Advertisement

ಉಪನಗರ ರೈಲಿಗೆ ಅನುದಾನ ಅನುಮಾನ?

12:18 AM Oct 06, 2019 | Lakshmi GovindaRaju |

ಬೆಂಗಳೂರು: ಮಹತ್ವಾಕಾಂಕ್ಷಿ ಉಪನಗರ ರೈಲು ಯೋಜನೆಗಾಗಿ ಬರುವ ಬಜೆಟ್‌ನಲ್ಲಿ ಕೇಂದ್ರದಿಂದ ಅನುದಾನ ಬಿಡುಗಡೆ ಆಗುವುದು ಅನುಮಾನ. ಯಾಕೆಂದರೆ, ಯೋಜನೆಗೆ ಇನ್ನೂ ಅನುಮೋದನೆಯೂ ಸಿಕ್ಕಿಲ್ಲ; ಹಾಗಾಗಿ ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಬಳಕೆಯಾಗಿಲ್ಲ! 161 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆಗಾಗಿ ಫೆಬ್ರವರಿಯಲ್ಲಿ ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ 10 ಕೋಟಿ ರೂ. ನೀಡಲಾಗಿದೆ.

Advertisement

ಆದರೆ, ಯೋಜನೆಗೆ ಅನುಮೋದನೆ ನೀಡುವುದನ್ನು ಮರೆತಿದೆ. ಪರಿಣಾಮ ಅನುಮೋದನೆಗೊಳ್ಳುವವರೆಗೂ ಅನುಷ್ಠಾನದ ಹೊಣೆ ಹೊತ್ತ “ಕೆ-ರೈಡ್‌’ (K-RIDE)ಗೆ ಕೆಲಸವಿಲ್ಲ. “ವಿಶೇಷ ಉದ್ದೇಶ ವಾಹನ’ (ಎಸ್‌ಪಿವಿ) ರಚನೆಯೂ ಆಗುವಂತಿಲ್ಲ. ಉಳಿದ ಮೂರ್‍ನಾಲ್ಕು ತಿಂಗಳಲ್ಲಿ ಕೊಟ್ಟ ಹಣ ಖರ್ಚು ಮಾಡುವುದು ಕಷ್ಟ. ಇನ್ನು ಖರ್ಚಾಗದಿದ್ದರೆ, ಹೊಸದಾಗಿ ಕೊಡುವುದು ಕೂಡ ಅನುಮಾನ. ಇದರಿಂದ ಪರೋಕ್ಷವಾಗಿ ಯೋಜನೆಗೆ ಹಿನ್ನಡೆ ಆಗುವ ಸಾಧ್ಯತೆ ಇದೆ.

ನಗರದ ಮೇಲೆ ಹೆಚ್ಚುತ್ತಿರುವ ಸಂಚಾರದಟ್ಟಣೆ ಒತ್ತಡ ತಗ್ಗಿಸುವ ಉದ್ದೇಶದಿಂದ ಉಪನಗರ ರೈಲು ಯೋಜನೆ ಪ್ರಕಟಿಸಲಾಯಿತು. ಇದಕ್ಕೆ 2018-19ನೇ ಸಾಲಿನ ಬಜೆಟ್‌ನಲ್ಲಿ ಒಂದು ಕೋಟಿ ರೂ. ನೀಡಲಾಯಿತು. 2019-20ರಲ್ಲಿ ಈ ಮೊತ್ತವನ್ನು ಹತ್ತುಪಟ್ಟು ಅಂದರೆ ಹತ್ತು ಕೋಟಿಗೆ ಹೆಚ್ಚಿಸಲಾಯಿತು. ಜತೆಗೆ “ಪ್ರಾದೇಶಿಕ ಸಾರಿಗೆ ಸಂಪರ್ಕ ಕಲ್ಪಿಸುವಲ್ಲಿ ಉಪನಗರ ರೈಲು ಸೇವೆಗಳು ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಉಪನಗರ ರೈಲು ವ್ಯವಸ್ಥೆಗೆ ಇನ್ನಷ್ಟು ಬಂಡವಾಳವನ್ನು ಆದ್ಯತೆ ಮೇರೆಗೆ ಹೂಡಿಕೆ ಮಾಡಲಾಗುವುದು’ ಎಂದೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದರು. ಆದರೆ, ಕಳೆದ ಎಂಟು ತಿಂಗಳಾದರೂ ಯೋಜನೆಗೆ ಅನುಮೋದನೆ ದೊರಕಿಲ್ಲ.

