Advertisement
ಸ್ವಯಂ ಘೋಷಿತ ದೇವಮಾನವ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳನ್ನು ಜೀವಂತ ಹೂತು ಹಾಕಿದ್ದೇಕೆ?
Related Articles
Advertisement
1982ರಲ್ಲಿ ಬೇಗಂ ಆಫ್ ರಾಮಪುರಕ್ಕೆ ಭೇಟಿ ನೀಡಲು ಅಕ್ಬರ್ ಖಲೀಲಿ ಮತ್ತು ಶಾಕೀರಾ ಭಾರತಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಖಲೀಲಿ ಶ್ರದ್ಧಾನಂದ ಎಂಬ ಯುವಕನನ್ನು ಭೇಟಿಯಾಗಿದ್ದರು. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಶ್ರದ್ಧಾನಂದ ಕುಟುಂಬದ ಹಿಂದಿನ ತಲೆಮಾರು ಬೇಗಂ ಆಫ್ ರಾಮಪುರದಲ್ಲಿ ರಾಜಮನೆತನದ ಲೆಕ್ಕಪತ್ರ ನೋಡಿಕೊಳ್ಳುವ ಜವಾಬ್ದಾರಿ ನಿರ್ವಹಿಸಿದ್ದರು. ಹೀಗೆ ಖಲೀಲಿ, ಶಾಕೀರಾ ದೆಹಲಿಯಲ್ಲಿ ಶ್ರದ್ಧಾನಂದನನ್ನು ಭೇಟಿಯಾಗಿದ್ದಾಗ ತಾನು ಕಾನೂನು ಪದವಿ ಪಡೆದಿದ್ದು, ತನಗೆ ಆಸ್ತಿ ಮತ್ತು ತೆರಿಗೆ ನಿರ್ವಹಣೆ ವಿಚಾರದಲ್ಲಿ ಸ್ವಲ್ಪ ಜ್ಞಾನ ಹೊಂದಿರುವುದಾಗಿ ಬಿಂಬಿಸಿಕೊಂಡಿದ್ದ.
ಶಾಕೀರಾ ತನ್ನ ತಾಯಿ ಗೌಹಾರ್ ನಮಾಜೈ ಮತ್ತು ತನ್ನ ಮದುವೆಯ ಮೂಲಕ ವಂಶಪಾರಂಪರ್ಯವಾಗಿ ಬಂದ ಅಪಾರ ಪ್ರಮಾಣದ ಆಸ್ತಿಯನ್ನು ಹೊಂದಿದ್ದಳು. ಆ ನಿಟ್ಟಿನಲ್ಲಿ ತನ್ನ ಆಸ್ತಿ-ಪಾಸ್ತಿ ನಿರ್ವಹಿಸಲು ಒಬ್ಬ ಸಮರ್ಥ ವ್ಯಕ್ತಿಗಾಗಿ ಹುಡುಕಾಡುತ್ತಿದ್ದರು. ಆಗ ಸಿಕ್ಕ ವ್ಯಕ್ತಿಯೇ ಈ ಶ್ರದ್ಧಾನಂದ. ಕೊನೆಗೂ ಶಾಕೀರಾ ಆಹ್ವಾನದ ಮೇರೆಗೆ ಶ್ರದ್ಧಾನಂದ ಬೆಂಗಳೂರಿಗೆ ಬಂದಿಳಿದುಬಿಟ್ಟಿದ್ದ!
