Advertisement

ಉತ್ತರಕ್ಕೆಷ್ಟೇ ನಮ್ಮ ಆದ್ಯತೆ

06:00 AM Nov 13, 2017 | Team Udayavani |

ಬೆಳಗಾವಿ: ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಕೆ.ಜೆ.ಜಾರ್ಜ್‌ ರಾಜೀನಾಮೆ ನೀಡುವ ತನಕ ಕಲಾಪ ನಡೆಸಲು ಬಿಡುವುದಿಲ್ಲ ಎಂದು ಬಿಜೆಪಿ ಪಟ್ಟು ಹಿಡಿಯುತ್ತಿರುವ ಬೆನ್ನಲ್ಲೇ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಮಾತ್ರ ಇಲ್ಲಿ ಆದ್ಯತೆ ಎಂದು ವಿಧಾನಸಭೆ ಅಧ್ಯಕ್ಷ ಕೆ. ಬಿ.ಕೋಳಿವಾಡ್‌ ಹೇಳಿದ್ದಾರೆ.

Advertisement

ಸುವರ್ಣ ಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “”ಉತ್ತರ ಕರ್ನಾಟಕ ಭಾಗದ ಆಶೋತ್ತರಗಳನ್ನು ಈಡೇರಿಸುವುದು ಇಲ್ಲಿ ಅಧಿವೇಶನ ನಡೆಸುವ ಪ್ರಮುಖ ಉದ್ದೇಶ. ಜತೆಗೆ ಇಲ್ಲಿನ ಜ್ವಲಂತ ಸಮಸ್ಯೆಗಳಾದ ಮಹದಾಯಿ ವಿವಾದ, ನಂಜುಂಡಪ್ಪ ವರದಿ ಅನುಷ್ಠಾನದ ಬಗ್ಗೆ ಹೆಚ್ಚು ಚರ್ಚೆಯಾಗಬೇಕಿದೆ. ಹತ್ತು ದಿನಗಳ ಅಧಿವೇಶನದಲ್ಲಿ ನನ್ನ ಆದ್ಯತೆಯೇ ಈ ಭಾಗದ ವಿಚಾರಗಳ ಪ್ರಸ್ತಾಪಕ್ಕೆ” ಎಂದಿದ್ದಾರೆ.

ಅಧಿವೇಶನದಲ್ಲಿ ಬೆಳಗ್ಗೆ ನಿಲುವಳಿ ಸೂಚನೆ ಹಾಗೂ ಪ್ರತಿಭಟನೆ, ಧರಣಿಗೆ ಅವಕಾಶ ಇರುವುದಿಲ್ಲ. ಪ್ರಶ್ನೋತ್ತರ ಕಲಾಪ ಹಾಗೂ ಇತರೆ ಕಾರ್ಯಸೂಚಿ ಮುಗಿದ ನಂತರವಷ್ಟೇ ಬೇರೆ ವಿಷಯ. ಅದೂ ಸದನದ ನಿಯಮಾವಳಿಗಳ ಪ್ರಕಾರ ಮಾತ್ರವೇ ಅವಕಾಶ ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.

ಅಷ್ಟೇ ಅಲ್ಲ, ಸದನದ ಹೊರಗೆ ಏನಾದರೂ ಮಾಡಿಕೊಳ್ಳಿ. ಆದರೆ ಕಲಾಪಕ್ಕೆ ತಪ್ಪದೇ ಹಾಜರಾಗಿ ನಿಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ಮೂಲಕ ಹೊಣೆಗಾರಿಕೆ ನಿಭಾಯಿಸಿ ಎಂದು ಸದನಕ್ಕೆ ಗೈರು ಹಾಜರಾಗುವ ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.

ಸದನಕ್ಕೆ ಶಾಸಕರು ಗೈರು ಹಾಜರಾಗುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿ ಶಾಸಕರನ್ನು ಸದನಕ್ಕೆ ಕಡ್ಡಾಯವಾಗಿ ಕರೆತರಲು ಯಾವುದೇ ಕಾನೂನು ಇಲ್ಲ. ನಾನೂ ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ನಿಯಮಾವಳಿಗೆ ತಿದ್ದುಪಡಿ ತಂದಿದ್ದೇನೆ. ಆದರೂ ಸದನಕ್ಕೆ ಶಾಸಕರು ಬರುವುದಿಲ್ಲ. ಇದಕ್ಕೆ ಏನು ಮಾಡಲು ಸಾಧ್ಯ. ಅವರಿಗೆ ಜವಾಬ್ದಾರಿ ಇರುವುದಿಲ್ಲವೇ ಎಂದು ಪ್ರಶ್ನಿಸಿದರು.

