Advertisement

ಬಾಳಿಗೊಂದು ಬೆಳಕು ವಿವೇಕಾನಂದ

06:08 PM Jul 04, 2022 | Team Udayavani |

ದೇಶ ಕಾಲಗಳ ಎಲ್ಲೆಗಳನ್ನು ಮೀರಿ ಕೊಂಡು ಬಹುತೇಕ ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿಕೊಂಡು ಬಾಳಿದ ವಿವೇಕಾನಂದರೆ ನಡೆ ನುಡಿಗಳು ಇಂದಿಗೂ ಪ್ರಸ್ತುತ. ಇಂದು ಅಂದರೆ ಜುಲೈ 04 ವಿವೇಕಾನಂದರೆ ಪುಣ್ಯ ಸ್ಮರಣೆಯ ದಿನ. ದೇಶವನ್ನು ಪ್ರಪಂಚದ ಮುಂದೆ ನಿಲ್ಲಿಸಿದ, ಮನುಷ್ಯ ಕುಲಕ್ಕೆ ಏಕತೆಯ ಶ್ರೇಷ್ಠ ಪಾಠ ಬೋಧಿಸಿದ ವಿವೇಕಾ ನಂದರನ್ನು ಬಾಳಿನುದ್ದಕ್ಕೂ ನೆನೆ ಯುವ, ಅವರ ಆದರ್ಶವನ್ನು ಅಲ್ಪಸ್ವಲ್ಪವಾದರೂ ಅಳವಡಿ ಸೋಣ ಎಂದೆನ್ನುತ್ತಾ ಈ ಲೇಖನ.

Advertisement

ಭಾರತವೆಂದರೆ ಕರಿಯರ ನಾಡು, ಭಾರತವೆಂದರೆ ಅನಾಗರಿಕರ ನಾಡು, ಭಾರತವೆಂದರೆ ಹಾವಾಡಿಗರ ನಾಡು ಎಂದೇ ಅರಿತಿದ್ದ, ಅದನ್ನೇ ಅಪಪ್ರಚಾರ ಪಡಿಸು ತ್ತಿದ್ದ ಪಾಶ್ಚಿಮಾತ್ಯರಿಗೆ ಭಾರತ ದೇಶದ ಸಿರಿ ಸಂಪತ್ತೇನು? ಈ ದೇಶದ ಬೌದ್ಧಿಕತೆಯ ಮಟ್ಟ ಏನು? ಎಂಬಿತ್ಯಾದಿಗಳ ಆಳ ಅರಿವನ್ನು ಪಶ್ಚಿಮದ ಜನರು ಒಪ್ಪುವ ಹಾಗೇ ಉಣಬಡಿಸಿದ ವ್ಯಕ್ತಿ ಯಾರೆಂದು ಪ್ರಶ್ನಿಸಿದರೆ ನಿಸ್ಸಂಶಯ ವಾಗಿ ಸಿಗುವ ಉತ್ತರ ಅದು ಸ್ವಾಮಿ ವಿವೇಕಾನಂದ.

