Advertisement

 ಸ್ವಾಮಿ, ರಿಟರ್ನ್ ಸಲ್ಲಿಕೆ ವಿಳಂಬವಾದರೆ ಏನಾಗುತ್ತೆ?

06:20 AM Aug 14, 2017 | |

ವಿದ್ಯುತ್ಛಕ್ತಿ, ಫೋನು, ಮೊಬೈಲ್‌, ಇಂಟರ್‌ನೆಟ್‌… ಹೀಗೆ ಅನೇಕ ಬಾಬ್ತುಗಳ ಬಿಲ್‌ಗ‌ಳನ್ನು ನಿಯಮಿತವಾಗಿ ಪಾವತಿ ಮಾಡುವುದು, ಮಾಸಿಕ ಕಂತು ತುಂಬುವುದು ಇವೆಲ್ಲವೂ ಕಾಲಮಿತಿ ಒಳಗಾಗಿ ಆಗಿಂದಾಗ್ಗೆ ಆಗಲೇಬೇಕಾದ ಕೆಲಸಗಳು. ಅವಕ್ಕೆ ಸ್ಟಾಂಡಿಂಗ್‌ ಇನ್‌ಸ್ಟ್ರಕ್ಷನ್‌ ಕೊಡಬಹುದು ಅಥವಾ ಈ.ಸಿ.ಎಸ್‌. ಮೂಲಕ ನಿಗದಿಯಾದ ದಿನ ನಮ್ಮ ಬ್ಯಾಂಕಿನ ಖಾತೆಯಿಂದ ಕಟಾವಣೆ ಆಗುವಂತೆ ವ್ಯವಸ್ಥೆ ಮಾಡಬಹುದು. ಆದರೆ ಇನ್‌ಕಮ್‌ ಟ್ಯಾಕ್ಸಿನ ವಿಚಾರ ಹಾಗಲ್ಲ. ಅದಕ್ಕೆ ವೈಯುಕ್ತಿಕವಾಗಿ ಸಮಯ ವ್ಯಯಿಸಬೇಕು. ಇಲ್ಲವೇ ಅದಕ್ಕೆಂದೇ ಇರುವ ಲೆಕ್ಕಿಗರನ್ನು ನೇಮಿಸಬೇಕು. ಇಂದು ಎಲ್ಲವೂ ಸರಳ ಮತ್ತು ಸುಲಲಿತವಾಗಿರುವ ಕಾರಣ ರಿಟರ್ನ್ ಸಲ್ಲಿಸುವಂತಹ ಕೆಲಸಕ್ಕೆ ಬಹುತೇಕ ಮಂದಿ ಪರಿಣಿತರನ್ನು ನೇಮಕ ಮಾಡಬೇಕಾದ ಅನಿವಾರ್ಯತೆಯೂ ಕಮ್ಮಿಯಾಗಿದೆ.  ನಾವೇ ಇದನ್ನೆಲ್ಲ ಮಾಡಿ ಮುಗಿಸಬಹುದು.  ಎಲ್ಲ ಗೊತ್ತಿದ್ದರೂ ನಾವು ಕಾಲ ತಳ್ಳುತ್ತೇವೆ. ನಾಳೆ ಕಟ್ಟಿದರಾಯ್ತು.  ನಾಡಿದ್ದು ಆ ಕೆಲಸ ಮಾಡಿದ್ರಾಯ್ತು ಎಂದು ದಿನ ದೂಡುತ್ತವೆ. ಆದರೆ ನೋಡನೋಡುತ್ತಿದ್ದಂತೆ ನಿಗದಿತ ದಿನ ಮುಗಿದು ಹೋಗಿರುತ್ತದೆ.  ಈ ಬಾರಿ ವಿತ್ತಮಂತ್ರಾಲಯ ಇನ್‌ ಕಮ್‌ ಟ್ಯಾಕ್ಸ್‌ ರಿಟರ್ನ್ ಸಲ್ಲಿಕೆಗೆ ಇದ್ದ ಕೊನೆ ಗಡುವು ಜುಲೈ-31ನ್ನು ಕೊಂಚ ವಿಸ್ತರಿಸಿ ಆಗಸ್ಟ್‌-5ರ ತನಕ ಕಾಲಾವಕಾಶ ಕೊಟ್ಟಿತ್ತು. ಆದರೆ ಆ ಕಾಲಾವಕಾಶದಲ್ಲೂ ರಿಟರ್ನ್ ಸಲ್ಲಿಕೆ ಮಾಡಲು ಆಗದೇ ಇರುವವರು, ಕೊನೇಕ್ಷಣದಲ್ಲಿ ತಪ್ಪಿಸಿಕೊಂಡವರು ಅನೇಕರು ನಮ್ಮ ಮಧ್ಯೆ ಇದ್ದೇ ಇರುತ್ತಾರೆ.  ಅಂಥವರಿಗೆ ಪರಿಹಾರೋಪಾಯ ಹೇಗೆ? ಇಲ್ಲಿದೆ ಮಾಹಿತಿ. 

