ಗಟ್ಟಿನ ಧ್ವನಿ ಇರಬೇಕು. ಹಗ್ಗ-ಜಗ್ಗಾಟ ಮಾಡುವುದು ಸರಿಯಲ್ಲ ಎಂದು ಸ್ವರಾಜ್‌ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷೀಯ ಮಂಡಳಿ ಸದಸ್ಯ ದೇವನೂರು ಮಹಾದೇವ ಹೇಳಿದರು.

ಚುನಾವಣೆ ಬೇಡ ಎನ್ನುವುದಾದರೆ ಮೇಲುಕೋಟೆ ಕ್ಷೇತ್ರವನ್ನು ಕಳೆದುಕೊಳ್ಳಲು ರೆಡಿಯಾಗಬೇಕು. ಇಲ್ಲವೇ ರೈತಸಂಘಕ್ಕೆ ರಾಜಕೀಯವೇ ಬೇಡ ಎಂದು ನಿರ್ಧಾರ ಮಾಡಿಬಿಡಿ. ಗೊಂದಲದಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ರೈತ ಮುಖಂಡರಿಗೆ ಸಭೆಯಲ್ಲಿ ತಿಳಿಸಿದರು. ನಮ್ಮ ಓಟ್‌ ಬ್ಯಾಂಕ್‌ನ್ನು ಉಳಿಸಿಕೊಳ್ಳುವುದಕ್ಕೆ ಎಲ್ಲರೂ ಸ್ಪಷ್ಟ ತೀರ್ಮಾನ ಮಾಡಬೇಕು. ಜನರನ್ನು ನಾವು ಹಿಡಿಯಾಗಿ ನೋಡಬೇಕು. ಟ್ರೆಂಡ್‌ ಬಂದಾಗ ಹಿಡಿದುಕೊಳ್ಳಬೇಕು. ಇಲ್ಲದಿದ್ದರೆ ಏನು ಹೋರಾಟ ಮಾಡಿದರೂ ವ್ಯರ್ಥ ಎಂದು ಹೇಳಿದರು.

ನಮಗಿನ್ನೂ ರಾಜಕೀಯ ನಡವಳಿಕೆ ಬಂದಿಲ್ಲ. ಪಕ್ಷದ ನಿರ್ಧಾರಕ್ಕೆ ಬದ್ಧವಾಗಿ ಕೆಲಸ ಮಾಡುವುದು ನಮ್ಮ ಕರ್ತವ್ಯ. ಅದಕ್ಕೆ ಎಲ್ಲರೂ ರೆಡಿಯಾಗಬೇಕು. ಮುಂದಿನ ಎರಡು ತಿಂಗಳಲ್ಲಿ ರಾಜಕೀಯ ಪಕ್ಷದವರು ಏನೇನು ಮಾಡುವರೋ ಗೊತ್ತಿಲ್ಲ. ಆದರೆ, ಮೇಲುಕೋಟೆ ಕ್ಷೇತ್ರವನ್ನು ಜೋಪಾನ ಮಾಡಿಕೊಂಡು ಮುಂದಿನ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗೆ ಸ್ಪರ್ಧೆಗಿಳಿಯುವುದಕ್ಕೆ ವೇದಿಕೆ ಸಿದ್ಧಪಡಿಸಿಕೊಳ್ಳಬೇಕು ಹಾಗೂ ಸ್ವರಾಜ್‌ ಇಂಡಿಯಾ ಪಕ್ಷ ಇದೆ ಎನ್ನುವುದನ್ನು ಜಿಲ್ಲೆಯ ಮನೆ ಮನೆಗೆ ತಲುಪಿಸಬೇಕು ಎಂದು ತಿಳಿಸಿದರು. 
 
ಬಿಜೆಪಿ ಬೆಳವಣಿಗೆಗೆ ಅನುಕೂಲ: ಸ್ವರಾಜ್‌ ಇಂಡಿಯಾ ಪಕ್ಷ ಚುನಾವಣೆಯಿಂದ ದೂರ ಸರಿದಂತೆ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ. ರಾಜಕೀಯದಿಂದ ದೂರ ಉಳಿದರೆ ಎಂದಿಗೂ ಬೆಳವಣಿಗೆ ಸಾಧ್ಯವಿಲ್ಲ ಎಂದು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು. ರಾಜಕೀಯ ಪ್ರವೇಶದಿಂದ ನಮ್ಮ ವಿಚಾರಗಳಿಗೆ ಗಟ್ಟಿತನ ಬರುತ್ತದೆ.

ಈಗ ಚುನಾವಣೆಯನ್ನು ಎದುರಿಸದಿದ್ದರೆ ಮುಂದಿನ ಚುನಾವಣೆಗಳನ್ನು ಎದುರಿಸಲು ಕಷ್ಟವಾಗಲಿದೆ. ಮತದಾರರು, ಕಾರ್ಯಕರ್ತರು ಕೈಬಿಟ್ಟು ಹೋಗುವರು. ಮುಂದೆ ವಿಧಾನಸಭೆ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸಲು ಗಟ್ಟಿತನ ಬೇಕಿದೆ. ಆ ಕಾರಣಕ್ಕೆ ಚುನಾವಣೆ ಅಖಾಡವನ್ನು ಖಾಲಿ ಬಿಡಬಾರದು ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next