ಸಮುದ್ರೋಲ್ಲಂಘನೆಯನ್ನು ನಿಷೇಧಿಸಿದ್ದ ಸಂಪ್ರದಾ ಯಸ್ಥ ಭಾರತದಲ್ಲಿ ಈ ಕಾರಣದಿಂದಾಗಿ ದೇಶದ ಜ್ಞಾನ ಭಂಡಾರವು ಸಮುದ್ರ ದಾಟಿ ವಿದೇಶಿಯರ ನಾಡಿಗೆ ಹರಿಯುವುದು ಕಠಿನ ಸಾಧ್ಯವೇ ಆಗಿತ್ತು. ಜ್ಞಾನದ ಆಕಾಂಕ್ಷಿಗಳು ಜ್ಞಾನ ದೊರೆಯುವಲ್ಲಿಗೆ ಹೋಗಬೇಕೆ ಹೊರತು ಜ್ಞಾನವೇ ಜನರನ್ನು ಹಡುಕಿಕೊಂಡು ಹೋಗುವುದಲ್ಲ ಎಂಬ ತರ್ಕವೂ ಇದರ ಹಿಂದೆ ಇದ್ದಿರ ಬಹುದೇನೋ. ಪರಿಣಾಮವಾಗಿ ಭಾರತದ ಮೇಲೆ ಬೌದ್ಧಿಕ ಆಕ್ರಮಣ ಸದ್ದಿಲ್ಲದೆ ನಡೆಯಲು ಪ್ರಾರಂಭಿ ಸಿತು. ಈ ದೇಶದ ಶ್ರೇಷ್ಠತೆಯನ್ನು ಗೌಣಗೊಳಿಸಿಕೊಂಡು ಏನೂ ಅರಿಯದ ನಾಡೆಂಬಂತೆ ಚಿತ್ರಿತವಾಗತೊಡಗಿತು. ಇಂತಹ ಸಂದರ್ಭದಲ್ಲಿ ಅದಕ್ಕೆಲ್ಲಾ ಸಡ್ಡು ಹೊಡೆಯುವ ರೀತಿ ಅವಿರ್ಭವಿಸಿದ ಸ್ವಾಮಿ ವಿವೇಕಾನಂದರು ಈ ದೇಶದ ಬೌದ್ಧಿಕ ಸಮೃದ್ಧಿಯನ್ನು ಅಮೆರಿಕ ಸಹಿತ ಹಲವಾರು ದೇಶಗಳಲ್ಲಿ ಯಶಸ್ವಿಯಾಗಿ ಪ್ರಚುರ ಪಡಿಸಿಕೊಂಡು ಭಾರತದ ಆವರೆಗಿನ ಚಿತ್ರಣವನ್ನೇ ಪಾಶ್ಚಿಮಾತ್ಯರ ಮನಸ್ಸಿನಿಂದ ಅಳಿಸಿಬಿಟ್ಟರು. ಬಹುಶಃ ವಿವೇಕಾನಂದರೆಂಬ ದಿವ್ಯಾತ್ಮ ಈ ನೆಲದಲ್ಲಿ ಪವಡಿಸದೇ ಹೋಗಿದ್ದರೆ ಇವತ್ತಿಗೂ ಭಾರತದ ಶ್ರೇಷ್ಠ ಆಧ್ಯಾತ್ಮಿಕತೆಯ ಪರಿಚಯ, ಇಲ್ಲಿನ ವೇದ ವೇದಾಂಗ ಆಯುರ್ವೇದಗಳ ಎತ್ತರ ವಿದೇಶಿ ನೆಲಕ್ಕೆ ಅಷ್ಟಾಗಿ ತಿಳಿಯುತ್ತಿರ ಲಿಲ್ಲವೇನೋ?

