ಥಾಣೆ: ಘೋಡ್‌ಬಂದರ್‌ರೋಡ್ ಪರಿಸರದ ಸಮಾಜ ಸೇವಕ ಮಾನಿಪಾಡಿ ಪ್ರಶಾಂತ್ ನಾಯಕ್ ಗುರುಸ್ವಾಮಿ ಅವರ ಮುಂದಾಳತ್ವದಲ್ಲಿ ಶ್ರೀ ಸ್ವಾಮಿ ಅಯ್ಯಪ್ಪ ಸೇವಾ ಟ್ರಸ್ಟ್ ಜಿಬಿ ರೋಡ್ ಥಾಣೆ ಇದರ ವಾರ್ಷಿಕ ಅಯ್ಯಪ್ಪ ಮಹಾಪೂಜೆಯು ಡಿ. 10ರಂದು ಥಾಣೆ ಪಶ್ಚಿಮದ ಘೋಡ್‌ಬಂದರ್‌ರೋಡ್ ಆನಂದ ನಗರದ ಮುಚಲಾ ಕಾಲೇಜಿನ ಹಿಂದುಗಡೆಯಿರುವ ಸ್ವಸ್ತಿಕ್ ರೆಸಿಡೆನ್ಸಿ ಎದುರುಗಡೆಯ ಟಿಎಂಸಿ ಮೈದಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 5ರಿಂದ ಶರಣು ಘೋಷ, ಬೆಳಗ್ಗೆ 6ರಿಂದ ಗಣಹೋಮ, ಬೆಳಗ್ಗೆ 7ರಿಂದ ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ 1ರಿಂದ ಸತಾರದ ಪ್ರಭಾಕರ ಗುರುಸ್ವಾಮಿ, ಭಿವಂಡಿಯ ಹರೀಶ್ ಗುರುಸ್ವಾಮಿ ಹಾಗೂ ಶಿಬಿರದ ಸ್ವಾಮಿಗಳ ನೇತೃತ್ವದಲ್ಲಿ ಮಹಾಮಂಗಳಾರತಿ ನಡೆಯಿತು. ಇದೇ ಸಂದರ್ಭದಲ್ಲಿ ಪೂರ್ವಾಹ್ನ 10ರಿಂದ ಮಧ್ಯಾಹ್ನ 12.30ರವರೆಗೆ ಪ್ರಸಿದ್ಧ ಗಾಯಕ ಪುತ್ತೂರು ನರಸಿಂಹ ನಾಯಕ್ ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಮತ್ತು ವಿಶೇಷ ಆಕರ್ಷಣೆಯಾಗಿ ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗದವರಿಂದ ಚೆಂಡೆವಾದನವು ಸಮಿತಿಯ 18ನೇ ವಾರ್ಷಿಕ ಶಬರಿಮಲೆ ಯಾತ್ರೆಯಲ್ಲಿರುವ ಅಶೋಕ್ ಮೂಲ್ಯ ಅವರ ಪ್ರಾಯೋಜಕತ್ವದಲ್ಲಿ ನೆರವೇರಿತು. ಪೂಜಾ ಕಾರ್ಯಕ್ರಮದ ಬಳಿಕ ಉದ್ಯಮಿ, ಘೋಡ್‌ಬಂದರ್‌ರೋಡ್ ಕನ್ನಡ ಅಸೋಸಿಯೇಶನ್‌ನ ಕಾರ್ಯದರ್ಶಿ ಹರೀಶ್ ಡಿ. ಸಾಲ್ಯಾನ್ ಮತ್ತು ಉದ್ಯಮಿ ಲಕ್ಷ್ಮಣ್ ಮಣಿಯಾಣಿ ಅವರ ಪ್ರಾಯೋಜಕತ್ವದಲ್ಲಿ ಮಧ್ಯಾಹ್ನ 1.30ರಿಂದ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕಲಾ ಪೋಷಕ ರವಿ ಕೋಟ್ಯಾನ್ ಪ್ರಾಯೋಜಕತ್ವದಲ್ಲಿ ಸಂಜೆ 5ರಿಂದ ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ ಕೊಂಡದಕುಳಿ ಇದರ ಪ್ರಬುದ್ಧ ಕಲಾವಿದರ ಕೂಡು ವಿಕೆಯಲ್ಲಿ ನಳ ದಮಯಂತಿ ಯಕ್ಷಗಾನ ಪ್ರದರ್ಶನಗೊಂಡಿತು. ಕೊನೆಯಲ್ಲಿಮಹಾಮಂಗಳಾರತಿ, ಅನ್ನ ಸಂತರ್ಪಣೆ ನೆರವೇರಿತು.
ಶ್ರೀ ಅಯ್ಯಪ್ಪ ಸೇವಾ ಟ್ರಸ್ಟ್ ಜಿಬಿರೋಡ್ ಥಾಣೆ ವತಿಯಿಂದ ಸಂಸ್ಥೆಯ ರೂವಾರಿ ಮಾನಿಪಾಡಿ ಪ್ರಶಾಂತ್‌ನಾಯಕ್, ಉದ್ಯಮಿ ಗಳಾದ ಹರೀಶ್ ಡಿ. ಸಾಲ್ಯಾನ್, ಲಕ್ಷ್ಮಣ್ ಮಣಿಯಾಣಿ, ಭೋಜರಾಜ್ ಶೆಟ್ಟಿ, ಸಮಿತಿಯ ಸದಸ್ಯರಾದ ವಿಕ್ರಮಾನಂದ ಶೆಟ್ಟಿ, ಅಶೋಕ್ ಮೂಲ್ಯ, ರವಿ ಕೋಟ್ಯಾನ್, ಮಹೇಶ್ ಕರ್ಕೇರ, ವಸಂತ್ ಸಾಲ್ಯಾನ್, ಶೈಲೇಶ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಸೀತಾರಾಮ್ ಶೆಟ್ಟಿ, ಪರಮೇಶ್ವರ ಪೂಜಾರಿ, ಶ್ರೀನಾಥ್ ಶೆಟ್ಟಿ, ಜಯಚಂದ್ರ ಮೆಂಡನ್, ಸಂದೀಪ್ ಶೆಟ್ಟಿ, ಧೀರಜ್ ಶೆಟ್ಟಿ, ವಜ್ರನಾಥ್ ಕುಂದರ್, ಕರುಣಾಕರ ಶೆಟ್ಟಿ, ಜಯ ದೇವಾಡಿಗ, ಜಯರಾಮ ನಾಯ್ಕ ಮೊದಲಾದವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ವಿವಿಧ ಕನ್ನಡ ಹಾಗೂ ಜಾತೀಯ
ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿವಿಧ ಕ್ಷೇತ್ರಗಳ ಗಣ್ಯರು, ಸ್ಥಳೀಯ ಉದ್ಯಮಿಗಳು,ದಾನಿಗಳು, ತುಳು-
ಕನ್ನಡಿಗರು, ಕಲಾಭಿಮಾನಿಗಳು, ಅನ್ಯ ಭಾಷಿಕ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ಸುಭಾಷ್ ಶಿರಿಯಾ