Advertisement

11ರ ದೆಹಲಿ ಚಲೋದಲ್ಲಿ ಪಾಲ್ಗೊಳ್ಳಲು ಸ್ವಾಮೀಜಿ ಕರೆ

11:18 AM Dec 08, 2018 | Team Udayavani |

ಆಳಂದ: ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಡಿ. 11ರಿಂದ ಮೂರು ದಿನಗಳ ಕಾಲ ಕೂಡಲಸಂಗಮ ಪೀಠದ ಮಹಿಳಾ ಜಗದ್ಗುರು ಪೂಜ್ಯ ಮಾತೆ ಮಹಾದೇವಿ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಯಲಿರುವ ಲಿಂಗಾಯತ ಮಹಾರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಾಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಉಸ್ತುರಿ, ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮೀಜಿ ಕರೆ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮ ಮಾನ್ಯತೆಯಿಂದ ಧರ್ಮೀಯರ ಮಕ್ಕಳ ಭವಿಷ್ಯಕ್ಕಾಗಿ, ಸಮಾಜದ ಏಳ್ಗೆಗಾಗಿ ಬಸವಾದಿ ಶರಣರ ತತ್ವ ಮತ್ತು ವಚನ ಸಾಹಿತ್ಯ ಉಳಿವಿಗಾಗಿ, ಜನಾಂಗದ ಭವಿಷ್ಯತ್‌ಗಾಗಿ, ಬಸವಾದಿ ಶರಣರ ಹೋರಾಟಗಳಿಗೆ ಗೌರವ, ಘನತೆ ಸಿಗಬೇಕಾದರೆ ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಟ ಅನಿವಾರ್ಯ ಎಂದು ಹೇಳಿದರು.
 
ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ನೀಡುವ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನದಾಸ ನೇತೃತ್ವದ ತಜ್ಞರ ಸಮಿತಿ ಹಿಂದಿನ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ ಮೇಲೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆದರೂ ಕೇಂದ್ರ ಸರ್ಕಾರವು ಉದ್ದೇಶಪೂರ್ವಕವಾಗಿ ಯಾವುದೇ ಕ್ರಮಕೈಗೊಂಡಿಲ್ಲ. ಇದು ಲಿಂಗಾಯತ ಧರ್ಮೀಯರಿಗೆ ಅನ್ಯಾಯಯ ಮಾಡುತ್ತಿದೆ. ಹೀಗೆ ದಿನದೊಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ಸೈದ್ಧಾಂತಿಕ, ಧಾರ್ಮಿಕ, ತಾತ್ವಿಕ ನೆಲೆಗಟ್ಟಿನ ಮೇಲೆ ಪ್ರತ್ಯೇಕ ಧರ್ಮದ ಹೋರಾಟ ನಡೆಯುತ್ತಿದೆ. ಲಿಂಗಾಯತರನ್ನು ಕೇವಲ ಮತಬ್ಯಾಂಕ್‌ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ. ಲಿಂಗಾಯತರು ಒಂದು ಪಕ್ಷಕ್ಕೆ ಸೀಮಿತರಲ್ಲ. ಧರ್ಮವನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಬಾರದು ಎಂದು ಹೇಳಿದರು.

500 ವರ್ಷಗಳಷ್ಟು ಹಳೆಯ ಸಿಖ್‌ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಕ್ಕಿರಬೇಕಾದರೆ 900 ವರ್ಷಗಳಷ್ಟು ಪುರಾತನವಾದ ಬಸವ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನ ಸಿಗಬೇಕಿರುವುದು ಅತ್ಯವಶ್ಯ. ಪ್ರಸ್ತುತ ನ್ಯಾಯನೂರ್ತಿ ನಾಗಮೋಹನ ದಾಸ ಅವರನ್ನು ಒಳಗೊಂಡ ತಜ್ಞರ ವರದಿ ಕಾನೂನು ಚೌಕಟ್ಟಿನೊಳಗಿದೆ. 

ಇದನ್ನು ರಾಜಕೀಯ ಮಾಡಬಾರದು. ಹಂತ, ಹಂತವಾಗಿ ನಡೆಯುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಾಭಿಮಾನಿಗಳು ಭಾಗವಹಿಸಬೇಕು ಎಂದು ಹೇಳಿದರು. ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಪಿ.ಎಸ್‌. ಮಹಾಗಾಂವಕರ್‌ ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next