ಸ್ವಾಮಿ ವಿವೇಕಾನಂದರ ಬಗ್ಗೆ ನಾವು ತಿಳಿಯಬೇಕಾ ಗಿರುವುದು ಬಹಳಷ್ಟಿದೆ. ಚಿಕಾಗೋದ ಒಂದು ಭಾಷಣ ಕ್ಕಷ್ಟೇ ವಿವೇಕಾನಂದರನ್ನು ಸೀಮಿತಗೊಳಿಸಿ ಅವರನ್ನು ಅಭ್ಯಸಿಸಿದರೆ ಅದು ನಿಜಕ್ಕೂ ನಮಗೇ ನಾವೇ ಮಾಡಿಕೊಳ್ಳುವ ದೊಡ್ಡ ನಷ್ಟ. ವಿವೇಕಾನಂದರೆಂದರೆ ಆಧ್ಯಾತ್ಮಿಕ ನಡೆಯ ಉತ್ತುಂಗಕ್ಕೇರಿದ ಒಂದು ದಿವ್ಯಾತ್ಮ. ವಿವೇಕಾನಂದರೆಂದರೆ ಈ ನೆಲದ ಅಸ್ಮಿತೆಯ, ಈ ನೆಲದ ಶ್ರೇಷ್ಠ ಸನಾತನತೆಯ ಪ್ರತಿಬಿಂಬ. ಅಷ್ಟು ಮಾತ್ರವೇ ಅಲ್ಲದೆ ವಿವೇಕಾನಂದರೆಂದರೆ ಈ ನೆಲದ ಸಂಸ್ಕೃತಿಯ ದೊಡ್ಡ ಆರಾಧಕ. ಭಾರತದ ಮಣ್ಣನ್ನು ಅವರೆಷ್ಟು ಪ್ರೀತಿಸುತ್ತಿದ್ದರೆಂದರೆ ಅಂದು ವಿದೇಶಿ ಪ್ರವಾಸ ಮುಗಿಸಿ ಭಾರತದ ಕರಾವಳಿಗೆ ಬಂದ ತತ್‌ಕ್ಷಣ ಅವರು ಮಾಡಿದ್ದೇನೆಂದರೆ ಕೆಳಕ್ಕೆ ಬಿದ್ದು ಈ ನೆಲಕ್ಕೆ ಹಣೆಯನ್ನೊತ್ತಿ ಗೌರವ ಸಮರ್ಪಿಸಿದ್ದು! ಭಾರತದ ಮಣ್ಣನ್ನು ಮೆಟ್ಟುವುದೇ ಒಂದು ಯೋಗ ಎಂದು ಬಗೆದವರು ಇವರು. ವಿದೇಶಿ ನೆಲದಲ್ಲೂ ಅಷ್ಟೇ ಭಾರತದ ಬಗ್ಗೆ ಯಾರಾದರೂ ಕೊಂಕನ್ನೆತ್ತಿದರೆ ಅಲ್ಲೇ ಖಡಕ್‌ ಉತ್ತರ ನೀಡಿ ಮುಗಿಸುತ್ತಿದ್ದರು!

ಆಧ್ಯಾತ್ಮಿಕವಾಗಿ ಅವರೆಂತಹ ಮೇಲು ಸ್ತರಕ್ಕೆ ಏರಿದ್ದರೆಂದರೆ ಇಚ್ಛಾಬಲದ ಮೂಲಕ ಎಲ್ಲೋ ದೂರದಲ್ಲಿ ನಡೆಯುತ್ತಿದ್ದ ವಿಚಾರಗಳನ್ನು ಕರಾರುವಕ್ಕಾಗಿ ಇಲ್ಲಿ ಗಣಿಸುತ್ತಿದ್ದರು. ಎಲ್ಲೋ ದೂರದ ದ್ವೀಪ ದೇಶವೊಂದರಲ್ಲಿ ನಡೆದ ಭೂಕಂಪವನ್ನು ಕೋಲ್ಕತ್ತಾದ ಬೇಲೂರು ಮಠದಲ್ಲಿ ಕೂತು ಅದೇ ಕ್ಷಣದಲ್ಲಿ ಪವಾಡ ಸದೃಶವೆಂಬಂತೆ ಅರಿತು ರೋದಿಸುತ್ತಿದ್ದರಂತೆ! ಜ್ಞಾನಾಂಕ್ಷಿಯಾಗಿದ್ದ ಇವರು ಸಂದರ್ಭ ಸಿಕ್ಕಾಗೆಲ್ಲಾ ಪುಸ್ತಕ ಓದುತ್ತಾ ಸಮಯ ಕಳೆಯುತ್ತಿದ್ದರು. ದೊಡ್ಡ ದೊಡ್ಡ ಗಾತ್ರದ ಪುಸ್ತಕಗಳನ್ನು ಒಂದು ದಿನದೊಳಗೆ ಓದಿ ಮುಗಿಸಿ ಲೈಬ್ರೆರಿಗೆ ವಾಪಸ್‌ ನೀಡುತ್ತಿದ್ದ ಇವರನ್ನು ಕಂಡ ಲೈಬ್ರೇರಿಯನ್‌ ಇದೇನು ಪುಸ್ತಕವನ್ನು ಶೋಕಿಗಾಗಿ ಕೊಂಡು ಹೋಗುವುದೇ ಎಂದು ಕುಹಕವಾಡಿದಾಗ, “ಇಲ್ಲ ಎಲ್ಲವನ್ನೂ ಓದಿ ಮುಗಿಸಿದ್ದೇನೆ ಸಂಶಯವಿದ್ದರೆ ಪ್ರಶ್ನಿಸಿ’ ಎಂದು ಸವಾಲೆಸೆಯುತ್ತಾರೆ. ಹಾಗೆಯೇ ಆತ ಪರೀಕ್ಷಿಸಿದಾಗ ವಿವೇಕಾನಂದರು ಆ ಪುಸ್ತಕದ ಅದ್ಯಾವ ಪುಟದಲ್ಲಿ ಅದ್ಯಾವ ವಿಚಾರದ ಬಗ್ಗೆ ಹೇಗೆ ಬರೆಯಲಾಗಿದೆ ಎಂಬುದನ್ನು ಸವಿವರವಾಗಿ ಪ್ರತಿಉತ್ತರಿಸಿ ಲೈಬ್ರೇರಿಯನ್‌ ಅನ್ನು ತಬ್ಬಿಬ್ಬುಗೊಳಿಸುತ್ತಾರೆ! ಓದುವುದು ಎಂದರೆ ವಿವೇಕಾನಂದರದ್ದು ಬರೇ ಓದು ಆಗಿರಲಿಲ್ಲ. ಬದಲಾಗಿ ಅದ್ಯಾವ ಪುಠದ ಅದ್ಯಾವ ವಿಚಾರವನ್ನು ಕೇಳಿದರೂ ಕರಾರುವಕ್ಕಾಗಿ ಒಂದಷ್ಟು ಒಕ್ಕಣೆಗಳೊಂದಿಗೆ ಹೇಳುವಷ್ಟು ಆಳವಾಗಿ ನೆನಪಿಟ್ಟುಕೊಳ್ಳುತ್ತಿದ್ದರು. ಇದು ಮಾನವ ಸಹಜವಾದ ಮನಸ್ಸಿಗೆ ಅಸಾಧ್ಯವೇ ಸರಿ.

