ಹೊಸದಿಲ್ಲಿ: ಮುಂದಿನ ವರ್ಷದ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಶುಕ್ರವಾರ ನಡೆದ ಆಯ್ಕೆ ಟ್ರಯಲ್ಸ್ ಬಳಿಕ ಒಲಿಂಪಿಕ್ಸ್‌ನಲ್ಲಿ ಅವಳಿ ಪದಕ ಗೆದ್ದಿರುವ ಸುಶೀಲ್ ಕುಮಾರ್ ಮತ್ತು ಕುಸ್ತಿಪಟು ಪರ್ವೀನ್ ರಾಣ ಅವರ ಬೆಂಬಲಿಗರ ನಡುವೆ ಗುದ್ದಾಟ ನಡೆದ ಘಟನೆ ಸಂಭವಿಸಿದೆ.
ಮುಂದಿನ ವರ್ಷದ ಎಪ್ರಿಲ್‌ನಲ್ಲಿ ನಡೆಯುವ ಗೋಲ್ಡ್ ಕೋಸ್ಟ್ ಗೇಮ್ಸ್‌ಗೆ ಶುಕ್ರವಾರ ಇಲ್ಲಿನ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್ ನಡೆಯಿತು. ಭಾರತೀಯ ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿ| ಭೂಷಣ್ ಸಿಂಗ್ ಶರಣ್ ಸಹಿತ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಟ್ರಯಲ್ಸ್ ಬಳಿಕ ಸುಶೀಲ್ ಮತ್ತು ರಾಣ ಬೆಂಬಲಿಗರ ನಡುವೆ ತೀವ್ರ ಹೊಡೆದಾಟ ನಡೆಯಿತು. ಆಯ್ಕೆ ಟ್ರಯಲ್ಸ್‌ನಲ್ಲಿ ಗೆಲುವು ಸಾಧಿಸಿರುವ ಸುಶೀಲ್ ಕುಮಾರ್ ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಮತ್ತು ಸಸತ ಮೂರನೇ ಚಿನ್ನಕ್ಕಾಗಿ ಪ್ರಯತ್ನಿಸಲಿದ್ದಾರೆ.
ಮೂರು ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಸ್ಪರ್ಧೆಗೆ ಮರಳಿ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನ ಚಿನ್ನ ಜಯಿಸಿದ್ದ ಸುಶೀಲ್ 74 ಕೆ.ಜಿ. ವಿಭಾಗದಲ್ಲಿ ನಡೆದ ಎಲ್ಲ ಕಾದಾಟಗಳಲ್ಲಿ ಜಯ ಸಾಧಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಸುಶೀಲ್ ವಿರುದ್ಧ ಸೋತ ಬಳಿಕ ರಾಣ ಅವರು ಸುಶೀಲ್ ಬೆಂಬಲಿಗರು ನನ್ನ ಮತ್ತು ಹಿರಿಯ ಸಹೋದರನಿಗೆ ಹೊಡೆದಿದ್ದಾರೆ ಮಾತ್ರವಲ್ಲದೇ ರಿಂಗ್‌ಗೆ ಪ್ರವೇಶಿಸಿದರೆ ಸುಮ್ಮನೆ ಬಿಡುವುದಿಲ್ಲವೆಂದು ಹೆದರಿಸಿದ್ದರು ಎಂದು ದೂರಿದರು.
ಇದಕ್ಕೆ ಉತ್ತರವಾಗಿ ಸುಶೀಲ್ ಕೂಡ ಕಾದಾಟದ ವೇಳೆ ರಾಣ ನನಗೆ ಕಚ್ಚಿದರು. ಆದರೆ ಇದರಿಂದ ತೊಂದರೆ ಇಲ್ಲ. ಉತ್ತಮ ನಿರ್ವಹಣೆ ನೀಡದಂತೆ ಮಾಡಲು ಇದು ಅವರು ಮಾಡಿದ ತಂತ್ರವಾಗಿರಬಹುದು. ಇದೆಲ್ಲ ಆಟದ ಅಂಗವೆಂದು ಹೇಳಿದ್ದರು. ಇಲ್ಲಿ ಏನು ನಡೆಯಿತೋ ಅದು ತಪ್ಪು. ಇದನ್ನು ನಾನು ಖಂಡಿಸುತ್ತೇನೆ. ಕಾದಾಟ ಮುಗಿದ ಬಳಿಕ ತೀರ್ಪನ್ನು ಪರಸ್ಪರ ಗೌರವಿಸಬೇಕಿತ್ತು ಎಂದವರು ತಿಳಿಸಿದರು.
ಕೆಲವು ವಾರಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ 34 ವರ್ಷದ ಸುಶೀಲ್ ಅವರು ರಾಣ ಅವರನ್ನು ಸೋಲಿಸಿ ಚಿನ್ನ ಜಯಿಸಿದ್ದರು. ಆಬಳಿಕ ರಾಣ ಸಹಿತ ಮೂವರು ಕುಸ್ತಿಪಟುಗಳು ಕಳೆದ ತಿಂಗಳು ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಹಿರಿಯ ಕುಸ್ತಿಪಟುವಿಗೆ “ಗೌರವ’ ಸಲ್ಲಿಸುವ ಕಾರಣಕ್ಕಾಗಿ ವಾಕ್‌ಓವರ್ ನೀಡಿದ್ದರು.
ಆದರೆ ಶುಕ್ರವಾರ ನಡೆದ ಆಯ್ಕೆ ಟ್ರಯಲ್ಸ್ ಬಳಿಕ ರಾಣ ಅವರು ಸುಶೀಲ್ ವಿರುದ್ಧ ಹರಿಹಾಯ್ದರು. ಸುಶೀಲ್ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ ಮತ್ತು ಮುಂಬರುವ ಪ್ರೊ ಕುಸ್ತಿ ಲೀಗ್‌ನಲ್ಲಿ ಭಾಗವಹಿಸಿದರೆ ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಸಿದ್ದಾರೆ ಎಂದು ರಾಣ ದೂರಿದ್ದಾರೆ.
ಕುಸ್ತಿ ಸ್ಪರ್ಧೆ ನಡೆದ ತಾಣದ ಹೊರಗಡೆ ಬೆಂಬಲಿಗರು ಗುದ್ದಾಟ ನಡೆಸಿದ್ದಾರೆ. ಇದನ್ನು ನಾನು ನೋಡಿಲ್ಲ. ಆದರೆ ಫೆಡರೇಶನ್‌ಗೆ ಯಾರಾದರೂ ಅಧಿಕೃತವಾಗಿ ದೂರನ್ನು ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಫೆಡರೇಶನ್ ಅಧ್ಯಕ್ಷ ಶರಣ್ ಭರವಸೆ ನೀಡಿದ್ದಾರೆ.