Advertisement

ಆದರೆ, ಸಚಿವ ಕೆ.ಜೆ. ಜಾರ್ಜ್‌ ನೀಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ ಮತ್ತೆ ಸ್ಪಷ್ಟ ಪಡಿಸಿದೆ. ಸೋಮವಾರ ಮೊದಲ ದಿನ ವಿಧಾನ ಪರಿಷತ್‌ ನಲ್ಲಿ ಸಂತಾಪ ಸೂಚನೆ ಮಂಡನೆ ಯಾದ ನಂತರ ಜಾರ್ಜ್‌ ರಾಜೀನಾಮೆ ಕುರಿತು ಚರ್ಚೆಗೆ ಆಗ್ರಹಿಸಿ ನಿಲುವಳಿ ಸೂಚನೆ ಮಂಡಿಸಲಾಗುವುದು ಎಂದು ವಿಧಾ ನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಸರ್ಕಾರ ಬಗ್ಗೆ ಸ್ಪೀಕರ್‌ ಅತೃಪ್ತಿ
“”ನೂರು ಕೋಟಿ ರೂ. ಖರ್ಚಾದರೂ ಸರಿ. ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕರ ಭವನ ನಿರ್ಮಾಣ ಆಗಬೇಕು ಮತ್ತು ಈ ಸುವರ್ಣಸೌಧ ವರ್ಷದ 365 ದಿನ ಚಟುವಟಿಕೆಯಿಂದ ಕೂಡಿರಬೇಕು ಅನ್ನುವುದು ನನ್ನ ಅಭಿಲಾಷೆ. ಆದರೆ, ಸರ್ಕಾರ ಇದಕ್ಕೆ ಸ್ಪಂದಿಸುತ್ತಿಲ್ಲ” ಎಂದು ವಿಧಾನಭೆ ಸ್ಪೀಕರ್‌ ಕೆ.ಬಿ. ಕೋಳಿವಾಡ ಅಸಹಾಯಕತೆ ತೋಡಿಕೊಂಡರು.
ವಿಧಾನಮಂಡಲ ಆಧಿವೇಶನದ ಅಂಗವಾಗಿ ಭಾನುವಾರ ಸುವರ್ಣಸೌಧದ ಸಮಿತಿ ಕೊಠಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಅಧಿವೇಶನಕ್ಕೆ 25ರಿಂದ 30 ಕೋಟಿ ರೂ. ಖರ್ಚಾಗುತ್ತದೆ. ಮೂರು ಅಧಿವೇಶನಗಳ ಹಣದಲ್ಲಿ ಶಾಸಕರ ಭವನ ನಿರ್ಮಿಸಬಹುದು. ಒಂದೊಮ್ಮೆ ಶಾಸಕರ ಭವನ ನಿರ್ಮಾಣ ಆದರೆ, ಅದೊಂದು ಆಸ್ತಿಯಾಗುತ್ತದೆ. ಅಧಿವೇಶನದ ಸಂದರ್ಭದಲ್ಲಿ ಶಾಸಕರ ವಾಸ್ತವ್ಯದ ಸಮಸ್ಯೆ ಶಾಶ್ವತವಾಗಿ ಬಗೆಹರಿಯುತ್ತದೆ. ಈ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ. ಆದರೆ, ಸರ್ಕಾರ ನನ್ನ ಮನವಿ ಒಪ್ಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅದೇ ರೀತಿ ವರ್ಷದಲ್ಲಿ 90 ದಿನ ಅಧಿವೇಶನ ನಡೆದು ಆದರಲ್ಲಿ 45 ದಿನ ಬೆಂಗಳೂರಿನಲ್ಲಿ ಹಾಗೂ 45 ದಿನ ಬೆಳಗಾವಿಯ ಸುವರ್ಣಸೌಧದಲ್ಲಿ ಕಲಾಪ ನಡೆಯಬೇಕು. ಕೆಲವೊಂದು ಇಲಾಖೆಗಳು ಇಲ್ಲಿಗೆ ವರ್ಗಾವಣೆಗೊಳ್ಳಬೇಕು. 10 ದಿನದ ಅಧಿವೇಶನಕ್ಕೆ ಮಾತ್ರ ಸುವರ್ಣಸೌಧ ಸಿಮೀತವಾಗಬಾರದು. ವರ್ಷದ 365 ದಿನ ಇಲ್ಲಿ ಚಟುವಟಿಕೆಗಳು ನಡೆಯುತ್ತಿರಬೇಕು ಅನ್ನುವುದು ನನ್ನ ಅಭಿಲಾಷೆ. ಆದರೆ, ಈ ರೀತಿ ಆಗುತ್ತಿಲ್ಲ ಎಂಬುದು ದುಃಖದ ಸಂಗತಿ. ಇದರಿಂದ ನನಗೆ ಬಹಳ ನೋವು ಅನಿಸುತ್ತದೆ ಎಂದರು.

