ಉಡುಪಿ: ಸ್ವ-ಸಹಾಯ ಸಂಘಗಳು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಸ್ವೋದ್ಯೋಗಕ್ಕೆ ಇನ್ನಷ್ಟು ಆದ್ಯತೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಹೇಳಿದರು.
ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಂಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿ ಯಾನ ಇಲಾಖೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಮೃತ ಸ್ವ-ಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ಬೀಜಧನ ಚೆಕ್ ವಿತರಿಸಿ ಅವರು ಮಾತನಾಡಿದರು.
ಸ್ವೋದ್ಯೋಮಕ್ಕೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸ್ವ-ಸಹಾಯ ಸಂಘಗಳಿಗೆ ಇನ್ನಷ್ಟು ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಅಭಿವೃದ್ಧಿಯ ಜತೆಗೆ ನಿರುದ್ಯೋಗವೂ ದೊಡ್ಡ ಸವಾಲಾಗಿದೆ. ಎಲ್ಲರಿಗೂ ಸರಕಾರಿ ಕೆಲಸ ನೀಡಲು ಸಾಧ್ಯವಿಲ್ಲ. ಹೀಗಾಗಿ ಸ್ವೋದ್ಯೋಗ ಹೆಚ್ಚಾಗಬೇಕು ಎಂದರು.
ಶಿಕ್ಷಣ, ಆರೋಗ್ಯದ ಜತೆಗೆ ಸ್ತ್ರೀಶಕ್ತಿ ಗುಂಪುಗಳಿಗೂ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಸಣ್ಣ ಪ್ರಮಾಣದಲ್ಲಿ ಉದ್ದಿಮೆ ಆರಂಭಿಸಲು ಸರಕಾರ ಅನೇಕ ಯೋಜನೆಯಡಿ ಸೌಲಭ್ಯ ಈಗ ಒಂದು ಲಕ್ಷ ರೂ.ಗಳ ಚೆಕ್ ನೀಡು ತ್ತಿದ್ದೇವೆ. ಇದರಲ್ಲಿಯೇ ಇನ್ನಷ್ಟು ಸ್ವೋದ್ಯೋಗ ಸೃಷ್ಟಿಯ ಕಾರ್ಯ ಆಗಬೇಕು. ಸಹಾಯಧನ ಹೆಚ್ಚಿಸುವಂತ ಬೇಡಿಕೆ ಕಡಿಮೆಯಾಗಬೇಕು ಎಂದು ಅಂಗಾರ ಹೇಳಿದರು.
Related Articles
ಸ್ವ-ಸಹಾಯ ಸಂಘಗಳು ಬ್ಯಾಂಕ್‌ನಿಂದ ಅಗತ್ಯ ಸೌಲಭ್ಯ ಪಡೆದು ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಸುಸ್ತಿದಾರರಾಗಬಾರದು. ನಿರಂತರ ವ್ಯವಹಾರ ಮಾಡುವಂತೆ ಇರಬೇಕು. ಕರಾವಳಿಯಲ್ಲಿ ಮೀನುಗಾರಿಕೆ ಉತ್ತೇಜಿಸುವ ದೃಷ್ಟಿಯಿಂದ ಮತ್ಸ್ಯ ಸಂಪದ ಯೋಜನೆಯಡಿ ಕೋಲ್ಡ್ ಸ್ಟೋರೇಜ್ ಜತೆಗೆ ಸಾರಿಗೆ ವಾಹನ ವ್ಯವಸ್ಥೆ ಮಾಡುತ್ತಿದ್ದೇವೆ. ಮೀನು ಉತ್ಪಾದನೆ ದ್ವಿಗುಣಗೊಳಿಸಲು ಬೇಕಾದ ಕ್ರಮ ಆಗುತ್ತಿದೆ ಎಂದರು.
ಫಲಾನುಭವಿಗಳು
ಅಮೃತ ಸ್ವ-ಸಹಾಯ ಕಿರು ಉದ್ದಿಮೆ ಯೋಜನೆಯಡಿ ಬೈಂದೂರಿನ 21 ಗುಂಪು ಗಳ 306 ಸದಸ್ಯರು, ಕುಂದಾಪುರ 6 ಗುಂಪಿನ 88 ಸದಸ್ಯರು, ಉಡುಪಿಯ 1 ಗುಂಪಿನ 17 ಹಾಗೂ ಕಾಪುವಿನ 24 ಗುಂಪಿನ 208 ಸದಸ್ಯರು ಮತ್ತು ಕಾರ್ಕಳದ 1,267 ಸದಸ್ಯರು ಈ ಸೌಲಭ್ಯ ಪಡೆಯಲಿದ್ದಾರೆ ಎಂದರು.
ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿ.ಪಂ. ಸಿಇಒ ಎಚ್.ಪ್ರಸನ್ನ, ಜಿ.ಪಂ. ಯೋಜನ ನಿರ್ದೇಶಕ ಬಾಬು ಎಂ., ಅಪರ ಜಿಲ್ಲಾಧಿಕಾರಿ ವೀಣಾ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಭಾಗದ ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ (ಪ್ರಭಾರ) ವೀಣಾ ವಿವೇಕಾನಂದ ಸ್ವಾಗತಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಿಕಾ ನಿರೂಪಿಸಿದರು.