Advertisement
“ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು’ ಇದು ಕವಿ ಗೋಪಾಲಕೃಷ್ಣ ಅಡಿಗರ ಚಿತ್ತ ಲಹರಿ. ಇದೇ ವೈಚಾರಿಕ ಚಿಂತನೆ ಸ್ವಾಮಿ ವಿವೇಕಾನಂದರ ಬದುಕಿನುದ್ದಕ್ಕೂ ಅವರ ಮಾತು ಮತ್ತು ಬರಹಗಳಲ್ಲಿ ಮಿಂಚುತ್ತಿತ್ತು. “ಇದೀಗ ಉತ್ತಮ ನಾಗು, ಉಪಕಾರಿಯಾಗು’ ಎಂಬ ಅದ್ಭುತ ಅವಳಿ ಶಬ್ಧಗಳು ಸ್ಪುರಿಸುವ ಭಾವ ತರಂಗಗಳು, ಕೊಲಂಬೋದಿಂದ ಆಲ್ಮೋದ ವರೆಗಿನ ಅವರ ಭಾಷಣಗಳಲ್ಲಿ ಪುಟಿಯುತ್ತಿತ್ತು. ಪಶ್ಚಿಮದಲ್ಲೂ ಭಾರತದ ಆಧ್ಯಾತ್ಮಿಕ ಚಿಂತನೆಯ ಔನ್ನತ್ಯವನ್ನು, ಈ ನೆಲದ ಗುರುತ್ವವನ್ನು ಪಸರಿ ಸುವ ಧೀಮಂತಿಕೆಗೆ ಇಡೀ ವಿಶ್ವವೇ ಬೆರಗು ನೋಟದಿಂದ ಸ್ವಾಗತಿಸಿತು; ಗೌರವಿಸಿತು!
Related Articles
Advertisement
ಸ್ವಾಮಿ ವಿವೇಕಾನಂದರು ಬದುಕಿದುದು ಕೇವಲ 39 ವರ್ಷಗಳು! ಆದರೆ ಶ್ರೀ ರಾಮಕೃಷ್ಣ ಪರಮಹಂಸರ ಪದತಲದಲ್ಲಿ ಎಲ್ಲವನ್ನೂ ಸಮರ್ಪಿಸಿ, ಸರ್ವಶಕ್ತಿಯನ್ನೂ ಆರ್ಜಿಸಿಕೊಂಡ ಮಹಾನ್ ವಿಭೂತಿ ಪುರುಷ. ಗಂಗೆಯ ತಟದಲ್ಲಿ, ಬೇಲೂರು ಮಠದಲ್ಲಿ, ಕನ್ಯಾಕುಮಾರಿ ಯಲ್ಲಿ- ಹೀಗೆ ಅವರು ನಡೆದಾಡಿದ ಪಾವನ ತಾಣಗಳಲ್ಲಿ ಸಂಚರಿಸಿದಾಗ ಆಗುವ ಕಂಪನದ ಸ್ವಾನುಭವ ಶಬ್ದಗಳಿಗೆ ನಿಲುಕದಂತಹದು.
ಇದೀಗ ನಮ್ಮ ಮುಂದೆ ಭೌತಿಕವಾಗಿ ಸ್ವಾಮೀ ವಿವೇಕಾನಂದರು ಇಲ್ಲ. ಆದರೆ ಕೋಟಿ ಕೋಟಿ ಯುವಜನರ ಹೃದಯ ವೀಣೆಯನ್ನು ಮೀಟಬಲ್ಲ ಇವರ ಅದ್ಭುತ, ನಿರರ್ಗಳ, ಧೀಮಂತವಾಣಿ ಹಿಂದೂ ಮಹಾಸಾಗರದ ಅಲೆಗಳಂತೆ ಸದಾ ಪುಟಿಯುತ್ತಲೇ ಇದೆ. ಆ ಮಹಾನ್ ಕಾರ್ಯದ ಆಹ್ವಾನವನ್ನು ಕೇಳುವ ಕಿವಿ ಅಂತೆಯೇ ಸಶಕ್ತಿಯ ಪೂರಕ ಯುವ ಸ್ಪಂದನಕ್ಕೆ ಅವರ ಜನ್ಮದಿನ ಪ್ರೇರಕವಾಗಲಿ.
187 ಪೌಂಡು ಮಾತ್ರ! :
“ಮೈ ಬ್ರದರ್ ಆ್ಯಂಡ್ ಸಿಸ್ಟರ್ ಆಫ್ ಅಮೆರಿಕ’ ಎಂದು ಚಿಕಾಗೋದಲ್ಲಿ 1893, ಸೆ.11ರಂದು ಸ್ವಾಮಿ ವಿವೇಕಾನಂದರು ಹೇಳಿದ ಮಾತು ಜಗತ್ ಪ್ರಸಿದ್ದ. ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿಳಿಯುವಾಗ ಕೇವಲ 187 ಪೌಂಡು ಹಣ ಮಾತ್ರ ಹಣ ಹೊಂದಿದ್ದರು. ಅದರಲ್ಲೂ ಶಿಕಾಗೊದಂತಹ ದುಬಾರಿ ನಗರದಲ್ಲಿ ಅದು ನೀರಿನಂತೆ ಕರಗುತ್ತಾ ಹೋಯಿತು. ಇದ್ದುದನ್ನು ಹೊಂದಿಸಿಕೊಳ್ಳಲು ಅವರು ಸಮೀಪದ ಬೋಸ್ಟನ್‌ಗೆ ಕಡಿಮೆ ಖರ್ಚು ಎಂಬ ಕಾರಣಕ್ಕೆ ತೆರಳಿದರು.
ಅಲ್ಲಿ ಯಾವುದೋ ಮುದುಕಿಯ ಮನೆಯಲ್ಲಿ ಆಶ್ರಯ ಪಡೆದರು. ಅಂತಹ ಸಂದರ್ಭದಲ್ಲಿ ಅವರು ಅಳಸಿಂಗ ಪೆರುಮಾಳ್‌ಗೆ ಪತ್ರ ಬರೆದು, ಇಲ್ಲಿ ಹಣವಿಲ್ಲದೇ ಹಸಿವಿನಿಂದ ಒದ್ದಾಡುತ್ತಿದ್ದೇನೆ. ಇಷ್ಟು ದೂರ ಬಂದು ಸುಮ್ಮನೆ ಹಿಂತಿರುಗಲು ನಾನು ಸಿದ್ಧವಿಲ್ಲ. ಇನ್ನೊಂದು ಆರು ತಿಂಗಳು ಇರಲು ಸಾಕಾಗುವಷ್ಟು ಹಣ ಕಳುಹಿಸು. ನಾನಿಲ್ಲಿ ಹಸಿವು, ಚಳಿಯಿಂದ ಸತ್ತರೆ ನನ್ನ ಕೆಲಸವನ್ನು ನೀನು ಮುಂದುವರೆಸು ಎಂದಿದ್ದರು ಆ ಸಂತ. ನೂರಾರು ಸಂಕಟಗಳನ್ನು ಗೆದ್ದು ಸಾಧಕ ವಿವೇಕಾನಂದರಾದರು.
- ಡಾ| ಪಿ.ಅನಂತಕೃಷ್ಣ ಭಟ್, ಮಂಗಳೂರು