ಈ ಮಧ್ಯೆ ಫೆಬ್ರವರಿಯಲ್ಲಿ ಮತ್ತೂಂದು ಬಜೆಟ್‌ ಬರುತ್ತಿದೆ. ಅಷ್ಟರಲ್ಲಿ ಯೋಜನೆಗೆ ಅನುಮೋದನೆ ದೊರೆತು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ, ಅನುಷ್ಠಾನಗೊಳಿಸುವುದು ಸವಾಲಿನ ಕೆಲಸವಾಗಿದೆ. ಈ ಹಿಂದೆ ನೀಡಿದ ಹಣ ಖರ್ಚು ಮಾಡದಿದ್ದರೆ, ಹೊಸದಾಗಿ ಅನುದಾನ ನೀಡಲು ಸರ್ಕಾರ ಸಹಜವಾಗಿ ಹಿಂದೇಟು ಹಾಕುತ್ತದೆ. ಇದು ಯೋಜನೆ ಪ್ರಗತಿಯನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ. ಆದ್ದರಿಂದ ತ್ವರಿತ ಗತಿಯಲ್ಲಿ ಇದಕ್ಕೆ ಅನುಮೋದನೆ ನೀಡಿ, ಅನುಷ್ಠಾನಗೊಳಿಸಬೇಕು ಎಂದು ಪ್ರಜಾ ಸಂಸ್ಥೆಯ ಸದಸ್ಯ ಹಾಗೂ ಉಪನಗರ ರೈಲು ಹೋರಾಟಗಾರ ಸಂಜೀವ ದ್ಯಾಮಣ್ಣವರ ಒತ್ತಾಯಿಸುತ್ತಾರೆ.

ಕೇಳ್ಳೋರಿಲ್ಲದೆ ಕುಳಿತ “ಕೆ-ರೈಡ್‌’: 35ರಿಂದ 40 ಕಿ.ಮೀ. ಉದ್ದದ ಯಶವಂತಪುರ-ಚನ್ನಸಂದ್ರ ಮತ್ತು ಸುಮಾರು 80 ಕಿ.ಮೀ. ಉದ್ದದ ಬೈಯಪ್ಪನಹಳ್ಳಿ-ಹೊಸೂರು ನಡುವೆ ಜೋಡಿ ಮಾರ್ಗಕ್ಕಾಗಿ ಕ್ರಮವಾಗಿ 44 ಕೋಟಿ ಹಾಗೂ 82 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದ್ದು, ಇವುಗಳ ಅನುಷ್ಠಾನದ ಜವಾಬ್ದಾರಿ ಕೂಡ ಕೆ-ರೈಡ್‌ಗೆ ವಹಿಸಲಾಗಿದೆ. ಆದರೆ, ಆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ ಕೇವಲ ಮೂರ್‍ನಾಲ್ಕು!

