Advertisement

ಅಸ್ವಸ್ಥ ವಿದ್ಯಾರ್ಥಿನಿಯ ಜೀವರಕ್ಷಣೆ

05:23 PM Dec 17, 2017 | Team Udayavani |

ಕಾಸರಗೋಡು: ಕರುಳು ಸಂಬಂಧಿ ಸಮಸ್ಯೆಯಿಂದ ಅಸ್ವಸ್ಥರಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬರನ್ನು ಡಿ. 15ರ ರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 400 ಕಿ.ಮೀ. ದೂರದ ಎರ್ನಾಕುಲಂನ ಆಸ್ಪತ್ರೆಗೆ ಕೇವಲ ಆರು ಗಂಟೆಗಳಲ್ಲಿ ರಸ್ತೆಮಾರ್ಗವಾಗಿ ಆ್ಯಂಬುಲೆನ್ಸ್‌ನಲ್ಲಿ ಕರೆ ದೊಯ್ಯಲಾಗಿದೆ.

Advertisement

ಕರ್ನಾಟಕ-ಕೇರಳ ಪೊಲೀಸರು, ಚೈಲ್ಡ್‌ಲೈನ್‌ ಸಂಘಟನೆ ಮತ್ತು ಸಾಮಾಜಿಕ ಕಾರ್ಯಕರ್ತರು ಹಾಗೂ ಸಹೃದಯಿ ಸಾರ್ವಜನಿಕರು ರಾತ್ರಿಪೂರ್ತಿ ನಿದ್ದೆಗೆಟ್ಟು ರಾ.ಹೆ. 66ರಲ್ಲಿ ಪೂರಕವಾದ ಶೂನ್ಯ ಸಾರಿಗೆ ನಿರ್ಮಾಣ ಮಾಡಿದ್ದರಿಂದ ಈ ಸಾಹಸ ಸಾಧ್ಯವಾಗಿದೆ. ಸಾಮಾಜಿಕ ತಾಣಗಳಾದ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಲಾದ ಸಂದೇಶ ಇದಕ್ಕೆ ಸಹಕರಿಸಿತ್ತು.

ಮಂಗಳೂರಿನ ಯೂನಿಟಿ ಆಸ್ಪತ್ರೆಯಿಂದ ಡಿ. 15ರ ರಾತ್ರಿ 9.30 ಗಂಟೆಗೆ ಹೊರಟ ಆ್ಯಂಬುಲೆನ್ಸ್‌ ಎರ್ನಾಕುಲಂನ ಲೇಕ್‌ ಶೋರ್‌ ಆಸ್ಪತ್ರೆಗೆ ಡಿ. 16ರಂದು ಮುಂಜಾನೆ 3.30 ಗಂಟೆಗೆ ತಲುಪಿದ್ದು, ಕೂಡಲೇ ವಿದ್ಯಾರ್ಥಿನಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಮಂಗಳೂರಿನ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಉಪ್ಪಳ ಮಣಿಮುಂಡದ ಇಬ್ರಾಹಿಂ ಅವರ ಪುತ್ರಿ ಆಯಿಷತ್‌ ನುಸ್ರ (20) ಅವರು ಅಸೌಖ್ಯ ನಿಮಿತ್ತ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಪಾಸಣೆಯ ಸಂದರ್ಭದಲ್ಲಿ ಕರುಳಿಗೆ ಸಂಬಂಧಿಸಿದ ತೊಂದರೆ ಎಂಬುದು ತಿಳಿದು ಬಂದಿತ್ತು. ತುರ್ತು ಶಸ್ತ್ರಚಿಕಿತ್ಸೆ ನಡೆಸ ದಿದ್ದರೆ ಅಪಾಯ ಇದೆ ಎಂದು ವೈದ್ಯರು ತಿಳಿಸಿದ್ದರು. ವೈದ್ಯರು ಎರ್ನಾಕುಲಂನ ಲೇಕ್‌ಶೋರ್‌ ಆಸ್ಪತ್ರೆಯನ್ನು ಸಂಪರ್ಕಿಸಿ ಆರು ಗಂಟೆಯೊಳಗೆ ಶಸ್ತ್ರಚಿಕಿತ್ಸೆ ನಡೆಸ ಬೇಕೆಂದು ತಿಳಿಸಿದ್ದರು.

ಕೂಡಲೇ ನುಸ್ರ ಅವರ ಜೀವ ರಕ್ಷಣೆಗೆ ಪೊಲೀಸ್‌, ಸಾಮಾಜಿಕ ಕಾರ್ಯಕರ್ತರು, ಆ್ಯಂಬುಲೆನ್ಸ್‌, ಚಾಲಕರು ಮತ್ತಿತರರು ಕಟಿಬದ್ಧರಾದರು. ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮೂಲಕ ವಿನಂತಿ ಸಂದೇಶ ಪ್ರಸಾರ ಮಾಡಲಾಯಿತು. ಯಾವುದೇ ರಸ್ತೆ ಅಡಚಣೆಗಳು ಎದುರಾಗದೆ ಆ್ಯಂಬುಲೆನ್ಸ್‌ ಎರ್ನಾಕುಲಂ ತಲುಪಲು ವ್ಯವಸ್ಥೆ ಕಲ್ಪಿಸಲಾಯಿತು. ಮಂಗಳೂರಿನಿಂದ ಹೊರಟ ಆ್ಯಂಬುಲೆನ್ಸ್‌ಗೆ ಕಾಸರಗೋಡಿನ ವರೆಗೆ ನಾಲ್ಕು ಆ್ಯಂಬುಲೆನ್ಸ್‌ಗಳು ಹಾಗೂ ಪೊಲೀಸ್‌ ವಾಹನಗಳು ಬೆಂಗಾವಲಾಗಿ ಸಂಚರಿಸಿದವು. ಅಲ್ಲಿಂದ ಮುಂದಕ್ಕೂ ಇದೇ ರೀತಿಯ ಬೆಂಗಾವಲಿನೊಂದಿಗೆ ಆ್ಯಂಬುಲೆನ್ಸ್‌ ಎರ್ನಾಕುಲಂ ತಲುಪಿದ್ದು, ಅದಾಗಲೇ ಶಸ್ತ್ರಚಿಕಿತ್ಸೆಗೆ ಅಲ್ಲಿನ ವೈದ್ಯರು ಸಿದ್ಧತೆ ನಡೆಸಿದ್ದರು. ವಿದ್ಯಾರ್ಥಿನಿಯ ಜೀವರಕ್ಷಣೆಗೆ ಸಕಾಲದಲ್ಲಿ ಸಾಹಸ ಪ್ರದರ್ಶಿಸಿದ ಆ್ಯಂಬುಲೆನ್ಸ್‌ ಚಾಲಕ ಸಿರಾಜ್‌ ಅವರನ್ನು ಸರ್ವರೂ ಅಭಿನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next