ಚಿಕ್ಕಬಳ್ಳಾಪುರ: ಯಾವುದೇ ಶಾಶ್ವತ ನದಿ ನಾಲೆ ಗಳು ಇಲ್ಲದ ಜಿಲ್ಲೆಯ ಪಾಲಿಗೆ ಕೆರೆ, ಕುಂಟೆಗಳೇ ಜೀವ ನದಿಗಳು. ಆದರೆ, ವಿಪರ್ಯಾಸದ ಸಂಗತಿಯೆಂದರೆ ಜಿಲ್ಲೆಯ ಜಲಮೂಲಗಳ ಸಂರಕ್ಷಣೆ ಹಾಗೂ ಅವುಗಳ ಒತ್ತುವರಿ ತೆರವಿಗೆ ನಡೆಯಬೇಕಿದ್ದ ಮಹತ್ವಾಕಾಂಕ್ಷಿ ಕೆರೆಗಳ ಸರ್ವೆ ಕಾರ್ಯ ಮಾತ್ರ ಜಿಲ್ಲೆಯಲ್ಲಿ ಅಧಿಕಾರಶಾಹಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಹೌದು, ಕೆರೆಗಳ ನಾಡು ಎಂದೇ ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಕೊರತೆಯಿದೆ. ಹೀಗಾಗಿ ಮಳೆ ನೀರು ಸಂರಕ್ಷಣೆಗೆ ಪೂರ್ವಿಕರು ಅಪಾರ ಪ್ರಮಾಣದಲ್ಲಿ ಕೆರೆ, ಕುಂಟೆಗಳನ್ನು ಕಟ್ಟಿದ್ದಾರೆ. ಆದರೆ, ಅವು ಇತ್ತೀಚಿನ ಹಲವು ವರ್ಷಗಳಿಂದ ಮರಳು ದಂಧೆ ಜತೆಗೆ ಭೂಗಳ್ಳರ ಕಣ್ಣು ಬಿದ್ದು ಮಾಯವಾಗುತ್ತಿವೆ.
ಕೆರೆಗಳ ಸರ್ವೆಗೆ ಅಸಡ್ಡೆ: ಜಿಲ್ಲೆಯಲ್ಲಿರುವ ಕೆರೆಗಳ ಸಂರಕ್ಷಣೆ, ಅವುಗಳ ಒತ್ತುವರಿ ಪತ್ತೆಗಾಗಿ ನಡೆಯಬೇಕಿದ್ದ ಸರ್ವೆ ಕಾರ್ಯ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯದೇ ನನೆಗುದಿಗೆ ಬಿದ್ದಿವೆ. ಜಿಲ್ಲಾದ್ಯಂತ ಬರೋಬ್ಬರಿ 1,533 ಕೆರೆಗಳಿವೆ. ಆದರೆ, ಇಲ್ಲಿವರೆಗೂ ಒತ್ತುವರಿ ಗುರುತು ಮಾಡಿ ತೆರವು ಮಾಡಲು ಕೆರೆಗಳ ಸರ್ವೆ ಕಾರ್ಯ ಆಗಿದ್ದು ಮಾತ್ರ ಕೇವಲ 651. ಇನ್ನೂ ಜಿಲ್ಲೆಯಲ್ಲಿ ಬರೋಬ್ಬರಿ 882 ಕೆರೆ ಸರ್ವೆ ಕಾರ್ಯಕ್ಕೆ ಎದುರು ನೋಡುತ್ತಿವೆ. ಪರಿಣಾಮ ಅಕ್ರಮ ಒತ್ತುವರಿಯಿಂದ ಬಹಳಷ್ಟು ಕೆರೆಗೆ ಸಮರ್ಪಕವಾಗಿ ಮಳೆ ನೀರು ಸಂಗ್ರಹ ಇನ್ನೂ ಸಾಧ್ಯವಾಗಿಲ್ಲ. ಬಹುತೇಕ ಕಡೆ ರಾಜಕಾಲುವೆಗಳ ಒತ್ತುವರಿ ಹೆಚ್ಚಾಗಿದೆ.
ಕೆರೆಗಳದ್ದು 53,556 ಎಕರೆ ವಿಸ್ತೀರ್ಣ: ಜಿಲ್ಲೆಯಲ್ಲಿ ಒಟ್ಟು 1,533 ಕೆರೆಗಳ ಅಚ್ಚುಕಟ್ಟು ಬರೋಬ್ಬರಿ 53,556 ಎಕರೆ 17 ಗುಂಟೆ ಪ್ರದೇಶದ ವಿಸ್ತೀರ್ಣ ಹೊಂದಿವೆ. ಆದರೆ, ಒಟ್ಟು ಕೆರೆಗಳ ಪೈಕಿ ಜಿಲ್ಲೆಯಲ್ಲಿ ಈವರೆಗೂ ಕೇವಲ 651 ಕೆರೆ ಸರ್ವೆ ನಡೆದು ಒಟ್ಟು ಅವುಗಳ ವಿಸ್ತೀರ್ಣ 32,016.05 ಎಕರೆ ಗುರುತಿಸಲಾಗಿದೆ. ಆ ಪೈಕಿ ಸರ್ವೆ ವೇಳೆ 341 ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಅಕ್ರಮವಾಗಿ ಭೂಗಳ್ಳರು ಒಟ್ಟು 2,813.22 ಎಕರೆ ಜಾಗ ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಗಿದೆ. ಆ ಪೈಕಿ 244 ಕೆರೆಗಳ 2,622.23 ಎಕರೆ ಒತ್ತುವರಿ ಜಾಗವನ್ನು ಕಂದಾಯ ಅಧಿಕಾರಿಗಳು ಕಾರ್ಯಾಚರಣೆ ತೆರವುಗೊಳಿಸಿದ್ದಾರೆ. ಇನ್ನೂ 97 ಕೆರೆಗಳ ಒಟ್ಟು 184 ಎಕರೆ ಜಾಗದ ಒತ್ತುವರಿ ತೆರವುಗೊಳಿಸುವುದು ಬಾಕಿ ಇದೆ.
