Advertisement

ಸಸ್ಪೆನ್ಸ್‌ ಕಣ್ಣು

06:00 AM Nov 16, 2018 | Team Udayavani |

“ನಾನು ಈ ಸಿನಿಮಾದ ಹೀರೋ ಅಲ್ಲ, ರಾಜಕುಮಾರ್‌ ಮಗ ಅನ್ನೋ ಕಾರಣಕ್ಕೆ ನನ್ನನ್ನು ಹೀರೋ ಅಂತಿದ್ದಾರಷ್ಟೇ …’
– ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ ನಿರ್ದೇಶಕ ದಯಾಳ್‌ ಪದ್ಮನಾಭನ್‌ ಅವರ ಮುಖ ನೋಡಿದರು ರಾಘವೇಂದ್ರ ರಾಜಕುಮಾರ್‌. ದಯಾಳ್‌  ನಕ್ಕರು. ರಾಘವೇಂದ್ರ ರಾಜಕುಮಾರ್‌ ಇರುವುದೇ ಹಾಗೆ. ಅವರದು ಸರಳ ವ್ಯಕ್ತಿತ್ವ. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಾರೆ. ಇಷ್ಟವಾದ ಸಿನಿಮಾ, ಕಥೆಗಳನ್ನು ಪ್ರೋತ್ಸಾಹಿಸುತ್ತಾರೆ. ಕಥೆ ಮನಸಿಗೆ ನಾಟಿದರೆ ಆ ಕಥೆಯಲ್ಲಿ ತಾನೊಂದು ಪಾತ್ರವಾಗಬೇಕೆಂದು ಬಯಸುತ್ತಾರೆ. ಅಂದು ರಾಘವೇಂದ್ರ ರಾಜಕುಮಾರ್‌ ಅವರ ಮಾತಿಗೂ ಕಾರಣವಾಗಿದ್ದು, ಅವರ ಆಸೆ, ತಾನೊಂದು ಪಾತ್ರವಾಗಬೇಕೆಂಬ ಬಯಕೆ. ಅವರ ಬಯಕೆಗೆ ಕಾರಣ “ತ್ರಯಂಬಕಂ’. ಇದು ರಾಘವೇಂದ್ರ ರಾಜಕುಮಾರ್‌ ನಟಿಸುತ್ತಿರುವ ಸಿನಿಮಾ. ನಿಮಗೆ ಗೊತ್ತಿರುವಂತೆ ರಾಘವೇಂದ್ರ ರಾಜಕುಮಾರ್‌ ಅವರು ಒಂದು ದೊಡ್ಡ ಗ್ಯಾಪ್‌ನ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಮೂಲಕ ಚಿತ್ರರಂಗದಲ್ಲಿ ಮತ್ತೆ ಆ್ಯಕ್ಟೀವ್‌ ಆಗಿದ್ದಾರೆ. ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ನಟಿಸುತ್ತಿರುವ ರಾಘಣ್ಣ ಈಗ “ತ್ರಯಂಬಕಂ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಪುನೀತ್‌ ರಾಜಕುಮಾರ್‌ ಚಾಲನೆ ನೀಡಿದರು. 

Advertisement

ಎಲ್ಲಾ ಓಕೆ, ರಾಘಣ್ಣ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಇದಕ್ಕೂ ಕಾರಣ ಉತ್ತರಿಸುತ್ತಾರೆ. “ತುಂಬಾ ಒಳ್ಳೆಯ ಕಥೆಯಿದು. ಕಥೆ ಕೇಳಿದಾಗ ಈ ಕಥೆಯಲ್ಲಿ ನಾನಿರಬೇಕಿತ್ತೆಂಬ ಆಸೆಯಿಂದ ಒಪ್ಪಿಕೊಂಡೆ. ನಿಜ ಹೇಳಬೇಕೆಂದರೆ ನಾನು ಈ ಚಿತ್ರದ ಹೀರೋ ಅಲ್ಲ, ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದೇನಷ್ಟೇ. ಇಡೀ ಸಿನಿಮಾ ಮೂರು ಪಾತ್ರಗಳ ಸುತ್ತ ಸಾಗುತ್ತದೆ. ನಾನಿಲ್ಲಿ ತಂದೆಯಾಗಿ ನಟಿಸುತ್ತಿದ್ದೇನೆ. ಇದೊಂದು ಒಳ್ಳೆಯ ಸಿನಿಮಾವಾಗುವ ವಿಶ್ವಾಸವಿದೆ’ ಎಂದರು ರಾಘವೇಂದ್ರ ರಾಜಕುಮಾರ್‌. ತಂದೆ ಪಾತ್ರ ಎಂದ ಕೂಡಲೇ ಹಾಗೆ ಬಂದು ಹೀಗೆ ಹೋಗುವ ತಂದೆ ಎಂದು ಭಾವಿಸುವಂತಿಲ್ಲ. ಅವರ ಪಾತ್ರ ಹಲವು ಟ್ವಿಸ್ಟ್‌ಗಳೊಂದಿಗೆ ಸಾಗುತ್ತದೆ.

