Advertisement

ಶಸ್ತ್ರಾಸ್ತ್ರ ಸ್ವೀಕಾರ ವೇಳೆ ಶಂಕಿತ ಉಗ್ರರಿಂದ ಆಣೆ ಪ್ರಮಾಣ!

11:10 PM Jul 29, 2023 | Team Udayavani |

ಬೆಂಗಳೂರು: ಬೆಂಗಳೂರು ಸಹಿತ ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಸದ್ಯದಲ್ಲೇ ಅಧಿಕೃತವಾಗಿ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಲಿದೆ. ಈ ನಡುವೆ ಬೆನ್ನಲ್ಲೇ ಬೆಂಗಳೂರಿನ ಎನ್‌ಐಎ ಅಧಿಕಾರಿಗಳು ಸಿಸಿಬಿ ಪೊಲೀಸರು ಬಂಧಿಸಿರುವ ಐವರು ಶಂಕಿತರ ಪ್ರಾಥಮಿಕ ವಿಚಾರಣೆ ನಡೆಸಿ ಇಡೀ ವರದಿಯನ್ನು ದಿಲ್ಲಿಯಲ್ಲಿರುವ ಕೇಂದ್ರ ಕಚೇರಿಗೆ ರವಾನೆ ಮಾಡಿದ್ದಾರೆ.

Advertisement

ಶಂಕಿತರು ಲಷ್ಕರ್‌-ಎ-ತಯ್ಯಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರಿಯವಾಗಿರು ವುದು ಪತ್ತೆಯಾಗಿದೆ. ಜತೆಗೆ ನಾಜೀರ್‌ನಿಂದ ಪ್ರಚೋದನೆಗೊಂಡ ಉಗ್ರ ಸಂಘಟನೆ ಸೇರಿದ ಶಂಕಿತರು, ಶಸ್ತ್ರಾಸ್ತ್ರ ಸ್ವೀಕರಿಸುವಾಗ ಆಣೆ ಪ್ರಮಾಣ ಮಾಡಿದ್ದರು ಎಂಬುದು ತಿಳಿದು ಬಂದಿದೆ. ಬೆಂಗಳೂರು ಸರಣಿ ಬಾಂಬ್‌ ಸ್ಫೋಟದ ಆರೋಪಿ ನಾಜೀರ್‌ ಪ್ರಚೋದನೆ ಮೇರೆಗೆ ಅರಬ್‌ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಜುನೈದ್‌ ಉಗ್ರ ಸಂಘಟನೆ ಸದಸ್ಯರನ್ನು ಸಂಪರ್ಕಿಸಿದ್ದಾನೆ. ಅಲ್ಲದೆ, ಅವರಿಂದ ಲಕ್ಷಾಂತರ ರೂ. ಪಡೆದುಕೊಂಡು ತನ್ನ ಸಹಚರರಿಗೆ ಹಂಚಿದ್ದಾನೆ. ವಿದೇಶದಿಂದಲೇ ಜುನೈದ್‌ಗೆ ಹಣ ಸಂದಾಯವಾಗಿರುವ ಮಾಹಿತಿ ಸಿಕ್ಕಿದೆ. ಜತೆಗೆ ಎಲ್‌ಇಟಿ ಉಗ್ರರು ಕೂಡ ಜುನೈದ್‌ ಹಾಗೂ ಇತರ ಶಂಕಿತರಿಗೆ ಕೆಲವು ಟಾಸ್ಕ್ಗಳನ್ನು ನೀಡಿದ್ದರು.

ಅದರ ಪ್ರಕಾರ ಎಲ್ಲರೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಮಂಗಳೂರಿನ ಕೆಲ ಭಾಗಗಳನ್ನು ಶಂಕಿತರು ಟಾರ್ಗೆಟ್‌ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದರು ಎಂಬುದು ಪತ್ತೆಯಾಗಿದೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಬೆಂಗಳೂರಿನ ಎನ್‌ಐಎ ಅಧಿಕಾರಿಗಳು ಕೇಂದ್ರ ಕಚೇರಿಗೆ ವರದಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿ ಗೃಹ ಸಚಿವಾಲಯಕ್ಕೆ
ಈ ವರದಿಯನ್ನು ಎನ್‌ಐಎ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಿದ್ದು, ಆ ಬಳಿಕ ಸಚಿವಾಲಯದ ಸೂಚನೆ ಮೇರೆಗೆ ತನಿಖೆ ಆರಂಭಿಸಲಿದೆ. ಇನ್ನು ಸಿಸಿಬಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಿಸಿಕೊಂಡಿರುವುದರಿಂದ ಎನ್‌ಐಎ ಮುಂದಿನ ತನಿಖೆ ನಡೆಸಲಿದೆ. ಈ ಮಧ್ಯೆ ಸಿಸಿಬಿಯ ಹಿರಿಯ ಅಧಿಕಾರಿಗಳು ದಿಲ್ಲಿಗೆ ತೆರಳಿದ್ದು, ಪರಾರಿಯಾಗಿರುವ ಸಲ್ಮಾನ್‌ ಹಾಗೂ ಜುನೈದ್‌ ಪತ್ತೆಗಾಗಿ ಕೇಂದ್ರದ ತನಿಖಾ ಸಂಸ್ಥೆಗಳ ನೆರವು ಕೋರಿದ್ದಾರೆ.

ಪ್ರಚೋದನೆ ಗೊಂಡ ಉಗ್ರ ಸಂಘಟನೆ ಸೇರಿದ ಶಂಕಿತರು, ಶಸ್ತ್ರಾಸ್ತ್ರಗಳನ್ನು ಪಡೆಯು ವಾಗ ಆಣೆ ಪ್ರಮಾಣ ಮಾಡಿದ್ದರು ಎಂಬುದು ತಿಳಿದು ಬಂದಿದೆ. ಆತನ ಅಣತಿಯಿಂದ ಗ್ರೆನೇಡ್‌ ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯುವ ಮೊದಲು ನಾಜೀರ್‌ ಮತ್ತು ಜುನೈದ್‌ ಬಂಧಿತ ಐವರು ಶಂಕಿತರಿಂದ ಈ ವಿಚಾರವನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ತಾವು ಕಳುಹಿಸಿದ ಪಾರ್ಸ್‌ಲ್‌ ಅನ್ನು ಹೇಳುವವರೆಗೂ ತೆರೆಯುವುದಿಲ್ಲ ಎಂದು ಆಣೆ ಮಾಡಿಸಿಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ನಡುವೆ ಪೋಕ್ಸೋ ಪ್ರಕರಣದ ಆರೋಪಿ ಸಲ್ಮಾನ್‌ ಎಂಬಾತ ನಾಜೀರ್‌ ಸೂಚನೆ ಮೇರೆಗೆ ಜಾಹೀದ್‌ ತಬ್ರೇಜ್‌ಗೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯಿಂದ ಗ್ರೆನೇಡ್‌ ತಂದು ಕೊಟ್ಟಿದ್ದ. ಸದ್ಯ ಸಲ್ಮಾನ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next