Advertisement

ಶಿಷ್ಯರಿಗೆ ಹಸುರು ಪ್ರೀತಿ ಬಿತ್ತಿದ ಸ್ವಾಮೀಜಿ : ಸ್ವರ್ಣವಲ್ಲೀ‌ ಶ್ರೀಗಳ ವೃಕ್ಷ ಮಂತ್ರಾಕ್ಷತೆ

04:15 PM Aug 04, 2022 | Team Udayavani |

ಶಿರಸಿ: ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿಕೊಂಡ ಪರಿಸರ ಪ್ರಿಯ ಸ್ವಾಮೀಜಿ ಎಂದೇ ಹೆಸರಾದ ಸೋಂದಾ‌ ಸ್ವರ್ಣವಲ್ಲೀ‌ ಮಠಾಧೀಶರು‌ ಶಿಷ್ಯರಲ್ಲಿ ಸದ್ದಿಲ್ಲದೆ ಪರಿಸರ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ವನಸ್ಪತಿ ಗಿಡಗಳ‌ ಮಹತ್ವ, ಅವುಗಳ ಸಂರಕ್ಷಣೆಗೆ ಶಿಷ್ಯ, ಭಕ್ತರಲ್ಲಿ ಕೂಡ ಮುತವರ್ಜಿ ವಹಿಸಲು ಸೂಚಿಸುತ್ತಿದ್ದಾರೆ.

Advertisement

ಕೇವಲ‌ ಪ್ರವಚನಗಳಲ್ಲಿ ಮಾತ್ರ ಪರಿಸರ ಉಳಿಸಿ ಎಂದು ಹೇಳದ ಸ್ವತಃ ಗಿಡಗಳನ್ನೂ ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಗಳು ಶಿಷ್ಯರಿಗೆ ಸಸ್ಯ ಪ್ರೀತಿ ನೀಡುತ್ತಿದ್ದಾರೆ. ಪರಿಸರ ‌ಸಂರಕ್ಷಣೆಯ ಯಜ್ಞದ ವಿಸ್ತಾರ ನಡೆಸಿದ್ದಾರೆ.

ಏನಿದು ವೃಕ್ಷ ಮಂತ್ರಾಕ್ಷತೆ?

ಚಾತುರ್ಮಾಸ್ಯ ಸಂಕಲ್ಪದ ಬಳಿಕ ಶ್ರೀಮಠಕ್ಕೆ ಶಿಷ್ಯರು ಅವರವರ ಸೀಮಾ, ಭಾಗಿಯ ಆಧಾರದಲ್ಲಿ ಬಂದು ಪಾದಪೂಜೆ, ಕುಂಕುಮಾರ್ಚನೆ ಹಾಗೂ ಇತರ ಸೇವೆ ಸಲ್ಲಿಸುತ್ತಾರೆ. ಹೀಗೆ ಸೇವೆ ಸಲ್ಲಿಸಿದ ಶಿಷ್ಯರಿಗೆ‌ ಗುರುಗಳು ಪವಿತ್ರ‌ ಸಂದೇಶ ಕೂಡ ನೀಡುತ್ತಾರೆ.

ಸಂದೇಶ ಪಡೆದ ಶಿಷ್ಯರು ಮಂತ್ರಾಕ್ಷತೆ ಪಡೆಯುವಾಗ ಶ್ರೀಗಳು ವೃಕ್ಷ ಮಂತ್ರಾಕ್ಷತೆ ಕೂಡ ನೀಡುತ್ತಾರೆ. ಶಿಷ್ಯರಿಗೆ ಮಂತ್ರಾಕ್ಷತೆಯ ರೂಪದಲ್ಲಿ ನೀಡಲಾದ ಗಿಡವನ್ನು ಬೆಳಸಿ ರಕ್ಷಿಸಲೂ ಶ್ರೀಗಳು ಸೂಚಿಸುತ್ತಾರೆ.

Advertisement

ಇಂದಿನಿಂದಷ್ಟೇ ಅಲ್ಲ
ಸ್ವರ್ಣವಲ್ಲೀ ಪೀಠವೇ ಪರಿಸರ ಸಂರಕ್ಷಣಾ ಪೀಠ. ಹಿಂದಿನ ಯತಿಗಳಾದ ಶ್ರೀ ಸರ್ವಜ್ಞೇಂದ್ರ‌ ಸರಸ್ವತೀ ಶ್ರೀಗಳೂ ಪರಿಸರ ಕಾಳಜಿ ಹೊಂದಿದ್ದರು. 32 ವರ್ಷಗಳ ಹಿಂದೆ ಪೀಠಾರೋಹಣರಾದ ಈಗಿನ ಶ್ರೀಗಂಗಾಧರೇಂದ್ರ‌ ಸರಸ್ವತೀ ಶ್ರೀಗಳಿಗೆ ‘ಹಸುರು’ ಎಂದರೆ ತುಂಬಾ ಕಾಳಜಿ. ಹಸುರು ರಕ್ಷಣೆಯ ಅನೇಕ ಹೋರಾಟಕ್ಕೂ ನೇತೃತ್ವ ನೀಡಿದವರು ಅವರು‌.