ಆಕೆಯ ಒಂದೇ ಒಂದು ಮಾತು ಶ್ರದ್ಧಾನಂದನ ಅದೃಷ್ಟ ಮತ್ತು ಸಮಯ ಕೈಹಿಡಿದುಬಿಟ್ಟಿತ್ತು. ಅದಕ್ಕೆ ಪೂರಕವಾಗಿ ಇಸ್ಲಾಮಿಕ್ ಕ್ರಾಂತಿಯ ಹಿನ್ನೆಲೆಯಲ್ಲಿ ಖಲೀಲಿ ಅವರನ್ನು ಕರ್ತವ್ಯ ನಿರ್ವಹಿಸಲು ಇರಾನ್ ಗೆ ಕಳುಹಿಸಲಾಗಿತ್ತು. ಇದರಿಂದಾಗಿ ಶಾಕೀರಾ ತನ್ನ ನಾಲ್ಕು ಹೆಣ್ಣು ಮಕ್ಕಳೊಂದಿಗೆ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡುವಂತಾಗಿತ್ತು. ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿರುವ ಶಾಕೀರಾ ಐಶಾರಾಮಿ ಬಂಗಲೆಯ ಒಂದು ಭಾಗದಲ್ಲಿ ಶ್ರದ್ಧಾನಂದ ಕೂಡಾ ವಾಸಿಸತೊಡಗಿದ್ದ.
ಅದೇ ಅವಕಾಶವನ್ನು ಬಳಸಿಕೊಂಡ ಕಿಲಾಡಿ ಶ್ರದ್ಧಾನಂದ ಶಾಕೀರಾಳ ಹೃದಯಕ್ಕೆ ಲಗ್ಗೆ ಇಟ್ಟು ಬಿಟ್ಟಿದ್ದ. ಅದಕ್ಕೆ ಆತ ಉಪಯೋಗಿಸಿದ ಅಸ್ತ್ರ…ನಿನ್ನೆಲ್ಲಾ ಆಸ್ತಿಗೆ ವಾರಿಸುದಾರನಾಗಲು ಒಂದು ಗಂಡು ಮಗು ಬೇಕು ಎಂಬ ದಾಳ ಉರುಳಿಸಿಬಿಟ್ಟಿದ್ದ! ತಾನು ಅಲೌಕಿಕ ಶಕ್ತಿಯನ್ನು ಹೊಂದಿರುವುದಾಗಿ ಹೇಳಿಕೊಂಡಿರುವ ಈತ ಸ್ವಾಮಿ ಶ್ರದ್ಧಾನಂದ ಎಂಬ ಗೌರವದ ಬಿರುದನ್ನೂ ಹೊಂದಿದ್ದ.
ಕೋರ್ಟ್ ದಾಖಲೆಯ ಪ್ರಕಾರ, ಶಾಕೀರಾಳ ಆಸ್ತಿ ವಿವಾದ ಬಗೆಹರಿಸಲು ಶ್ರದ್ಧಾನಂದ ನೆರವು ನೀಡತೊಡಗಿದ್ದ. ಹೀಗೆ ಇಬ್ಬರೂ ಅನ್ಯೋನ್ಯವಾಗತೊಡಗಿದ್ದು, ನಂತರ ದೈಹಿಕ ಸಂಬಂಧವೂ ಬೆಳೆಯಿತು! ಏತನ್ಮಧ್ಯೆ 1985ರಲ್ಲಿ ರಾಜತಾಂತ್ರಿಕರಾಗಿದ್ದ ಖಲೀಲಿ ಇರಾನ್ ನಿಂದ ಭಾರತಕ್ಕೆ ವಾಪಸ್ ಬಂದ ಮೇಲೆ ಶಾಕೀರಾ ಪತಿಗೆ ವಿಚ್ಛೇದನ ಕೊಟ್ಟು ಬಿಟ್ಟಿದ್ದಳು. ಬಳಿಕ 1987ತ ಏಪ್ರಿಲ್ 17ರಂದು ಶ್ರದ್ಧಾನಂದನನ್ನು ವಿವಾಹವಾಗಿದ್ದಳು! ರೋಗಿ ಬಯಸಿದ್ದು ಹಾಲು, ಅನ್ನ ವೈದ್ಯ ಹೇಳಿದ್ದು ಅದನ್ನೇ ಎಂಬ ಗಾದೆಯಂತೆ. 1987ರಲ್ಲಿ ಪತ್ನಿ ಶಾಕೀರಾಳ ಹೆಸರಿನಲ್ಲಿದ್ದ ಎಲ್ಲಾ ಆಸ್ತಿಯ ಪವರ್ ಆಫ್ ಅಟಾರ್ನಿ ಪಡೆದುಕೊಳ್ಳುವಲ್ಲಿ ಶ್ರದ್ಧಾನಂದ ಯಶಸ್ವಿಯಾಗಿಬಿಟ್ಟಿದ್ದ.
