Advertisement

Politics: ಸಂಸದರ ಅಮಾನತು- ಕಾಂಗ್ರೆಸ್‌ ಪ್ರತಿಭಟನೆ

12:09 AM Dec 23, 2023 | Team Udayavani |

ಬೆಂಗಳೂರು: ಸಂಸತ್‌ ಕಲಾಪದಿಂದ ವಿಪಕ್ಷ ಸದಸ್ಯರ ಅಮಾನತನ್ನು ಖಂಡಿಸಿ ಕಾಂಗ್ರೆಸ್‌ ವತಿಯಿಂದ ಶುಕ್ರವಾರ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ಕೇಂದ್ರದ ಬಿಜೆಪಿ ಸರಕಾರವು ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ಮಾಡಿ, ಸಂಸತ್ತಿನ ಉಭಯ ಸದನಗಳಿಂದ ಸಂಸದರನ್ನು ಅಮಾನತುಗೊಳಿಸಿರುವುದು ಪ್ರಜಾಸತ್ತಾತ್ಮಕ ತತ್ವಗಳ ಕೊಲೆ ಎಂದು ಪ್ರತಿಭಟನೆ ನಿರತರು ಹೇಳಿದರು.

ಅಘೋಷಿತ ತುರ್ತು ಪರಿಸ್ಥಿತಿ
ಸಂಸತ್ತಿನಿಂದ 146 ಸಂಸದರನ್ನು ಅಮಾನತು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಮಂಗಳೂರು ನಗರದ ಮಿನಿ ಸೌಧದ ಬಳಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿನ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಕೇಂದ್ರ ಸರಕಾರದ ಸರ್ವಾಧಿಕಾರ ಧೋರಣೆಯಿಂದಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯಾದಗಿರಿ ನಗರದ ಸುಭಾಷ್‌ಚಂದ್ರ ಬೋಸ್‌ ವೃತ್ತದ ಬಳಿ ಬೃಹತ್‌ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಸಚಿವ ಶರಣಬಸಪ್ಪ ದರ್ಶನಾಪೂರ ಹಾಗೂ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ಭಾಗಿಯಾಗಿದ್ದರು. ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರು ಸರ್ವಾಧಿಕಾರಿ ಬಿಜೆಪಿ ಸರಕಾರದಿಂದ ಸಂಸದರ ಅಮಾನತು “ಹೇಡಿತನದ ಪರಮಾವಧಿ’ ಎಂದು ಭಿತ್ತಿಪತ್ರ ಪ್ರದರ್ಶಿಸಿದರು. ಬೆಳಗಾವಿ, ಧಾರವಾಡ, ವಿಜಯಪುರ, ಬೀದರ್‌, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಯಿತು.

ಮಂಡ್ಯ ನಗರದ ಕಾಂಗ್ರೆಸ್‌ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು, ಬಳಿಕ ಮೆರವಣಿಗೆ ಮೂಲಕ ಕಾವೇರಿ ಉದ್ಯಾನದಲ್ಲಿರುವ ಗಾಂಧಿ ಪ್ರತಿಮೆ ಬಳಿ ತೆರಳಿ ಸ್ವಲ್ಪ ಹೊತ್ತು ಧರಣಿ ನಡೆಸಿದರು. 146 ಸಂಸದರನ್ನು ಅಮಾನತು ಮಾಡಿರುವ ಸ್ಪೀಕರ್‌ ಓಂ ಬಿರ್ಲಾ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್‌ ಧನ್‌ಕರ್‌ ಅವರ ಕ್ರಮ ಸರಿಯಲ್ಲ ಎಂದು ಕಿಡಿಕಾರಿದರು.

Advertisement

ಸರ್ವಾಧಿಕಾರದ ಪರಮಾವಧಿತನ
ಸಂಸತ್‌ ಸದಸ್ಯರ ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಸರ್ವಾಧಿಕಾರದ ಪರಮಾವಧಿ. ಇವರಿಗೆ ಪ್ರಜಾಪ್ರಭುತ್ವದ ಯಾವ ಆಶಯಗಳ ಮೇಲೂ ನಂಬಿಕೆ ಇಲ್ಲ. ವಿಪಕ್ಷಗಳ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ ಅಂದರೆ ಏನರ್ಥ? ಜನ ಇವರ ನಡವಳಿಕೆಯನ್ನು ಗಮನಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲೂ ಇದಕ್ಕೆಲ್ಲ ಉತ್ತರ ಮಾಡುತ್ತಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾಪ್ರಭುತ್ವ ಇದೆಯೋ, ಇಲ್ಲವೋ?
ಸಂಸತ್ತಿನ ಮೇಲೆ ನಡೆದ ದಾಳಿ ವಿಚಾರವಾಗಿ ಪ್ರಧಾನಿ ಹಾಗೂ ಗೃಹ ಸಚಿವರಿಂದ ಉತ್ತರ ಕೇಳಿದ ಕಾರಣಕ್ಕೆ ವಿಪಕ್ಷಗಳ ಸಂಸದರನ್ನು ಸದನದಿಂದ ಅಮಾನತು ಮಾಡಲಾಗಿದೆ. ಸ್ಪೀಕರ್‌ ಅವರ ಬಳಿ ಕಾಗದ ಹರಿದಿದ್ದಾರೆ ಎಂದು ವಿಪಕ್ಷಗಳ ಕೆಲವು ಸದಸ್ಯರ ನಡೆಯನ್ನು ಹಕ್ಕುಬಾಧ್ಯತಾ ಸಮಿತಿಯ ಪರಿಶೀಲನೆಗೆ ಒಳಪಡಿಸಿದ್ದಾರೆ. ಆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೋ, ಇಲ್ಲವೋ ಎಂಬ ಪ್ರಶ್ನೆಯನ್ನು ನಾವು ಜನರ ಮುಂದೆ ಇಡಬೇಕಿದೆ.
-ಡಿ.ಕೆ.ಶಿವಕುಮಾರ್‌, ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next