Advertisement

1.    ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ತಡವಾಗಿ ಸಲ್ಲಿಸುತ್ತಿರುವುದರಿಂದ ಅದನ್ನು ಸೆಕ್ಷನ್‌ 139(1) ಅಡಿಯಲ್ಲಿ ಸಲ್ಲಿಸುವ ಬದಲಾಗಿ ಸೆಕ್ಷನ್‌ 139(4) ರ ಅಡಿಯಲ್ಲಿ ಸಲ್ಲಿಸಬೇಕಾಗುತ್ತದೆ.  ಅಂದರೆ ಮಾಹಿತಿ ಸಲ್ಲಿಕೆಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳು ಇರುತ್ತವೆ.
2.    ಈ ರೀತಿ ತಡವಾಗಿ ವರಮಾನ ತೆರಿಗೆ ಲೆಕ್ಕ ಸಲ್ಲಿಸುವಾಗ ಕರದಾತನು ತನಗೆ ಅನ್ವಯವಾಗುವ ಸಲ್ಲಿಕೆ ನಮೂನೆ ಯಾವುದು ಎಂಬುದನ್ನು ಖಾತ್ರಿಪಡಿಸಿಕೊಂಡು ನಂತರವೇ ಮುಂದುವರಿಯಬೇಕು.
3.    ಪ್ರಸ್ತುತ ಅಸೆಸೆ¾ಂಟ್‌ ವರುಷಕ್ಕೆ ಸಂಬಂಧಪಟ್ಟಂತೆ ಹೀಗೆ ತಡವಾಗಿ ಸಲ್ಲಿಕೆ ಮಾಡುತ್ತಿರುವ ರಿಟರ್ನ್ ಸಲುವಳಿಗೆ ಕೊನೆಯ ದಿನಾಂಕ: 31-3-2018 ಆಗಿರುತ್ತದೆ.
4.    ಕಳೆದ ಲೆಕ್ಕ ವರುಷಕ್ಕೆ ಸಂಬಂಧಪಟ್ಟಂತೆ ಒಟ್ಟು ವರಮಾನ, ಕಟಾವಣೆಯಾಗಿರುವ ತೆರಿಗೆ, ವ್ಯವಕಲನಕ್ಕೆ ಅರ್ಹವಾಗುವ ಹೂಡಿಕೆ ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡ ನಂತರ ಪಾವತಿಸಬೇಕಾಗುವ ಬಾಕಿ ತೆರಿಗೆ ಇದ್ದಲ್ಲಿ, ಅದಕ್ಕೆ ಮಾಸಿಕ ಶೇ:1ರಂತೆ (ವಿಳಂಬವಾಗಿರುವ ಅವಧಿಗೆ) ದಂಡರೂಪದ ಬಡ್ಡಿಯನ್ನು ಸೇರಿಸಿ ಪಾವತಿ ಮಾಡಬೇಕಾಗುತ್ತದೆ.  ಒಂದುವೇಳೆ ತೆರಿಗೆ ಬಾಕಿ ಇಲ್ಲವೆಂದಾದಲ್ಲಿ ಯಾವುದೇ ದಂಡ ಪಾವತಿ ಇಲ್ಲದೇ ವಿಳಂಬಿತ ಲೆಕ್ಕ ಸಲ್ಲಿಕೆ ಮಾಡಬಹುದು.
5.    ಕಳೆದ ಬಜೆಟ್‌ ಪ್ರಸ್ತಾವನೆಯಲ್ಲಿ ಹಣಕಾಸು ಮಂತ್ರಿಗಳು ಘೋಷಿಸಿರುವಂತೆ, ತಡವಾಗಿ ರಿಟನ್‌ ಸಲ್ಲಿಕೆ ಮಾಡುವ ತೆರಿಗೆದಾರರಿಗೆ ಹತ್ತುಸಾವಿರ ರೂ.ವರೆಗಿನ ದಂಡ ಎಂದು ಹೇಳಿದ್ದರು.  ಗಮನಿಸಬೇಕಾದ ಅಂಶವೆಂದರೆ ಈ ದಂಡ ದಿನಾಂಕ: 1-4-2018ರ ನಂತರ ಜಾರಿಗೆ ಬರಲಿದೆ.  ಅಂದರೆ ಲೆಕ್ಕವರ್ಷ   2016-17ರ ಲೆಕ್ಕ ಸಲ್ಲಿಕೆಗೆ ಇದು ಅನ್ವಯವಾಗುವುದಿಲ್ಲ.
