ಕುಷ್ಟಗಿ: ಪಟ್ಟಣದ ಹೊರ ವಲಯದ ಸುವರ್ಣ ಚತುಷ್ಪಥ ಹೆದ್ದಾರಿ-50ರ ಅಗ್ನಿಶಾಮಕ ಠಾಣೆಯ ಬಳಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸಜಯ ಮೃತ್ಯುಂಜಯ ಸ್ವಾಮೀಜಿ ಕಾರಿಗೆ ಬೈಕ್ ಡಿಕ್ಕಿಯಾಗಿದ್ದು ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ. ಬೈಕ್ ಸವಾರಿಬ್ಬರಿಗೆ ಗಾಯವಾದ ಘಟನೆ ನಡೆದಿದೆ.
ವಿಜಯಪುರದಿಂದ ದಾವಣಗೆರೆಗೆ ತೆರೆಳುತ್ತಿದ್ದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮಿಗಳ ಕಾರಿಗೆ ಯಲಬುರ್ತಿ ಗ್ರಾಮದ ಬೈಕ್ ಸವಾರ ಏಕಾಏಕಿ ಹೆದ್ದಾರಿ ಕ್ರಾಸ್ ಮಾಡಲು ಯತ್ನಿಸಿದ ಸಂಧರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ವೇಗದಲ್ಲಿದ್ದ ಕಾರು ಚಾಲಕ ಸಮಯ ಪ್ರಜ್ಞೆಯಿಂದ ಬೈಕು ಸವಾರರನ್ನು ಉಳಿಸಲು ಹೋಗಿ ಮುಳ್ಳುಕಂಟಿಗೆ ನುಗ್ಗಿದ್ದು ಕಾರಿನಲ್ಲಿದ್ದ ಸ್ವಾಮೀಜಿ ಪವಾಡ ಸದೃಶ್ಯರಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಬಾಗ ಜಖಂ ಆಗಿದ್ದು ಬೈಕ್ ಸವಾರರಾದ ನಾಗರಾಜ್ ತಟ್ಟಿ, ಶರಣಬಸವ ಗೋಗೇರಿ ಇಬ್ಬರಿಗೂ ಕಾಲು ಮೂಳೆ ಮುರಿದಿವೆ. ಅವರನ್ನು ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಪ್ರಕರಣ ಕುಷ್ಟಗಿ ಪೊಲೀಸ ಠಾಣೆಯಲ್ಲಿ ದಾಖಲಾಗಿದೆ.
ಭೇಟಿ: ಘಟನೆ ಬಳಿಕ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರಗೆ ದಾಖಲಿಸಿದ ಬಳಿಕ, ಸ್ವಾಮೀಜಿಯವರನ್ನ ಮಾಜಿ ಶಾಸಕ ಕೆ.ಶರಣಪ್ಪ ಅವರ ಮನೆಗೆ ಕರೆದುಕೊಂಡು ಬರಲಾಯಿತು. ಈ ವೇಳೆ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಭೇಟಿ ಮಾಡಿ ಶ್ರೀಗಳ ಯೋಗಕ್ಷೇಮ ವಿಚಾರಿಸಿದರು. ಮಾಜಿ ಶಾಸಕ ಕೆ.ಶರಣಪ್ಪ. ಜಿ.ಪಂ. ಸದಸ್ಯ ಕೆ. ಮಹೇಶ ಮತ್ತೀತರಿದ್ದರಿದ್ದರು.