ಮತ್ತೊಂದೆಡೆ ಆಕೆ ಮತ್ತು ನಾಲ್ವರು ಹೆಣ್ಣುಮಕ್ಕಳು ತುಂಬಾ ನಿಕಟವಾಗತೊಡಗಿದ್ದರು. ಇದರಿಂದಾಗಿ ಶಾಕೀರಾಳ ಹೆಸರಿನಲ್ಲಿರುವ 600 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಲಪಟಾಯಿಸುವ ತನ್ನ ಸಂಚಿಗೆ ಈ ಹೆಣ್ಣುಮಕ್ಕಳು ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸತೊಡಗಿದ. ಇಬ್ಬರ ನಡುವೆಯೂ ಆಮೂಲಾಗ್ರ ವ್ಯತ್ಯಾಸಗಳಿದ್ದವು, ಶಾಕೀರಾ ಸೌಂದರ್ಯವಿದ್ದಷ್ಟೇ ಅಂತಃಕರಣ ಹೊಂದಿದ್ದ ಮಹಿಳೆಯಾಗಿದ್ದರೆ, ಶ್ರದ್ಧಾನಂದ ಆಕೆಯ ಆಸ್ತಿಯನ್ನು ಲಪಟಾಯಿಸುವ ಸಂಚನ್ನು ಹೆಣೆಯತೊಡಗಿದ್ದ. ಇದರ ಪರಿಣಾಮ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆಎತ್ತತೊಡಗಿತ್ತು. ಅದರ ಮುಂದುವರಿದ ಭಾಗ ಎಂಬಂತೆ 1991ರ ಹೊತ್ತಿಗೆ ಶ್ರದ್ದಾನಂದ ಶಾಕೀರಾಳನ್ನು ಜೀವಂತ ಸಮಾಧಿ ಮಾಡಲು ನಿರ್ಧರಿಸಿಬಿಟ್ಟಿದ್ದ.
ಕೆಲವು ದಿನಗಳ ನಂತರ ಶ್ರದ್ದಾನಂದ 2X7X2 ಅಳತೆಯ ಮರದ ಪೆಟ್ಟಿಗೆಯನ್ನು ತರಿಸಿಬಿಟ್ಟಿದ್ದ. ಮನೆಯಲ್ಲಿರುವ ಕರಕುಶಲ ವಸ್ತು ಮತ್ತು ಚಿನ್ನಾಭರಣ ತುಂಬಿಸಿಡಲು ಮರದ ಪಟ್ಟಿಗೆ ಮಾಡಿಸಿರುವುದಾಗಿ ಶ್ರದ್ದಾನಂದ ನಂಬಿಸಿಬಿಟ್ಟಿದ್ದ. ಶಾಕೀರಾಳ ಬೆಡ್ ರೂಂ ಹಿಂದೆ ಕೆಲಸಗಾರರನ್ನು ಕರೆಯಿಸಿ ದೊಡ್ಡ ಗುಂಡಿ ತೋಡಿಸಿದ್ದ!
1991ರ ಮೇ 28ರಂದು ಶಾಕೀರಾಳ ಬೆಳಗ್ಗಿನ ಟೀಗೆ ನಿದ್ದೆ ಬರುವ ಮಾತ್ರೆ ಹಾಕಿ ಕೊಟ್ಟು ಬಿಟ್ಟಿದ್ದ. ನಿದ್ದೆಯ ಮಂಪರಿನಲ್ಲಿದ್ದ ಶಾಕೀರಾಳನ್ನು ಮರದ ಪೆಟ್ಟಿಗೆಯೊಳಗೆ ಹಾಕಿ ಆಕೆಯ ಬೆಡ್ ರೂಂ ಹಿಂಬದಿಯ ಗುಂಡಿಯಲ್ಲಿ ಜೀವಂತವಾಗಿ ಸಮಾಧಿ ಮಾಡಿಬಿಟ್ಟಿದ್ದ ಶ್ರದ್ಧಾನಂದ!
