ದುಬಾೖ: ಟಿ20 ರ್‍ಯಾಂಕಿಂಗ್ ನಲ್ಲಿ ಭಾರತದ ದಿಗ್ಗಜ ಆಟಗಾರರು ಪ್ರಗತಿ ಸಾಧಿಸಿದ್ದು, ಸೂರ್ಯಕುಮಾರ್ ಯಾದವ್ ಅವರು ಒಂದು ಸ್ಥಾನವನ್ನು ಜಿಗಿದು ವೃತ್ತಿಜೀವನದ ಅತ್ಯುತ್ತಮ ಎರಡನೇ ಸ್ಥಾನವನ್ನು ತಲುಪಿದ್ದಾರೆ . ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಮತ್ತು ಮೂರನೇ ಟಿ20ಐಗಳಲ್ಲಿ ಕ್ರಮವಾಗಿ ಔಟಾಗದೆ 46 ಮತ್ತು 17 ರನ್ ಗಳಿಸಿ 13ನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಕೂಡ 15 ನೇ ಸ್ಥಾನಕ್ಕೆ ಏರಿದ್ದಾರೆ, ಆದರೆ ಕೆಎಲ್ ರಾಹುಲ್ ನಾಲ್ಕು ಸ್ಥಾನಗಳ ಕುಸಿತದೊಂದಿಗೆ 22 ನೇ ಸ್ಥಾನಕ್ಕೆ ತಲುಪಿದ್ದಾರೆ.
ಪ್ರವಾಸಿ ಆಸ್ಟ್ರೇಲಿಯ ಎದುರಿನ 3 ಪಂದ್ಯಗಳ ಸರಣಿಯನ್ನು 2-1ರಿಂದ ತನ್ನದಾಗಿಸಿಕೊಂಡ ಭಾರತ, ಐಸಿಸಿ ಟೀಮ್ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಮೂರನೇ ಸ್ಥಾನಕ್ಕೆ ಇಳಿದಿರುವ ಪಾಕಿಸ್ಥಾನದ ನಾಯಕ ಬಾಬರ್ ಅಜಮ್(799) ಮತ್ತು ಸೂರ್ಯಕುಮಾರ್ (801) ನಡುವಿನ ಅಂತರ ಕೇವಲ ಒಂದೆರಡು ರೇಟಿಂಗ್ ಪಾಯಿಂಟ್‌ಗಳಾಗಿವೆ.
ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ 20 ಪಂದ್ಯದಲ್ಲಿ ಅಜೇಯ 110 ರನ್ ಗಳಿಸಿ ಪಾಕ್ ನ ಮೊಹಮ್ಮದ್ ರಿಜ್ವಾನ್ ಅವರು ಹಿಂದಿಕ್ಕುವ ಮೊದಲು ಅಜಮ್ 1,155 ದಿನಗಳ ಕಾಲ ನಂ.1 ಸ್ಥಾನವನ್ನು ಆಕ್ರಮಿಸಿಕೊಂಡಿದ್ದರು.
ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ (18) ಯುಜುವೇಂದ್ರ ಚಾಹಲ್ (26) ಮತ್ತು ವೇಗಿ ಹರ್ಷಲ್ ಪಟೇಲ್ (37) ಪ್ರಗತಿ ಸಾಧಿಸಿದ್ದಾರೆ. ಆದರೆ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರು ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದ್ದಾರೆ.