ಬೆಂಗಳೂರು: ನಗರದಲ್ಲಿ ಕೆರೆಗಳ ಒತ್ತುವರಿ ತೆರವು ಹಾಗೂ ಸರ್ವೇ ಕಾರ್ಯಕ್ಕೆ ಮೂವರು ತಹಶೀಲ್ದಾರರನ್ನು ನೇಮಕ ಮಾಡಿದ್ದರೂ, ಯಾವುದೇ ಒತ್ತುವರಿ ತೆರವು ಕಾರ್ಯಾಚರಣೆ ಹಾಗೂ ಸರ್ವೇ ಪ್ರಾರಂಭವಾಗಿಲ್ಲ. ಜುಲೈ ತಿಂಗಳಲ್ಲೇ ಮೂರು ಜನ ತಹಶೀಲ್ದಾರರಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿ ಪಾಲಿಕೆಯಲ್ಲಿ ವರದಿಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಆದರೆ, ದೇವರು ವರ ಕೊಟ್ಟರೂ ಪೂಜಾರಿ ವರ ನೀಡಲಿಲ್ಲ ಎನ್ನುವಂತೆ ಸರ್ಕಾರವೇ ವಿಶೇಷ ಅಧಿಕಾರ ನೀಡಿದರೂ, ಇಲ್ಲಿಯವರೆಗೆ ಯಾವ ಅಧಿಕಾರಿಯೂ ಪಾಲಿಕೆಗೆ ವರದಿ ಮಾಡಿಕೊಂಡಿಲ್ಲ.
ಹೀಗಾಗಿ, ನಗರದಲ್ಲಿನ ಕೆರೆಗಳ ಒತ್ತುವರಿ ತೆರವು ಹಾಗೂ ಕಾರ್ಯಾಚರಣೆಗೆ ಹಿನ್ನಡೆ ಉಂಟಾಗಿದೆ. ನಿಯೋಜಿಸಿರುವ ತಹಶೀಲ್ದಾರರು ವರದಿ ಮಾಡಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಪಾಲಿಕೆ ಸರ್ಕಾರಕ್ಕೆ ಮೂರು ಬಾರಿ ಸತತವಾಗಿ ಪತ್ರ ಬರೆದಿದೆ.
ಪಾಲಿಕೆ ವ್ಯಾಪ್ತಿಯ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸರ್ಕಾರ ಹಾಗೂ ಪಾಲಿಕೆ ಜಂಟಿಯಾಗಿ ನಿರ್ವಹಿಸಬೇಕು ಎಂದು ಕೋರ್ಟ್ ಸೇರಿದಂತೆ ವಿವಿಧ ಸಮಿತಿಗಳು ನಿರ್ದೇಶನ ನೀಡಿವೆ. ಹೀಗಾಗಿ, ಸರ್ಕಾರ ತಹಶೀಲ್ದಾರರಿಗೆ ವಿಶೇಷ ದಂಡಾಧಿಕಾರಿ (ಮ್ಯಾಜಿಸ್ಟ್ರೇಟ್) ಅಧಿಕಾರ ನೀಡಿದೆ. ಇವರು ಸರ್ವೇ ಕಾರ್ಯ ಪೂರ್ಣಗೊಂಡಿರುವ 160 ಕೆರೆಗಳ ಒತ್ತುವರಿ ತೆರವು ಹಾಗೂ ಸರ್ವೇ ಆಗಬೇಕಿರುವ ಕೆರೆಗಳ ಕಾರ್ಯಾಚರಣೆಯಲ್ಲಿತೊಡಗಿಸಿಕೊಳ್ಳಲು ನಿರ್ದೇಶನ ನೀಡಲಾಗಿದೆ.
160 ಕೆರೆಗಳ ಒತ್ತುವರಿಯನ್ನು ಬಿಬಿಎಂಪಿ ಸೇರಿದಂತೆ ಸರ್ಕಾರದವಿವಿಧಇಲಾಖೆಗಳುಬಳಸಿಕೊಂಡಿವೆ.ಇವುಗಳಿಂದ ಒಟ್ಟು 535.21 ಎಕರೆ ಕೆರೆ ಪ್ರದೇಶಗಳನ್ನು ಒತ್ತುವರಿ ಆಗಿದ್ದು, ರಸ್ತೆ, ಪಾರ್ಕ್ ಕಟ್ಟಡ, ರಿಂಗ್ ರಸ್ತೆ ಸೇರಿದಂತೆ ವಿವಿಧ ಉದ್ದೇಶಗಳಿಗೆ ಬಳಕೆ ಮಾಡಲಾಗಿದೆ. ಇನ್ನು 249.30 ಎಕರೆ ಪ್ರದೇಶವನ್ನು ಖಾಸಗಿ ವ್ಯಕ್ತಿಗಳು, ಧಾರ್ಮಿಕ ಬಳಕೆ ಹಾಗೂ ಶಾಲಾ- ಕಾಲೇಜು ಸೇರಿದಂತೆ ಇನ್ನಿತರ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ ಎಂದು ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. ಇವುಗಳ ಒತ್ತುವರಿ ತೆರವು ಹಾಗೂ ಸರ್ವೇಗೆ ಸರ್ಕಾರ ಮುಂದಾಗಿತ್ತಾದರೂ, ತಹಶೀಲ್ದಾರರುಹಿಂದೇಟು ಹಾಕುತ್ತಿರುವುದರಿಂದ ಕಾರ್ಯಾಚರಣೆಗೆ ಮುಹೂರ್ತ ಕೂಡಿಬಂದಿಲ್ಲ.