ಕಥೆ ಕಟ್ಟಿದ್ದ ಸುಳ್ಳುಗಾರ:
ಶಾಕೀರಾ ಮತ್ತು ಖಲೀಲಿ ಎರಡನೇ ಪುತ್ರಿ ಸಭಾ ತನ್ನ ತಾಯಿ ಎಲ್ಲಿ ಎಂದು ವಿಚಾರಿಸತೊಡಗಿದಾಗ ಶ್ರದ್ಧಾನಂದ ಸುಳ್ಳು ಕಥೆ ಹೇಳುತ್ತಿದ್ದ. ಇದರಿಂದ ಬೇಸತ್ತ ಮಗಳು 1992ರ ಜೂನ್ ನಲ್ಲಿ ಬೆಂಗಳೂರು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ತನ್ನ ತಾಯಿ ನಾಪತ್ತೆಯಾಗಿದ್ದಾರೆಂದು ದೂರು ನೀಡಿದ್ದರು.
ಈ ಕೊಲೆ ಪ್ರಕರಣವನ್ನು ಅಶೋಕ್ ನಗರ ಪೊಲೀಸ್ ಠಾಣೆಯ ಅಂದಿನ ಕಾನ್ಸ್ ಟೇಬಲ್ ಆಗಿದ್ದ ವೀರಯ್ಯ ಎಂಬವರು ಭೇದಿಸಿದ್ದರು. ಶಾಕೀರಾ ಅವರ ಮನೆಯಲ್ಲಿ ಕೆಲಸ ಮಾಡಿದ್ದ ಇಬ್ಬರು ಯುವಕರ ಮೂಲಕ ವೀರಯ್ಯ ಮಾಹಿತಿ ಕಲೆ ಹಾಕುವ ಮೂಲಕ ಸ್ವಾಮಿ ಶ್ರದ್ಧಾನಂದನ ಮುಖವಾಡ ಕಳಚಿ ಬೀಳಲು ಕಾರಣವಾಗಿತ್ತು.
ಈ ಪ್ರಕರಣದ ಬಗ್ಗೆ 2000ನೇ ಇಸವಿಯಲ್ಲಿ ಬೆಂಗಳೂರು ಸೆಷನ್ಸ್ ಕೋರ್ಟ್ ಶ್ರದ್ಧಾನಂದನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. 2008ರಲ್ಲಿ ಕರ್ನಾಟಕ ಹೈಕೋರ್ಟ್ ಕೂಡಾ ಶ್ರದ್ಧಾನಂದನ ಮರಣ ದಂಡನೆ ತೀರ್ಪನ್ನು ಎತ್ತಿಹಿಡಿದಿತ್ತು. ಆದರೆ 2008ರಲ್ಲಿ ಸುಪ್ರೀಂಕೋರ್ಟ್ ವಿಸ್ತೃತ ಪೀಠ ಶ್ರದ್ಧಾನಂದನ ಮರಣದಂಡನೆ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿ ಆದೇಶ ನೀಡಿತ್ತು. ಅಂದಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸ್ವಾಮಿ ಶ್ರದ್ಧಾನಂದ (83ವರ್ಷ)ನನ್ನು 2011ರಲ್ಲಿ ಮಧ್ಯಪ್ರದೇಶದ ಭೋಪಾಲ್ ಸೆಂಟ್ರಲ್ ಜೈಲಿಗೆ ವರ್ಗಾಯಿಸಲಾಗಿದೆ. ಕಳೆದ 27 ವರ್ಷಗಳಿಂದ ಜೈಲು ಕಂಬಿ ಎಣಿಸುತ್ತಿರುವ ಶ್ರದ್ಧಾನಂದ ತನ್ನನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸ್ವಾಮಿ ಶ್ರದ್ಧಾನಂದನ ರಿಯಲ್ ಸ್ಟೋರಿ ಮತ್ತೊಮ್ಮೆ ಮುನ್ನೆಲೆಗೆ ಬರುವಂತಾಗಿದೆ….
ನಾಗೇಂದ್ರ ತ್ರಾಸಿ