ಸದ್ಯ ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದೆ. ಬಹಳಷ್ಟು ಕೆರೆ ಒತ್ತುವರಿಯಾಗಿ ಹೂಳು ತುಂಬಿ ಮಳೆ ನೀರು ಸಂಗ್ರಹ ಕಷ್ಟವಾಗಿದೆ. ಕೆಲವೊಂದು ಕಡೆ ಕೆರೆಗಳನ್ನು ಅಕ್ರಮವಾಗಿ ಉಳುಮೆ ಮಾಡಿ ಕೆಲ ಪ್ರಭಾವಿ ನಾಯಕರು, ಮುಖಂಡರು ಬೆಳೆಗಳನ್ನು ಬೆಳೆಯುತ್ತಿರುವುದು ಕಂಡು ಬಂದಿದೆ. ಆದರೆ, ಜಿಲ್ಲಾಡಳಿತ ಏಕೋ ಸುಮ್ಮನೆ ಕೂತಿದೆ. ಜಿಲ್ಲೆಯಲ್ಲಿ ಸರ್ವೆ ಕಾರ್ಯಕ್ಕೆ ಬಾಕಿ ಇರುವ ಉಳಿದ 882 ಕೆರೆ ಸರ್ವೆ ಕಾರ್ಯ ಯಾವಾಗ ನಡೆಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೆರೆಗಳ ಸರ್ವೆ ಮುಕ್ತಾಯ: ಜಿಲ್ಲೆಯ ಇತರೇ ತಾಲೂಕುಗಳಿಗೆ ಹೋಲಿಸಿಕೊಂಡರೆ ರೇಷ್ಮೆ ನಗರಿ ಶಿಡ್ಲಘಟ್ಟ ತಾಲೂಕಿನಲ್ಲಿ ಕೆರೆಗಳ ಸಂಪೂರ್ಣ ಸರ್ವೆ ಕಾರ್ಯ ಮಾಡಲಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ ಒಟ್ಟು 165 ಕೆರೆಗಳಿದ್ದು ಎಲ್ಲಾ ಕೆರೆಗಳನ್ನು ಸರ್ವೆ ಮಾಡಿಸಲಾಗಿದೆ. 165 ಕೆರೆ ಪೈಕಿ 37 ಕೆರೆಗಳ ಒಟ್ಟು 1,890.30 ಎಕರೆ ಜಾಗ ಒತ್ತುವರಿಯನ್ನು ಪತ್ತೆ ಹಚ್ಚಲಾಗಿದೆ. ಆ ಪೈಕಿ 22 ಕೆರೆಗಳ 1,853.18 ಎಕರೆಯಷ್ಟು ಅಕ್ರಮ ಒತ್ತುವರಿ ತೆರವುಗೊಳಿಸಲಾಗಿದೆ. ಇನ್ನೂ 15 ಕೆರೆಗಳ 37 ಎಕರೆ ಅಕ್ರಮ ಒತ್ತುವರಿ ತೆರವುಗೊಳಿಸುವುದು ಬಾಕಿ ಇದೆ.
ಒಟ್ಟು 554 ಕೆರೆಗಳಲ್ಲಿ 31,825.6 ಎಕರೆ ಒತ್ತುವರಿ ತೆರವು: ಜಿಲ್ಲಾದ್ಯಂತ ಇರುವ ಒಟ್ಟು 1,533 ಕೆರೆ ಪೈಕಿ ಈಗಾಗಲೇ ನಡೆಸಿರುವ 651 ಕೆರೆಗಳ ಸರ್ವೆಯಲ್ಲಿ ಒಟ್ಟು 554 ಕೆರೆಗಳಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಬರೋಬ್ಬರಿ 31,825.6 ಎಕರೆ ಅಕ್ರಮ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ. ಈ ವೇಳೆ ಪ್ರಬಲರು ವಿರೋಧ ವ್ಯಕ್ತಪಡಿಸಿದರೂ ತೆರವು ಕಾರ್ಯ ನಿಲ್ಲಲಿಲ್ಲ.
– ಕಾಗತಿ ನಾಗರಾಜಪ್ಪ