Advertisement

ರೈಲು ಯೋಜನೆ ತ್ವರಿತ ಗತಿಯಲ್ಲಿ ಅನುಷ್ಠಾನಗೊಳ್ಳಲಿ ಎಂಬ ದೃಷ್ಟಿಯಿಂದ ಬಿಎಂಆರ್‌ಸಿಎಲ್‌ ಮಾದರಿಯಲ್ಲಿ ಕೆ-ರೈಡ್‌ ರೂಪಿಸಲಾಗಿದೆ. ರೈಲ್ವೆ ಇಲಾಖೆಯೇ ವಹಿಸಿಕೊಂಡಿದ್ದರೆ, ಸ್ಥಳೀಯಮಟ್ಟದಿಂದ ವಿಭಾಗ, ವಲಯ ಹಾಗೂ ಮಂಡಳಿವರೆಗೆ ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕಾಗಿತ್ತು. ಇದರಿಂದ ಕಾಮಗಾರಿ ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಆದರೆ, ಅದಕ್ಕೆ ಇನ್ನೂ ಕಾಯಂ ಕಚೇರಿ ನೀಡಿಲ್ಲ. ಹಾಗೂ ಅಗತ್ಯ ಸಿಬ್ಬಂದಿಯನ್ನೂ ರಾಜ್ಯ ಸರ್ಕಾರ ಕೊಟ್ಟಿಲ್ಲ. ಯೋಜನೆ ಅನುಮೋದನೆಗೊಂಡ ನಂತರ ನೋಡಿದರಾಯ್ತು ಎಂಬ ಲೆಕ್ಕಾಚಾರದಲ್ಲಿ ಸರ್ಕಾರವಿದ್ದು, ಇದರ ಮಧ್ಯೆ ಈ ಪ್ರತ್ಯೇಕ ಸಂಸ್ಥೆ ನಿರ್ಲಕ್ಷ್ಯಕ್ಕೊಳಪಟ್ಟಿದೆ.

161 ಕಿ.ಮೀ. ಉಪನಗರ ರೈಲು ಯೋಜನೆ ಸೇರಿದಂತೆ ಒಟ್ಟಾರೆ ಅಂದಾಜು 280 ಕಿ.ಮೀ. ಮಾರ್ಗ ನಿರ್ಮಿಸುವ ಹೊಣೆ ಇದರ ಮೇಲಿದೆ. ಅಲ್ಲದೆ, ಈಚೆಗೆ ಮಂಜೂರಾದ ಧಾರವಾಡ-ಕಿತ್ತೂರು-ಬೆಳಗಾವಿ ಮಾರ್ಗವನ್ನೂ ಇದೇ ಕೆ-ರೈಡ್‌ಗೆ ವಹಿಸಲಾಗಿದೆ. ಇದೆಲ್ಲದಕ್ಕೂ ತಜ್ಞರ ಪ್ರಕಾರ ಸಿಗ್ನಲಿಂಗ್‌, ವಿದ್ಯುತ್‌ ಮಾರ್ಗ ಅಳವಡಿಕೆ ಒಳಗೊಂಡಂತೆ ವಿವಿಧ ಕೆಲಸಗಳಿಗಾಗಿ ಕನಿಷ್ಠ 15ರಿಂದ 20 ಮಂದಿ ಅಧಿಕಾರಿ ವರ್ಗದ ಅವಶ್ಯಕತೆ ಇದೆ.

ಯೋಜನೆಗೆ ಕೇಂದ್ರದಿಂದ ಅನುಮೋದನೆ ದೊರೆಯುತ್ತಿದ್ದಂತೆ ಅನುಷ್ಠಾನದ ಕೆಲಸ ಆರಂಭವಾಗಲಿದೆ. ಬೆನ್ನಲ್ಲೇ ಕೆ-ರೈಡ್‌ಗೆ ಪೂರಕ ಸೌಲಭ್ಯಗಳು ಕೂಡ ಸಿಗಲಿವೆ.
-ಅಮಿತ್‌ ಗರ್ಗ್‌, ಉಪನಗರ ರೈಲು ಯೋಜನೆ ವಿಶೇಷಾಧಿಕಾರಿ

ಯೋಜನೆಗೆ ಯಾವುದೇ ವಿಳಂಬ ಆಗುವುದಿಲ್ಲ. ಸಕಾಲದಲ್ಲಿ ಯೋಜನೆಗೆ ಅನುಮೋದನೆ ದೊರೆಯಲಿದ್ದು, ಆದ್ಯತೆ ಮೇರೆಗೆ ಅನುಷ್ಠಾನ ಮಾಡಲು ಕ್ರಮ ಕೈಗೊಳ್ಳಲಾಗುವುದು.
-ಸುರೇಶ್‌ ಅಂಗಡಿ, ರೈಲ್ವೆ ಖಾತೆ ರಾಜ್ಯ ಸಚಿವ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next