ಇಲ್ಲಿ ವೃಕ್ಷಾರೋಪಣ, ಸಸ್ಯ ‌ಲೋಕ ಸೃಷ್ಟಿಯ‌ ಜತೆಗೆ 2006 ರಿಂದ ಶ್ರೀಗಳು ವೃಕ್ಷ ಮಂತ್ರಾಕ್ಷತೆಯನ್ನೂ ನೀಡುತ್ತಿದ್ದಾರೆ. ಪ್ರತೀ ವರ್ಷ ಚಾತುರ್ಮಾಸ್ಯದಲ್ಲಿ ಶಿಷ್ಯರಿಗೆ ಬಿಡದೇ ವನಸ್ಪತಿ ವೃಕ್ಷ ಕೊಟ್ಟು ಹರಸುತ್ತಿದ್ದಾರೆ.

75 ಸಹಸ್ರಕ್ಕೂ ಹೆಚ್ಚು ವಿತರಣೆ!

ಸ್ವರ್ಣವಲ್ಲೀ ಶ್ರೀಗಳು ಚಾತುರ್ಮಾಸ್ಯ ಅವಧಿಯಲ್ಲಿ ಹಾಗೂ ಪೀಠಾರೋಹಣದ 75, 30 ವರ್ಷದ ಕಾಲಘಟ್ಟದಲ್ಲೂ ವೃಕ್ಷಾರೋಪಣವನ್ನು ಅಭಿಯಾನದ ಮಾದರಿಯಲ್ಲಿ ನಡೆಸಲಾಗಿತ್ತು. ಪ್ರತೀ ವರ್ಷದ ಚಾತುರ್ಮಾಸ್ಯದಲ್ಲೂ ಕನಿಷ್ಠ 5 ಸಾವಿರ ವನಸ್ಪತಿ ಗಿಡಗಳನ್ನು ನೀಡಲಾಗುತ್ತದೆ. ಬಸವನಪಾದ, ಅಶೋಕ, ಹಲಸು, ಮಾವು, ರಕ್ತ ಚಂದನ ಸೇರಿದಂತೆ ಒಳ್ಳೊಳ್ಳೆ ಜಾತಿಯ ಸಸಿಗಳನ್ನು ಮಠದ ಸಸ್ಯ‌ಲೋಕದಲ್ಲಿ ಬೆಳಸಿ, ಕಡಿಮೆ‌ ಬಿದ್ದರೆ ಅರಣ್ಯ ಇಲಾಖೆಯಿಂದಲೂ ಪಡೆದು ಮಂತ್ರಾಕ್ಷತೆಯಾಗಿ ನೀಡಲಾಗುತ್ತಿದೆ ಎನ್ನುತ್ತಾರೆ ಸಸ್ಯ ಲೋಕದ ಉಸ್ತುವಾರಿ ಹೊತ್ತ ಮಹಾಬಲೇಶ್ವರ ಗುಮ್ಮಾನಿ.

ಶಿಷ್ಯರಲ್ಲಿ ವನಸ್ಪತಿ ಸಸ್ಯಗಳ ಕುರಿತು ಜಾಗೃತಿ‌ ಮೂಡಿಸಲು ಈ ವೃಕ್ಷ ಮಂತ್ರಾಕ್ಷತೆ ಆರಂಭಿಸಿದ್ದು, ಕೊಟ್ಟ ಸಸಿಯನ್ನು ಶಿಷ್ಯರು ಪ್ರತೀ ವರ್ಷ ನೆಟ್ಟು ಬಳಸುತ್ತಿದ್ದಾರೆ. ಅದೇ‌ ನಮಗೆ ಖುಷಿ.
– ಸ್ವರ್ಣವಲ್ಲೀ ಶ್ರೀ

ಪೀಠವು ಶಿಷ್ಯರಲ್ಲಿ ಇಂತಹ ವೃಕ್ಣ ಮಂತ್ರಾಕ್ಷತೆ ಅಭಿಯಾನ ಮೂಲಕ ಪರಿಸರ ಜಾಗೃತಿ‌ ಮಾಡುತ್ತಿರುವದು ಶ್ರೀಗಳ ಪರಿಸರ ಕಾಳಜಿಯ ಬಿಂಬವೂ ಹೌದು.
– ನಾರಾಯಣ ಹೆಗಡೆ ಗಡೀಕೈ,

ರಾಘವೇಂದ್ರ ಬೆಟ್ಟಕೊಪ್ಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next