Advertisement

ಶೋಷಿತ, ನಿರ್ಗತಿಕ ಮಹಿಳೆಯರಿಗೆ “ಸ್ವಾಧಾರ’

12:40 AM May 22, 2022 | Team Udayavani |

ಮಂಗಳೂರು: ದೌರ್ಜನ್ಯಕ್ಕೊಳಗಾದ, ನಿರ್ಗತಿಕ ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಆಶ್ರಯ ಮಾತ್ರವಲ್ಲದೆ ಉತ್ತಮ ಭವಿಷ್ಯಕ್ಕೆ ಆಧಾರವಾಗುವ ವೃತ್ತಿ ಕೌಶಲ ತರಬೇತಿ ಸಹಿತವಾದ “ಸ್ವಾಧಾರ’ ಕೇಂದ್ರ ಮಂಗಳೂರು ಹೊರವಲಯದ ಮುಡಿಪುವಿನಲ್ಲಿ ಆರಂಭಗೊಳ್ಳಲಿದೆ.

Advertisement

ರಾಜ್ಯದಲ್ಲೇ ಪ್ರಥಮವೆನಿಸಿದ ಈ ಸ್ವಾಧಾರ ಗೃಹವು ಕೇಂದ್ರ ಸರಕಾರದ ಎಲ್ಲ ಮಾನದಂಡಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತಿದೆ. ಶೋಷಿತ, ನಿರ್ಗತಿಕ ಮಹಿಳೆಯರು ಬದುಕು ಕಟ್ಟಿಕೊಳ್ಳಲು ನೆರವಾಗುವ ಕೌಶಲಭಿವೃದ್ಧಿ ತರಬೇತಿ ವ್ಯವಸ್ಥೆ ಇಲ್ಲಿನ ವೈಶಿಷ್ಟ್ಯ. ಪ್ರಸ್ತುತ ಮಂಗಳೂರಿನ ಜಪ್ಪಿನಮೊಗರಿನಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು 38 ಮಹಿಳೆಯರು ಆಶ್ರಯ ಪಡೆದುಕೊಂಡಿದ್ದಾರೆ. 50ರಿಂದ 75 ಮಂದಿಗೆ ಅವಕಾಶವಿದೆ.

ತರಬೇತಿಗಾಗಿಯೇ ಪ್ರತ್ಯೇಕ ಸಭಾಂಗಣ ಮೀಸಲಿದ್ದು ಅದಕ್ಕೆ ಸಂಬಂಧಿಸಿದ ಪೂರಕ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಫ್ಯಾಷನ್‌ ಡಿಸೈನಿಂಗ್‌, ಟೈಲರಿಂಗ್‌, ನ್ಯಾಪ್‌ಕಿನ್‌ ತಯಾರಿ ಹಾಗೂ ಕೆಲವು ಗುಡಿ ಕೈಗಾರಿಕೆಗಳ ತರಬೇತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ನೂತನ ಕಟ್ಟಡದ ಪಕ್ಕದಲ್ಲೇ ಇರುವ “ವೊಕೇಶನ್‌ ಸ್ಕಿಲ್‌ ಟ್ರೈನಿಂಗ್‌ ಸೆಂಟರ್‌’ ನಲ್ಲಿ ವಿವಿಧ ತಾಂತ್ರಿಕ ವೃತ್ತಿ, ವಾಹನ ಚಾಲನೆ, ಫ್ಯಾಶನ್‌ ಡಿಸೈನಿಂಗ್‌, ಆ್ಯನಿಮೇಷನ್‌ ಸೇರಿದಂತೆ ವಿವಿಧ ತರಬೇತಿಗಳನ್ನು ನೀಡಲು ಉದ್ದೇಶಿಸಲಾಗಿದೆ.

