ಬೆಂಗಳೂರು: ವೇತನ ಪರಿಷ್ಕರಣೆ ಹಾಗೂ ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸುವಂತೆ ಮುಷ್ಕರ ನಡೆಸಿ ವಜಾಗೊಂಡಿದ್ದ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಮರು ನೇಮಕ ಆದೇಶ ನೀಡಿದ್ದಾರೆ.
ಬುಧವಾರ ತಮ್ಮ ಸರಕಾರಿ ನಿವಾಸ ದಲ್ಲಿ 100 ಮಂದಿ ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರಿಗೆ ಮರು ನೇಮಕಾತಿ ಆದೇಶ ನೀಡಿದರು.
ನೌಕರರು ಮುಷ್ಕರ ನಡೆಸಬಾರದು ಎನ್ನುವುದಿಲ್ಲ. ಆದರೆ, ಮುಷ್ಕರ ನಡೆಸುವ ಮೊದಲು ಸಂಬಂಧ ಪಟ್ಟ ಸಚಿವರು, ಸಿಎಂ ಜತೆ ಚರ್ಚಿಸಬೇಕು. ಈಗಾಗಲೇ ಅಮಾನತುಗೊಂಡಿರುವ 1,500 ಮಂದಿಯನ್ನು ಮರು ಕರೆಸಿಕೊಳ್ಳಲಾಗಿದೆ.
1,353 ಜನರು ವಜಾಗೊಂಡಿದ್ದು, ಅವರ ಮರು ನೇಮಕಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಆದರೆ, ಮಾನವೀಯತೆಯ ದೃಷ್ಟಿಯಿಂದ ಮರು ನೇಮಕ ಆದೇಶ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 100 ಮಂದಿಯನ್ನು ನೇಮಿಸಿ ಕೊಳ್ಳಲಾಗುತ್ತಿದೆ. ಉಳಿದವರನ್ನು ಹಂತ ಹಂತವಾಗಿ ಮರು ನೇಮಕ ಮಾಡಲಾಗುತ್ತಿದೆ. ಈ ತಿಂಗಳ ಒಳಗೆ 700 ಮಂದಿಗೆ ನೇಮಕಾತಿ ಆದೇಶ ನೀಡಲಾಗುವುದು ಎಂದರು.
ಇದನ್ನೂ ಓದಿ:ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ಕೊನೆ ಅವಕಾಶ
ಇನ್ನು ಪ್ರತಿಭಟನೆ, ಮುಷ್ಕರ ಮಾಡಿದರೆ ನಿಮ್ಮನ್ನು ರಕ್ಷಿಸುವುದು ಕಷ್ಟ. ಸರಕಾರದ ಬಗ್ಗೆ ನಿಮಗೆ ಗೌರವ ಇರಬೇಕು. ಮುಂದೆ ಪ್ರತಿ ತಿಂಗಳು ಸಂಬಳ ದೊರೆಯುವಂತೆ ನೋಡಿಕೊಳ್ಳಲಾಗುವುದು ಎಂದರು.