ಕೋವಿಡ್ ಸೋಂಕನ್ನು ಆರೋಗ್ಯ ವಿಪತ್ತು ಎಂದು ಘೋಷಿಸಿರುವುದರಿಂದ ರಾಜ್ಯ ಹೈಕೋರ್ಟ್ ಕೋವಿಡ್ ಸೋಂಕಿನ ಸಮಸ್ಯೆ ಪರಿಹಾರ ಆಗುವವರೆ ಒತ್ತುವರಿ ತೆರವು ಕೈಗೊಳ್ಳದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಇದಕ್ಕೂ ಮುನ್ನ ಹಾಗೂ ತಡೆಯಾಜ್ಞೆ ತೆರವು ಆದ ಮೇಲೂ ಅಧಿಕಾರಿಗಳು ವರದಿ ಮಾಡಿಕೊಂಡಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಯೋಜನವಾಗದ ವಿಶೇಷಾಧಿಕಾರ: ಸರ್ಕಾರ ಕರೆ ಒತ್ತುವರಿಯಾಗುವವರೆಗೆ ತಹಶೀಲ್ದಾರರಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ನೀಡಿದೆ. ಅಲ್ಲದೆ, ನಿಯೋಜನೆಗೊಂಡಿರುವ ತಹಶೀಲ್ದಾರರು ನಗರದಲ್ಲಿನಕೆರೆಗಳ ಒತ್ತುವರಿ ತೆರವು ಹಾಗೂ ಸರ್ವೇ ಮಾಡುವ ನಿಟ್ಟಿನಲ್ಲಿ ಭೂಮಾಪಕರನ್ನು ಒಳಗೊಂಡಪ್ರತ್ಯೇಕ ಕೋಶವನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೃಜಿಸಲೂ ಪಾಲಿಕೆ ಸರ್ಕಾರಕ್ಕೆ ಮನವಿ ಮಾಡಿತ್ತು. ಇದರಲ್ಲಿ ಯಾವ ಒಂದು ಅಂಶವೂಕಾರ್ಯರೂಪಕ್ಕೆ ಬಂದಿಲ್ಲ. ಕೆರೆ ಒತ್ತುವರಿ ತೆರವಿಗೆ ನಿಯೋಜನೆ ಸಂಜೀವ್‌ಕುಮಾರ ದಾಸರ, ಬಿ.ಎಸ್.ರಾಜೀವ್ ಹಾಗೂ ಮಧುರಾಜ ತಹಶೀಲ್ದಾರರನ್ನು ಈ ಹಿಂದೆ ನಿಯೋಜನೆ ಮಾಡಲಾಗಿತ್ತು. ಇತ್ತೀಚೆಗೆ ಶ್ರೀಧರ ಮೂರ್ತಿ ಜಿ.ಬಿ ಹಾಗೂ ನರಸಿಂಹ ಮೂರ್ತಿ ಕೆ ಅವರನ್ನು ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಸರ್ಕಾರ ತಹಶೀಲ್ದಾರರಿಗೆ ಮ್ಯಾಜಿಸ್ಟ್ರೇಟ್‌ಅಧಿಕಾರ ನೀಡಿ ಒತ್ತುವರಿ ತೆರವುಕಾರ್ಯಾಚರಣೆಗೆ ಬಳಸಿಕೊಳ್ಳಲು ನಿರ್ದೇಶಕ ನೀಡಿದೆ. ಆದರೆ,ಯಾರೂ ವರದಿ ಮಾಡಿಕೊಳ್ಳದೆಇರುವುದರಿಂದ ಒತ್ತುವರಿ ತೆರವು ಕಾರ್ಯಾಚರಣೆಗೆ ಹಿನ್ನಡೆ ಆಗಿದೆ.-
ಬಿ.ಟಿ. ಮೋಹನ್‌ಕೃಷ್ಣ , ಬಿಬಿಎಂಪಿ (ಕೆರೆ ವಿಭಾಗ) ಮುಖ್ಯ ಎಂಜಿನಿಯರ್
–ಹಿತೇಶ್ ವೈ