ನಿರ್ದೇಶಕ ದಯಾಳ್‌ ಖುಷಿಯಾಗಿದ್ದರು. ಅದಕ್ಕೆ ಕಾರಣ ಅವರ ತುಂಬಾ ದಿನಗಳ ಆಸೆ ಈಡೇರುತ್ತಿರುವುದು. ದಯಾಳ್‌ ಶಿವಭಕ್ತ. ಅವರಿಗೆ ಶಿವನ ಕುರಿತಾಗಿ ಸಿನಿಮಾ ಮಾಡಬೇಕೆಂಬ ಆಸೆ ತುಂಬಾ ದಿನಗಳಿಂದ ಇತ್ತಂತೆ. ಅದು ಈಗ “ತ್ರಯಂಬಕಂ’ ಮೂಲಕ ಈಡೇರುತ್ತಿದೆ. “ಇದು ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ. ಚಿತ್ರಕ್ಕೆ ಟೈಟಲ್‌ ಇಡಲು ಒಂದು ಕಾರಣವೂ ಇದೆ. ಅದು ಮೂರನೇ ಕಣ್ಣು. ನಾವು ಏನೇ  ಮಾಡಿದರೂ ಯಾರಾದರೊಬ್ಬರು ನಮ್ಮನ್ನು ಗಮನಿಸುತ್ತಿರುತ್ತಾರೆ. ಅದೇ ಕಾರಣದಿಂದ “ತ್ರಯಂಬಕಂ’ ಎಂದು ಟೈಟಲ್‌ ಇಟ್ಟಿದ್ದೇವೆ. ಚಿತ್ರದಲ್ಲಿ ಶಿವ, ಶಿವಲಿಂಗದ ಕುರಿತಾದ ಹಲವು ಅಂಶಗಳನ್ನು ಹೇಳುತ್ತಿದ್ದೇವೆ. ಭಕ್ತಿಪ್ರಧಾನ ಹಾಗೂ ಐತಿಹಾಸಿಕ ಅಂಶಗಳ ಮಿಶ್ರಣ ಕೂಡಾ ಚಿತ್ರದಲ್ಲಿದೆ’ ಎಂದು ಖುಷಿಯಿಂದ ಹೇಳಿಕೊಂಡರು ದಯಾಳ್‌. 

ಚಿತ್ರದಲ್ಲಿ ಅನುಪಮಾ ಹಾಗೂ ಆರ್‌ಜೆ ರೋಹಿತ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. “ಆ ಕರಾಳ ರಾತ್ರಿ’ ಚಿತ್ರದ ನಂತರ ಮತ್ತೂಮ್ಮೆ ದಯಾಳ್‌ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ಹಾಗೂ ರಾಘಣ್ಣ ಅವರ ಜೊತೆ ಮೊದಲ ಬಾರಿಗೆ ನಟಿಸುತ್ತಿರುವ ಎಕ್ಸೆ„ಟ್‌ಮೆಂಟ್‌ ಬಗ್ಗೆ ಅನುಪಮಾ ಮಾತನಾಡಿದರು. ದಯಾಳ್‌ ಅವರು ಹೇಳಿದ್ದನ್ನು ಮಾಡಿ ತೋರಿಸುವ ನಿರ್ದೇಶಕನಾಗಿದ್ದರಿಂದ ಸಿನಿಮಾ, ಪಾತ್ರದ ಮೇಲೆ ರೋಹಿತ್‌ಗೆ ಭರವಸೆ ಇದೆಯಂತೆ. ಉಳಿದಂತೆ ಚಿತ್ರದಲ್ಲಿ ಶಿವಮಣಿ, ಅಮಿತ್‌, ಸಿಹಿಕಹಿ ಚಂದ್ರು ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ನವೀನ್‌ ಕೃಷ್ಣ ಸಂಭಾಷಣೆ ಇದೆ. ಈ ಚಿತ್ರದ ಕಥೆ ತುಂಬಾ ಕ್ಲಿಷ್ಟವಾಗಿದ್ದರಿಂದ ಸಂಭಾಷಣೆಗೂ ಸಾಕಷ್ಟು ಸಮಯ ಹಿಡಿಯಿತಂತೆ. ಅಂದಹಾಗೆ, ಚಿತ್ರದ ಸ್ಟೋರಿ ಕಾನ್ಸೆಪ್ಟ್ ಸಂದೀಪ್‌ ಹಾಗೂ ಸ್ವಾಮಿ ಅವರದ್ದಾಗಿದ್ದು, ಫ್ಯೂಚರ್‌ ಎಂಟರ್‌ಟೈನ್‌ಮೆಂಟ್‌ ಫಿಲಂಸ್‌ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಗಣೇಶ್‌ ನಾರಾಯಣ್‌ ಸಂಗೀತ, ರಾಕೇಶ್‌ ಛಾಯಾಗ್ರಹಣ, ಕ್ರೇಜಿಮೈಂಡ್‌ ಶ್ರೀ ಸಂಕಲನವಿದೆ. ಅವಿನಾಶ್‌ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು. 

ರವಿಪ್ರಕಾಶ್‌ ರೈ

Advertisement
Advertisement

Udayavani is now on Telegram. Click here to join our channel and stay updated with the latest news.

Next