ಚಿಕ್ಕಮಗಳೂರು : ಬೇಲೂರು-ಹಾಸನ ರೈಲುಮಾರ್ಗ ನಿರ್ಮಾಣಕ್ಕೆ ಈಗಾಗಲೇ ಭೂಸ್ವಾಧೀನಕ್ಕೆ ಸರ್ವೇ ಕಾರ್ಯ ನಡೆದಿದ್ದು, ಸರ್ಕಾರಿ ಜಾಗವನ್ನು ಗುರುತಿಸುವಂತೆ ಮೂಲ ಸೌಕರ್ಯ, ಬಂದರು, ಒಳನಾಡು, ಜಲಸಾರಿಗೆ, ಹಜ್ ಮತ್ತು ವಕ್ಫ್ ಸಚಿವ ಆನಂದ್‌ಸಿಂಗ್ ಅಧಿಕಾರಿಗಳಿಗೆ ತಿಳಿಸಿದರು.
ಶುಕ್ರವಾರ ನಗರದ ಜಿಪಂ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಚಿಕ್ಕಮಗಳೂರು- ಬೇಲೂರು- ಹಾಸನ ರೈಲುಮಾರ್ಗ ನಿರ್ಮಾಣದ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚಿಕ್ಕಮಗಳೂರಿನಿಂದ ಹಾಸನ ರೈಲುಮಾರ್ಗ ನಿರ್ಮಾಣಕ್ಕೆ 1,200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಲಾಗಿದೆ. ಭೂಸ್ವಾ ಧೀನ ಸೇರಿದಂತೆ ಮೊದಲ ಹಂತದಲ್ಲಿ 465 ಕೋಟಿ ರೂ. ಮಂಜೂರಾಗಿದೆ ಎಂದ ಅವರು, ಹಣ ಮಂಜೂರಾಗಿ ಎರಡು ವರ್ಷ ಕಳೆದರೂ ಕೂಡ ಕಾಮಗಾರಿ ಪ್ರಾರಂಭವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಚಿಕ್ಕಮಗಳೂರಿನಿಂದ ಬೇಲೂರಿಗೆ 22ಕಿ. ಮೀ. ಮತ್ತು ಬೇಲೂರಿನಿಂದ ಹಾಸನಕ್ಕೆ 38 ಕಿ.ಮೀ. ಸೇರಿದಂತೆ ಒಟ್ಟು 60 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾ ಧೀನ ವಾಗಿದ್ದು, ಇದರಲ್ಲಿ ಸರ್ಕಾರಿ ಜಾಗವನ್ನು ಗುರುತಿಸುವಂತೆ ತಿಳಿಸಿದ ಸಚಿವರು, ಭೂಸ್ವಾ ಧೀನಪಡಿಸಿಕೊಂಡಿರುವ ಫಲಾನುಭವಿಗಳಿಗೆ ಪರಿಹಾರ ನೀಡಲಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಚಿಕ್ಕಮಗಳೂರು ಉಪವಿಭಾಗಾಧಿ ಕಾರಿ ಡಾ| ಎಚ್.ಎಲ್. ನಾಗರಾಜ್ ಸಭೆಗೆ ಮಾಹಿತಿ ನೀಡಿ, ರೈಲ್ವೆ ಮಾರ್ಗ ನಿರ್ಮಾಣಕ್ಕೆ ಈಗಾಗಲೇ 150 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಫಲಾನುಭವಿಗಳಿಗೆ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಸಿ.ಟಿ. ರವಿ ಮಾತನಾಡಿ, ರೈಲ್ವೆ ಮಾರ್ಗ ಹಳಿಗಳ ಮಾರ್ಗದಲ್ಲಿ ಗ್ರಾಮಗಳು ಒಳಪಟ್ಟಿದ್ದರೆ ಅಂತಹ ಜಾಗವನ್ನು ಗುರುತಿಸಿ ಬೇರೆ ಕಡೆಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲಾ ಧಿಕಾರಿಗಳು ಸಭೆ ಸೇರಿ ರೈಲ್ವೆ ಮಾರ್ಗ ನಿರ್ಮಾಣದ ಬಗ್ಗೆ ಚರ್ಚಿಸಿ ಕಾಮಗಾರಿ ಪ್ರಾರಂಭಕ್ಕೆ ಗಮನ ಹರಿಸಬೇಕೆಂದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಜೆ. ಸೋಮಶೇಖರಪ್ಪ, ಜಿಲ್ಲಾ ಧಿಕಾರಿ ಕೆ.ಎನ್. ರಮೇಶ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಎಸ್.ಪೂವಿತ, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಎಂ.ಎಚ್. ಅಕ್ಷಯ್, ಅಪರ ಜಿಲ್ಲಾ ಧಿಕಾರಿ ಬಿ.ಆರ್. ರೂಪ ಮತ್ತಿತರರು ಇದ್ದರು