Advertisement

ಇನ್ನು ಸನಾತನ ಧರ್ಮದ ಬಗೆಗೆ ಅವರಿಗಿದ್ದ ವಿಶ್ವಾಸ, ಗೌರವ ಅಪಾರ. ಭಕ್ತಿ ಯೋಗ, ರಾಜ ಯೋಗ, ಜ್ಞಾನಯೋಗಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದ ಇವರು ದೇವ ಸಾಕ್ಷಾತ್ಕಾರಕ್ಕೆ ಮನುಷ್ಯ ಹೇಗೆ ಬದಲಾಗಬೇಕು ಎಂಬುದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ವಿದೇಶಿ ನೆಲದ ಮತಪಂಥಗಳು ಮುಕ್ತ ಆಲೋಚನೆಗೆ ನಮ್ಮನ್ನು ತೆರೆಸಿಕೊಳ್ಳದೆ ಅದು ಹೇಳಿದ್ದನ್ನೇ ನಂಬಬೇಕು ಎನ್ನುವ ಒತ್ತಾಸೆಗೆ ನಮ್ಮನ್ನು ಗುರಿಪಡಿಸುತ್ತದೆ ಮತ್ತು ಆ ಮೂಲಕ ನಮ್ಮ ಸಂಕುಚಿತತೆಗೆ ಕಾರಣವಾಗುತ್ತದೆ ಎಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು. ಸನಾತನ ಧರ್ಮವೆಂದರೆ ಅದು ಮೂರ್ತಿ ಪೂಜೆ, ಬರೆ ಜಾತಿ ವ್ಯವಸ್ಥೆಯ ಒಂದು ಗುಂಪು ಎಂದೆಲ್ಲಾ ತಿರಸ್ಕರಿಸಲ್ಪಟ್ಟಿದ್ದ ಹಿಂದೂ ಧರ್ಮವನ್ನು ಹೊಸತಾಗಿ ನೋಡುವಂತೆ ಮಾಡಿದ ಕೀರ್ತಿ ಕೂಡ ವಿವೇಕಾನಂದರಿಗೆ ಸಲ್ಲಬೇಕು. ಮೂರ್ತಿ ಪೂಜೆಯೆಂದರೆ ಅದು ಬರೇ ಕಲ್ಲಿನ ಆರಾಧನೆಯಲ್ಲ, ಬದಲಾಗಿ ನಮ್ಮ ಕೇಂದ್ರ ಶಕ್ತಿಯನ್ನು ಉದ್ದೀಪನಗೊಳಿಸುವ ಸಾಧನ, ದೇವರ ಬಗ್ಗೆ ಅರಿವು ಮೂಡಿಸುವ ಪ್ರತಿಬಿಂಬವದು ಎಂದು ವಿದೇಶಿಯರ ಮುಂದೆ ಗಟ್ಟಿಯಾಗಿ ಹೇಳಿದ್ದೇ ಇವರು. ಇವರಿಗೆ ಅನ್ಯ ಮತದ ಮೇಲೆ ದ್ವೇಷವಿರಲಿಲ್ಲ. ಎಲ್ಲೂ ಯಾವ ಧರ್ಮವನ್ನೂ ಕೊಂಕು ತೆಗೆದು ಮಾತನಾಡಿದ್ದಿಲ್ಲ. ಇವರ ಚಿಂತನೆಗಳಿದ್ದದ್ದು, ಕಾಳಜಿಯಿದ್ದದ್ದು ಅದ್ಯಾಕೆ ಅಗಾಧ ಜ್ಞಾನ ಭಂಡಾರವನ್ನು ಹೊಂದಿರುವ ಹಿಂದೂ ಧರ್ಮವನ್ನು ಸಂಕುಚಿತವಾಗಿಸಿ ಮೂಲೆಗುಂಪಾಗಿಸ
ಲಾಗಿದೆ ಈ ವಿಶ್ವದಲ್ಲಿ ಎನ್ನುವುದರ ಬಗ್ಗೆ. ಅಮೆರಿಕದ ನೆಲದ ಮೇಲೆ ನಿಂತು ನೀಡಿದ ಭಾಷಣ ಜಗದ್ವಿಖ್ಯಾತವಾಯಿತು ಎಂದರೆ ಅದಕ್ಕೆ ಕಾರಣ ಅವರು ಈ ನೆಲದ ಸಂಸ್ಕಾರವನ್ನು ಅಲ್ಲಿನ ವೇದಿ ಕೆಯ ಮೇಲೆ ಎತ್ತಿ ಹಿಡಿದಿರು ವುದು. ವಸುದೈವ ಕುಟುಂಬಕಂ ಎನ್ನುವುದರ ಇನ್ನೊಂದು ರೂಪ ವಾದ ಸಹೋದರ-ಸಹೋದರಿ ಯರು ಎಂಬ ಶಬ್ದವನ್ನೇ ಅವರು ಅಲ್ಲಿ ಸಂಭೋದಿಸಿದ್ದು. ತೊಟ್ಟಿದ್ದ ವೇಷ ಪಕೀರನದ್ದಾದರೂ ಅವರು ಅರಿತಿದ್ದ ವಿಚಾರ ಪಂಡಿತ ರದ್ದು ಎಂದೇ ಖ್ಯಾತರಾಗಿ ದ್ದರು ಆ ನೆಲದಲ್ಲಿ.

