ವಿಜಯಪುರ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆ ಮಾಡಬೇಕು. ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಸಸ್ಪೆಂಡ್‌ನಂಥ ಕ್ರಮಕ್ಕೂ ಹಿಂಜರಿಯುವುದಿಲ್ಲ ಎಂದು ಜಿಪಂ ಸಿಇಒ ಸುಂದರೇಶಬಾಬು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ನಗರದ ಜಿಪಂ ಸಭಾಂಗಣದಲ್ಲಿ ತಾಪಂ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಪಶು ಸಂಗೋಪನಾ ಇಲಾಖೆ, ಅಧಿಕಾರಿಗಳೊಂದಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಬರ ನಿರ್ವಹಣೆ ಕುರಿತಂತೆ ಸಭೆ ನಡೆಸಿದ ಅವರು ಜಿಲ್ಲೆಯಲ್ಲಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿವೆ. ಈ
ಯೋಜನೆಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸುವಂತೆ ಸೂಚಿಸಿದ್ದಾರೆ.
ಇಂಡಿ ತಾಲೂಕಿನ ಹೊರ್ತಿ, ದಸ್ಸೂರ, ಗೋಡಿಹಾಳ, ಇಂಚಗೇರಿ ಎಲ್ಟಿ, ಸಿಂದಗಿ ತಾಲೂಕಿನ ಪುರದಾಳ, ಕಡ್ಲೆವಾಡ, ಕನ್ನೊಳ್ಳಿ ಸೇರಿದಂತೆ ಇತರ ಯೋಜನೆಗಳು ವಿಜಯಪುರ ತಾಲೂಕಿನ ಮಮದಾಪುರ, ಕಣಬೂರ, ಬೆಳ್ಳುಬ್ಬಿ, ಮುದ್ದೇಬಿಹಾಳ ತಾಲೂಕಿನ ಸಾಲವಾಡಗಿ, ಹರನಾಳ, ಮೂಕಿಹಾಳ ವ್ಯಾಪ್ತಿಯ 8 ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿವೆ. ಬಸರಕೋಡ ಯೋಜನೆ ವ್ಯಾಪ್ತಿಯ 12 ಗ್ರಾಮಗಳಿಗೆ ನೀರು ಪೂರೈಸುತ್ತಿದ್ದು ಯರಝರಿ ಸೇರಿದಂತೆ ಇತರೆ ಯೋಜನೆ ವ್ಯಾಪ್ತಿಯಲ್ಲಿ ನೀರು ಸಮರ್ಪಕವಾಗಿ ದೊರೆಯುತ್ತಿರುವ ಕುರಿತಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಅಧಿಕಾರಿಗಳು ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕು, ಯಾವುದೇ ನೆಪ ಹೇಳುವಂತಿಲ್ಲ. ನೀರಿನ ತೀವ್ರ ಸಮಸ್ಯೆ ಪರಿಹಾರಕ್ಕೆ ಪ್ರತಿ ಸಮಸ್ಯಾತ್ಮಕ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಅಗತ್ಯ ಇರುವೆಡೆ ತಕ್ಷಣವೇ ಟ್ಯಾಂಕರ್ ನೀರು ಪೂರೈಸಲು ಅನುಮೋದನೆ ಪಡೆಯಬೇಕು.
ಪ್ರತಿ ಬುಧವಾರ ನೀರಿನ ಸಮಸ್ಯೆ ಕುರಿತಂತೆ ಪ್ರತಿ ಪಿಡಿಒಗಳಿಂದ ಮಾಹಿತಿ ಪಡೆಯಬೇಕು. ಬಹುಗ್ರಾಮ ಕುಡಿಯುವ ನೀರು, ಲಭ್ಯವಿರುವ ಜಲ ಸಂಪನ್ಮೂಲಗಳ ಲಭ್ಯತೆ ಆಧಾರದ ಮೇಲೆ ಖಾಸಗಿ ಬೋರ್‌ವೆಲ್ ಲಭ್ಯತೆ ಸೇರಿದಂತೆ ಕುಡಿಯುವ ನೀರು ಪೂರೈಕೆಗೆ ಇರುವ ಸಂಪನ್ಮೂಲ-ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಕಗಳ ಸಮರ್ಪಕ ಕಾರ್ಯ ನಿರ್ವಹಣೆ ಕುರಿತು ವಾರದೊಳಗೆ ಎಲ್ಲ ಸಮಸ್ಯೆ ಬಗೆಹರಿಸಿ ವರದಿ ಸಲ್ಲಿಸಬೇಕು. ಜಿಲ್ಲೆಯ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲೂಕುಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ದೂರುಗಳು ಬರುತ್ತಿವೆ. ತಕ್ಷಣವೇ ತಾಪಂ ಅಧಿಕಾರಿಗಳು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು.
ನೀರು ಪೂರೈಕೆ ವಿಷಯದಲ್ಲಿ ಯಾವುದೇ ಅಧಿಕಾರಿ ನಿರ್ಲಕ್ಷ್ಯವಹಿಸಿದ್ದು ಕಂಡು ಬಂದರೆ ಸಸ್ಪೆಂಡ್‌ನಂಥ ಶಿಸ್ತು ಕ್ರಮಕ್ಕೂ ಹಿಂಜರಿಕೆ ಮಾಡುವುದಿಲ್ಲ ಎಂದು ಎಚ್ಚರಿಸಿದರು. ಬೇಸಿಗೆ ಹಂಗಾಮಿನಲ್ಲಿ ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ನರೇಗಾ ಯೋಜನೆ ಜಾರಿಗೆ ತರಬೇಕು. ಇದರಲ್ಲಿ ಕೆರೆ, ಬಾಂದಾರ, ಅಂತರ್ಜಲ ನಿರ್ವಹಣೆ ಸೇರಿದಂತೆ ಸಾಮುದಾಯಿಕ ಕೆಲಸ ಗುರುತಿಸಿ, ಉದ್ಯೋಗ ಅವಕಾಶ ಕಲ್ಪಿಸಬೇಕು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.