Advertisement

ಜಿಲ್ಲೆಯಲ್ಲಿ ಸ್ವಚ್ಛೋತ್ಸವ, ನಿತ್ಯೋತ್ಸವ ಮಾಸಾಚರಣೆ

12:51 PM Oct 02, 2020 | Suhan S |

ಚಾಮರಾಜನಗರ: ಜಿಪಂನ ಸ್ವತ್ಛ ಭಾರತ್‌ ಮಿಷನ್‌ (ಗ್ರಾ) ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಸಮಾರೋಪದ ಗೌರವ ಸೂಚಕವಾಗಿ ಜಿಲ್ಲೆಯ ಪ್ರತಿ ಗ್ರಾಮವನ್ನು ಸ್ವಚ್ಛ, ಸುಂದರ, ಆರೋಗ್ಯಯುತ ಹಾಗೂ ತ್ಯಾಜ್ಯಮುಕ್ತವನ್ನಾಗಿಸಲು ಅಕ್ಟೋಬರ್‌ ತಿಂಗಳನ್ನು ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಯನ್ನಾಗಿ ಹಮ್ಮಿಕೊಳ್ಳಲಾಗಿದೆ.

Advertisement

ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಯನ್ನು ಅ.2 ರಿಂದ 31 ರವರೆಗೆ ನಡೆಸಲಾಗುತ್ತಿದ್ದು ವಿಶೇಷವಾಗಿ ಎಲ್ಲಾ ಗ್ರಾಪಂಗಳಲ್ಲಿ ಸ್ವಚ್ಛ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ.

ಏನಿದು ಸ್ವಚ್ಛ ಸಂಕೀರ್ಣ?: ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ನಿರ್ಮಿಸಲಾಗುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸ್ವತ್ಛ ಸಂಕೀರ್ಣ ವಿನ್ಯಾಸಗೊಳಿಸಲಾಗುವುದು. ಸ್ವಚ್ಛ ಸಂಕೀರ್ಣ ಏಕರೂಪದ ಬಣ್ಣ, ಚಿಹ್ನೆ ಸಂದೇಶ, ವಿನ್ಯಾಸವನ್ನೊಳಗೊಂಡಿರುತ್ತದೆ. ಸ್ವಚ್ಛ ಸಂಕೀರ್ಣವನ್ನು ಘನ ತ್ಯಾಜ್ಯ, ಇ-ತ್ಯಾಜ್ಯ, ಜೈವಿಕ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಸಂಗ್ರಹಿಸಲು, ಸಂಸ್ಕರಿಸಲು ಮೀಸಲಾದ ಪ್ರದೇಶಗಳೊಂದಿಗೆ ಸ್ವಯಂ ಸುಸ್ಥಿರ ವ್ಯವಸ್ಥೆಯನ್ನೊಳಗೊಂಡ ಪರಿಸರ-ಉದ್ಯಾನವನದ ಅನುಭವ ನೀಡುವ ಹಿನ್ನೆಲೆಯಲ್ಲಿ ಎಲ್ಲಾ ಗ್ರಾಪಂನಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ.

ಜಿಲ್ಲೆಯ 130 ಗ್ರಾಪಂಗಳ ಪೈಕಿ 45 ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕೆ ರಾಜ್ಯ ಕಚೇರಿ ವಿಸ್ತೃತ ಯೋಜನೆ ವರದಿ (ಡಿಪಿಆರ್‌) ಅನುಮೋದನೆ ನೀಡಿದೆ. ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಪಂನಲ್ಲಿ ಈಗಾಗಲೇ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸಲಾಗಿದ್ದು, ಅ.3 ರಂದು ತ್ಯಾಜ್ಯ ಘಟಕಕ್ಕೆ ಚಾಲನೆ ನೀಡಲಾಗುತ್ತದೆ. ಜಿಲ್ಲಾ, ತಾಲೂಕು, ಗ್ರಾಪಂಗಳ ಸಹಯೋಗದೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಲು ಕ್ರಮಕೈಗೊಂಡಿದ್ದು, ಜಿಲ್ಲೆಯಾದ್ಯಂತ ಏಕರೂಪದಲ್ಲಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸುವ ಉದ್ದೇಶದಿಂದ ಅ.3 ರಂದು ಘನತ್ಯಾಜ್ಯ ನಿರ್ವಹಣಾ ಘಟಕಗಳ ಏಕರೂಪದ ಬ್ರ್ಯಾಡಿಂಗ್‌ ಅನ್ನು ಲೋಕಾರ್ಪಣೆ ಮಾಡಲಾಗುತ್ತದೆ.

ಪುಣಜನೂರು ಬ್ರ್ಯಾಂಡಿಂಗ್‌ ಲೋಕಾರ್ಪಣೆ: ಪುಣಜನೂರು ಗ್ರಾಪಂನಲ್ಲಿ ಆರಂಭಗೊಂಡಿರುವ ಘನತ್ಯಾಜ್ಯ ನಿರ್ವಹಣಾ ಘಟಕ ಏಕರೂಪದ ಬ್ರ್ಯಾಂಡಿಂಗ್‌ನ ಲೋಕಾರ್ಪಣೆ ಹಾಗೂ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಗೆ ಜಿಲ್ಲಾ ಉಸ್ತುವಾರಿ ಸಚಿವರು ಅ.3 ರಂದು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಯಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ, ತ್ಯಾಜ್ಯ ಸಂಗ್ರಹಣೆ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಸಲುವಾಗಿ ಚರಂಡಿ, ಬೀದಿ, ಶಾಲೆ, ಅಂಗನವಾಡಿ ಶುಚಿಗೊಳಿಸುವ, ಪ್ರೌಢಶಾಲಾ ಮಕ್ಕಳಿಗೆಆನ್‌ಲೈನ್‌ ಮೂಲಕ ಪ್ರಬಂಧ ಸ್ಪರ್ಧೆ, ಕಿರುಚಿತ್ರ ಪ್ರದರ್ಶನ, ತ್ಯಾಜ್ಯ ಮತ್ತು ಶೌಚಾಲಯಗಳ ಬಳಕೆ ಕುರಿತು ಮನೆ ಮನೆ ಭೇಟಿ, ತಿಪ್ಪೆಗುಂಡಿ ನಿರ್ವಹಣೆ, ಹೊಲದಲ್ಲಿನ ಹಸಿಕಸವನ್ನು ಗೊಬ್ಬರವನ್ನಾಗಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Advertisement

ಸಾರ್ವಜನಿಕರ ಸಹಭಾಗಿತ್ವದ ಅಗತ್ಯ: ಈ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಯ ಎಲ್ಲಾ ಚಟುವಟಿಕೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಿದ್ದು, ಆಯಾ ಗ್ರಾಪಂನೊಂದಿಗೆ ಸಹಕಾರ ನೀಡಿ ಸ್ವಚ್ಛೋತ್ಸವನಿತ್ಯೋತ್ಸವ ಯಶಸ್ವಿಗೊಳಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್‌ ಹರ್ಷಲ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next