ಇವರ ಬುದ್ಧಿಮತ್ತೆಯನ್ನು ಕಂಡ ಅಮೆರಿಕದ ಅಂದಿನ ಖ್ಯಾತ ಪೊ›ಫೇಶರ್‌ ಜೋನ್‌ ಹೆನ್ರಿ ವೆಟ್‌ರವರು ವಿವೇಕಾನಂದೆ ಬಗ್ಗೆ ಹೇಳುತ್ತ ‘more learned than all our learned Professor put together’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ವಿವೇಕಾನಂದರಿಗೆ ಇದ್ದ ಧಾರ್ಮಿಕ ಕಾಳಜಿ, ಯೋಗದ ಬಗೆಗೆ ಇದ್ದ ಕಾಳಜಿ ಅಮೋಘವಾದದ್ದು. ಬಡಿ-ಕಡಿ-ಕೊಲ್ಲು ಎನ್ನುವ ಧರ್ಮ ಬೋಧನೆಗಿಂತ ವಿಶ್ವ ಭಾತೃತ್ವವನ್ನು ಬೋಧಿಸುವ ಸನಾತನ ಧರ್ಮವೇ ಶ್ರೇಷ್ಠ ಎನ್ನುವ ಅಭಿಮತ ಇವರದಾಗಿತ್ತು. ಅದೇ ರೀತಿ ತೋರಿಕೆಯ ಧರ್ಮ ಪಾಲನೆಯನ್ನು ಕೂಡ ಅವರು ಕಟುವಾಗಿ ಟೀಕಿಸಿದ್ದರು. ಧರ್ಮದ ವಿಚಾರದಲ್ಲಿ ಢಾಂಬಿಕನಾಗಿರುವುದಕ್ಕಿಂತ ನಾಸ್ತಿಕನಾಗಿರುವುದೇ ಹೆಚ್ಚು ಶ್ರೇಷ್ಠ ಎಂದರು ಇವರು! ಧರ್ಮ ಅಧ್ಯಾತ್ಮದ ವಿಚಾರದಲ್ಲಿ ಯಾರೂ ಯಾವುದನ್ನೂ ಅನುಭವಿಸದೆ ತರ್ಕಿಸಬಾರದು ಎನ್ನುವುದು ಇವರ ಅಭಿಮತವಾಗಿತ್ತು. ಹಿಂದಿನ ಸಂತ ಶ್ರೇಷ್ಠರುಗಳು ಅದ್ಯಾವುದೆಲ್ಲಾ ಗುಹ್ಯಾ ವಿಚಾರಗಳನ್ನು ಅನುಭವಕ್ಕೆ ಪಡೆದಿದ್ದರೋ ಅದೆಲ್ಲವನ್ನೂ ಈ ಕಾಲದಲ್ಲೂ ಪ್ರಯತ್ನಿಸಿದರೆ ಅನುಭವ ವೇದ್ಯಗೊ ಳಿಸಬಹುದು ಎನ್ನುವ ಸ್ಪಷ್ಟ ಸಂದೇಶ ಇವರದ್ದು. ಅಂತಹ ಅನುಭವವನ್ನು ಪಡೆಯಲು ನೆರವಾಗುವ ದೀವಟಿ ಗೆಯೇ ಯೋಗ ಎಂದು ಕರೆಯುತ್ತಾರೆ ವಿವೇಕಾನಂದರು. ಅದ್ಯಾರೋ ಸಂತ ಹೇಳಿದ್ದಾನೆ ಎಂದು ಕಣ್ಣು ಮುಚ್ಚಿ ನಂಬುವುದು ದೊಡ್ಡ ಮೂರ್ಖತನ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ವಿಮೃಶ್ಚೆçವ ದಶೇಷೇಣಃ ಯಥೇಚ್ಚಸಿ ತಥಾ ಕುರು ಎಂಬಂತೆ ನಾವು ಎಂತಹ ಆಳ ವಿಚಾರವಾದರೂ ಸರಿ, ನಮ್ಮ ಬುದ್ಧಿಮಟ್ಟದಲ್ಲಿ ಅರ್ಥೈಸಿ ಕೊಂಡು ಸತ್ಯಾಸತ್ಯಗಳ ಬಗ್ಗೆ ಅನುಭವ ವೇದ್ಯ ಪಡೆಯುತ್ತಾ ವಿಚಾರಗಳನ್ನು ತರ್ಕಿಸಬೇಕು. ಯಾವುದು ಸರಿಯೋ ಅದನ್ನೇ ಅನುಸರಿಸಬೇಕು ಎನ್ನುವುದು ವಿವೇಕಾನಂದರ ಬೋಧನೆಗಳ ಒಟ್ಟು ಸಾರ.

– ಪ್ರಸಾದ್‌ ಕುಮಾರ್‌, ಮಾರ್ನಬೈಲ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next