ಹೊಸದಿಲ್ಲಿ: ಚೀನ ಗಡಿ ತಂಟೆ ಹಾಗೂ ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ವಿಪಕ್ಷಗಳಿಗೆ ಕೇಂದ್ರದ ಪ್ರಮುಖ ಸಚಿವರು ಮತ್ತು ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ. ಸೋಮವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿದ್ಯಮಾನ ಮಹತ್ವ ಪಡೆದಿದೆ. ಗುರುವಾರವೇ ಸರಕಾರವು ಹೊಸದಿಲ್ಲಿಯಲ್ಲಿ ಕಾಂಗ್ರೆಸ್, ಎಡಪಕ್ಷಗಳು, ಎಸ್‌ಪಿ ಸೇರಿದಂತೆ ವಿಪಕ್ಷಗಳ ಸಭೆ ಕರೆದಿತ್ತು. ಅದರಂತೆ, ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಸಿಪಿಎಂನ ಯೆಚೂರಿ, ಎಸ್ಪಿ ನಾಯಕ ಮುಲಾಯಂ ಸಿಂಗ್, ಎಲ್‌ಜೆಪಿಯ ಪಾಸ್ವಾನ್, ಟಿಎಂಸಿ ನಾಯಕ ಡೆರೆಕ್ ಒಬ್ರಿಯಾನ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಭಾರತ- ಭೂತಾನ್- ಟಿಬೆಟ್‌ನ ಸಂಗಮ ಪ್ರದೇಶವಾದ ಡೋಕ್‌ಲಾಂನಲ್ಲಿ ಚೀನವು ಯಥಾಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುತ್ತಿರುವ ಕುರಿತು ಸರಕಾರ ಕಳವಳಗೊಂಡಿರುವ ಬಗ್ಗೆ, ಕಾಶ್ಮೀರ ಪರಿಸ್ಥಿತಿ ಬಗ್ಗೆ ಹಾಗೂ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಪಕ್ಷ ನಾಯಕರಿಗೆ ಮಾಹಿತಿ ನೀಡಲಾಯಿತು.