ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಉಪ ವಿಭಾಗದ ಬಫರ್ ಜೋನ್ ವಲಯದ ಬೆಟ್ಟದಮಾದಹಳ್ಳಿ ಗ್ರಾಮದ ರೈತರ ಜಮೀನೊಂದರಲ್ಲಿ ಅನುಮಾನಸ್ಪದವಾಗಿ ಹೆಣ್ಣು ಚಿರತೆಯ ಮೃತದೇಹ ಪತ್ತೆಯಾಗಿದೆ.
ಬೆಟ್ಟದಮಾದಹಳ್ಳಿ ಗ್ರಾಮದ ನಾಗಮಲ್ಲಪ್ಪ ಅವರಿಗೆ ಸೇರಿದ ಸರ್ವೆ ನಂ 58 ರ ಹಿಡುವಳಿ ಜಮೀನಿನಲ್ಲಿ ಸುಮಾರು 2 ರಿಂದ 3 ವರ್ಷದ ವಯಸ್ಸಿನ ಹೆಣ್ಣು ಚಿರತೆ ಮೃತಪಟ್ಟಿದೆ.
ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಪರಮೇಶ್, ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ಚಿರತೆಯ ಎಲ್ಲಾ ಉಗುರುಗಳು, ಹಲ್ಲುಗಳು ಹಾಗೂ ಇತರೆ ಅಂಗಾಗಳು ಸುರಕ್ಷಿತವಾಗಿದೆ. ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ಮೃತ ಚಿರತೆಯ ದೇಹವನ್ನು ಮರಣೋತ್ತರ ಶವ ಪರೀಕ್ಷೆ ನಡೆಸಿದ್ದು, ಚಿರತೆಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕಾರಣದಿಂದ ಚಿರತೆಯ ಅಂಗಾಂಗಳ ಮಾದರಿ ಸಂಗ್ರಹಿಸಿ ವನ್ಯಪ್ರಾಣಿಗಳ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಮಾಹಿತಿ ನೀಡಿದರು.
ಭಾರತೀಯ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ಪ್ರಕಾರ ಮೃತ ಚಿರತೆಯ ಕಳೆ ಬರಹವನ್ನು ಸುಡಲಾಯಿತು.