21 ಕೋಟಿ ರೂ. ಬಿಡುಗಡೆ?
ಅಧಿವೇಶನಕ್ಕೆ ಆರ್ಥಿಕ 21 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದೆ. ಜಿಎಸ್‌ಟಿ ಬಂದಿದ್ದರಿಂದ ಹೆಚ್ಚು ಹಣ ಬೇಕು ಎಂದು ಕೆಲವೊಂದು ಇಲಾಖೆಗಳು ಕೇಳಿಕೊಂಡಿವೆೆ. ಕಳೆದ ವರ್ಷ ಪೊಲೀಸ್‌ ಇಲಾಖೆಗೆ 1.5 ಕೋಟಿ ರೂ. ನೀಡಲಾಗಿತ್ತು. ಈ ಬಾರಿ ಅವರು 4 ಕೋಟಿ ರೂ. ಕೇಳಿದ್ದಾರೆ. ಹಾಗಾಗಿ, ಆರ್ಥಿಕ ಇಲಾಖೆಗೆ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈವರೆಗೆ ಯಾವುದೇ ಉತ್ತರ ಬಂದಿಲ್ಲ. ಹೆಚ್ಚುವರಿಯಾಗಿ 5 ಕೋಟಿ ರೂ. ಸಿಗುವ ನಿರೀಕ್ಷೆಯಿದೆ ಎಂದು  ತಿಳಿಸಿದರು.

ಬೆಳಗಾವಿಯಲ್ಲಿ ವಸತಿ ವ್ಯವಸ್ಥೆ ಮಾಡಿರುವ ಶಾಸಕರಿಗೆ ಸಾರಿಗೆ ಭತ್ಯೆ 2500 ರೂ. ನೀಡಲಾಗುತ್ತಿದೆ. ಹುಬ್ಬಳ್ಳಿಯಲ್ಲಿ ವಸತಿ ವ್ಯವಸ್ಥೆ ಮಾಡಿರುವ ಶಾಸಕರಿಗೆ ಸಾರಿಗೆ ಭತ್ಯೆ 5000 ರೂ. ನೀಡಲಾಗುತ್ತಿದೆ. ಶಾಸಕರು ಉಳಿದುಕೊಂಡಿರುವ ಹೋಟೆಲ್‌ಗ‌ಳಲ್ಲಿ ಬೆಳಗ್ಗೆ ತಿಂಡಿ ನೀಡಲಾಗುವುದು. ಮಧ್ಯಾಹ್ನ ಸುವರ್ಣಸೌಧದಲ್ಲಿ ಊಟದ ವ್ಯವಸ್ಥೆ ಇರುತ್ತದೆ. ರಾತ್ರಿ ಊಟದ ವ್ಯವಸ್ಥೆ ಶಾಸಕರೇ ಮಾಡಿಕೊಳ್ಳಬೇಕು ಎಂದು ಹೇಳಿದರು. ಈ ಬಾರಿಯೂ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸದಸ್ಯರ ಜತೆಯಲ್ಲಿ ಆಗಮಿಸುವ ಆಪ್ತ ಸಹಾಯಕರಿಗೆ ಹಾಗೂ ಭದ್ರತಾ ಸಿಬ್ಬಂದಿಗೆ ಬೆಳಗಾವಿಯಲ್ಲಿ ವಸತಿ ಹಾಗೂ ಸಾರಿಗೆ ಸೌಕರ್ಯ ಕಲ್ಪಿಸಲಾಗದು ಎಂದು ತಿಳಿಸಲಾಗಿದೆ. ಶಾಸಕರು ಆವರ ಆಪ್ತ ಸಿಬ್ಬಂದಿ ಸಹಚರರನ್ನು ಜತೆಗೆ ಕರೆತರಬಾರದು ಎಂದು ಮನವಿ ಮಾಡಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next