6.    ವರಮಾನ ತೆರಿಗೆ ಕಾಯಿದೆಗೆ ಸರಕಾರವು ಹೊಸತೊಂದು ತಿದ್ದುಪಡಿಯನ್ನು ತಂದಿದ್ದು, ಅದರಂತೆ ಸೆಕ್ಷನ್‌ 234-ಎಫ್ ಸೇರ್ಪಡೆಯಾಗಿದೆ. ಅದರನ್ವಯ ಸೆಕ್ಷನ್‌ 139(1)ರ ಪ್ರಕಾರ ರಿಟರ್ನ್ ಸಲ್ಲಿಸಲು ಯಾರ್ಯಾರು ವಿಳಂಬ ಮಾಡುತ್ತಾರೋ ಅವರಿಗೆ ಹತ್ತುಸಾವಿರ ರೂಪಾಯಿಗಳ ದಂಡ ವಿಧಿಸಲಾಗುತ್ತದೆ. ಆದರೆ ಇದು 1-4-2018ರ ನಂತರದ ವಿಚಾರ.  ಅಲ್ಲಿಯೂ ಕೆಲವು ನಿಬಂಧನೆಗಳಿವೆ. ಅಸೆಸೆ¾ಂಟ್‌ 2018-19ರಲ್ಲಿ ವಿಳಂಬಿತ ರಿಟರ್ನ್ ಸಲ್ಲಿಕೆಯನ್ನು ಕರದಾತನು 31-12-2018ರ ಒಳಗಾಗಿ ಮಾಡಿದಲ್ಲಿ ದಂಡದ ಮೊತ್ತವು ಐದುಸಾವಿರ ಆಗಿರುತ್ತದೆ.  ಅದರ ನಂತರ ಸಲ್ಲಿಕೆಯಾಗುವುದಾದರೆ ದಂಡದ ಮೊತ್ತ ಹತ್ತುಸಾವಿರ ರೂ. ಆಗಿರುತ್ತದೆ. 
7.    ಇನ್ನೂ ಒಂದು ಗಮನಿಸಬೇಕಾದ ಅಂಶವೆಂದರೆ ವಾರ್ಷಿಕ ವರಮಾನ ರೂ, ಐದುಲಕ್ಷದ ಒಳಗಿರುವ ಕರದಾತರಾದರೆ, ಮೇಲೆ ಹೇಳಿದ ದಂಡ ಅನ್ವಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ವಿಧಿಸಲಾಗುವ ದಂಡದ ಗರಿಷ್ಠ ಮಿತಿ ರೂ:1,000 ಆಗಿರುತ್ತದೆ. 
8.    ತಡವಾಗಿ ರಿಟರ್ನ್ ಸಲ್ಲಿಕೆ ಮಾಡುವುದರಿಂದ ಆಗುವ ಇನ್ನೊಂದು ತೊಂದರೆ ಎಂದÃ,ೆ ಕಳೆದ ಸಾಲಿನಲ್ಲಿ ಸಂಭವಿಸಿರ ಬಹುದಾದ ವ್ಯಾಪಾರ ನಷ್ಟವನ್ನು ಸೆಟ್‌ ಆಫ್ ಮಾಡುವ ಅವಕಾಶವನ್ನು ಕರದಾತ ಕಳೆದುಕೊಳ್ಳುತ್ತಾನೆ.
9.    ತಡವಾಗಿ ಸಲ್ಲಿಸಿರುವ ತೆರಿಗೆ ರಿಟರ್ನ್ಅನ್ನು ತಿದ್ದುಪಡಿ ಮಾಡಿ ಪುನಃ ಸಲ್ಲಿಸುವುದಕ್ಕೆ ಅವಕಾಶ ಇರುತ್ತದೆ. ಆದರೆ ಇದು ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತ. ಅದಕ್ಕಿಂತ ಹಳೆಯ ರಿಟರ್ನ್ಗಳ ಫೈಲ್‌ ಮಾಡುವಂತಿಲ್ಲ.
10.  ಭೌತಿಕವಾಗಿ ರಿಟರ್ನ್ ಸಲ್ಲಿಸುವುದು ಹಳೆಯ ಪದ್ಧತಿ. ಇದೀಗ ಆನ್‌ ಲೈನ್‌ ಮೂಲಕ ಈ-ಫೈಲಿಂಗ್‌ ಮಾಡಬಹುದು. ಇದು ಸುಲಭ ಮತ್ತು ಸರಳ. 

– ನಿರಂಜನ

Advertisement

Udayavani is now on Telegram. Click here to join our channel and stay updated with the latest news.

Next