3 ವರ್ಷದವರೆಗೆ ಆಶ್ರಯ
ಲೈಂಗಿಕ ದೌರ್ಜನ್ಯ, ಕೌಟುಂಬಿಕ ಶೋಷಣೆಗೊಳಗಾದ, ನಿರ್ಗತಿಕರಾದ 18ರಿಂದ 45 ವರ್ಷದೊಳಗಿನ ಮಹಿಳೆ ಯರಿಗೆ ಗರಿಷ್ಠ 3 ವರ್ಷಗಳವರೆಗೆ ಸ್ವಾಧಾರ ಕೇಂದ್ರದಲ್ಲಿ ಉಳಿದುಕೊಳ್ಳಲು ಅವಕಾಶವಿದೆ. ಇಲ್ಲಿ ಅಗತ್ಯವಾದ ಚಿಕಿತ್ಸೆ, ಶಿಕ್ಷಣವನ್ನೂ ನೀಡಲಾಗುತ್ತದೆ. ಕೇಂದ್ರದಲ್ಲಿ ಉಳಿದುಕೊಳ್ಳಲು 5 ಡಾರ್ಮಿಟರಿಗಳಿವೆ. ಟ್ರೈನಿಂಗ್‌ ಹಾಲ್‌, ವೈದ್ಯರ ಕೊಠಡಿ, ಡೆಲಿವರಿ ರೂಮ್‌, ಕೌನ್ಸೆಲಿಂಗ್‌ ಕೊಠಡಿ, ಡೈನಿಂಗ್‌ ಹಾಲ್‌ ಮೊದಲಾದವುಗಳಿವೆ. ದೌರ್ಜನ್ಯಕ್ಕೊಳಗಾದ ಮಹಿಳೆ/ಮಗುವಿನ ಸುರಕ್ಷೆಗೆ ಗರಿಷ್ಠ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ದೌರ್ಜನ್ಯಕ್ಕೊಳಗಾದ ಮತ್ತು ನಿರ್ಗತಿಕ ಮಹಿಳೆಯರಿಗೆ ಆಶ್ರಯ ಒದಗಿಸುವುದರೊಂದಿಗೆ ಹೊಸ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಾದ ಕೌಶಲಭಿವೃದ್ಧಿ ತರಬೇತಿಗೂ ವ್ಯವಸ್ಥೆ ಮಾಡಲಾಗುತ್ತಿದೆ. ನೊಂದ ಮಹಿಳೆಯರಿಗೆ ಗರಿಷ್ಠ ಸೇವೆ ಒದಗಿಸಲು ನೂತನ ಸ್ವಾಧಾರ ಕೇಂದ್ರದಿಂದ ಸಾಧ್ಯವಾಗಲಿದೆ.
– ಪ್ರೊ| ಹಿಲ್ಡಾ ರಾಯಪ್ಪನ್‌, ನಿರ್ದೇಶಕರು,
ಪ್ರಜ್ಞಾ ಕೌನ್ಸೆಲಿಂಗ್‌ ಸೆಂಟರ್‌, ಮಂಗಳೂರು

Advertisement

ಸ್ವಾಧಾರ ಗೃಹದ ನೂತನ ಕಟ್ಟಡ ಎಂಆರ್‌ಪಿಎಲ್‌ ಸಿಎಸ್‌ಆರ್‌ ನಿಧಿಯ ನೆರವಿನೊಂದಿಗೆ ಅಂದಾಜು 2.67 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಎರಡು ತಿಂಗಳೊಳಗೆ ಸೇವೆ ಆರಂಭಿಸುವ ನಿರೀಕ್ಷೆ ಇದೆ. ಇದರ ನಿರ್ವಹಣೆಯನ್ನು ಈಗಾಗಲೇ ಸ್ವಾಧಾರ ಕೇಂದ್ರ ನೋಡಿಕೊಳ್ಳುತ್ತಿರುವ ಪ್ರಜ್ಞಾ ಕೌನ್ಸೆಲಿಂಗ್‌ ಸೆಂಟರ್‌ ಮಾಡಲಿದೆ. – ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ. ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next