ಕಟಪಾಡಿ: ಕಟಪಾಡಿ- ಮಣಿಪುರ ಸಂಪರ್ಕ ರಸ್ತೆಯ ಬೀದಿ ಬದಿ ಎಸೆಯುವ ತ್ಯಾಜ್ಯವನ್ನು ಪಿಡಿಒ, ಸಿಬಂದಿ, ಉಪಾಧ್ಯಕ್ಷೆ, ಸದಸ್ಯರು, ಸ್ಥಳೀಯರು ಸೇರಿಕೊಂಡು ಬೀದಿಗಿಳಿದು ಸ್ವಚ್ಛತೆಯನ್ನು ನಡೆಸಿದ್ದು ತ್ಯಾಜ್ಯ ಎಸೆಯದಂತೆ ಸ್ಥಳೀಯರು ಕಣ್ಗಾವಲು ಬುಧವಾರ ಪ್ರಾರಂಭಿಸಿರುತ್ತಾರೆ.
ಚರ್ಚ್ ಜಂಕ್ಷನ್‌ನಿಂದ ಮಣಿಪುರ ರೈಲ್ವೇ ಮೇಲ್ಸೇತುವೆ, ಶ್ಮಶಾನದವರೆಗೆ ಸುಮಾರು ಒಂದೂವರೆ ಕಿ.ಮೀ.ನಷ್ಟು ಪ್ರದೇಶದ ರಸ್ತೆಯ ಇಕ್ಕೆಲಗಳಲ್ಲಿ ಅನಾಗರಿಕರು ಎಸೆದ ತ್ಯಾಜ್ಯವನ್ನು ಅಧಿಕಾರಿ, ಜನಪ್ರತಿನಿಧಿಗಳು ಮತ್ತು ಸುಮಾರು 30 ರಷ್ಟಿದ್ದ ಸ್ಥಳೀಯರು ಸೇರಿಕೊಂಡು ಸ್ವಚ್ಛಗೊಳಿಸಿ ವಿಲೇವಾರಿಗಾಗಿ ಪೇರಿಸಿಟ್ಟಿರುತ್ತಾರೆ. ತ್ಯಾಜ್ಯವನ್ನು ಎಸೆಯದಂತೆ ಮತ್ತು ಎಸೆದವರಿಗೆ ದಂಡದ ಬಗ್ಗೆ ಉಲ್ಲೇಖೀಸಿದ ಬ್ಯಾನರನ್ನೂ ಸ್ಥಳದಲ್ಲಿ ಅಳವಡಿಸಲಾಗಿದೆ.
ಇನ್ನು ಮುಂದಕ್ಕೆ ಇಲ್ಲಿ ತ್ಯಾಜ್ಯ ಎಸೆಯುವ ಬಗ್ಗೆ ತಂಡವಾಗಿ ಕಾದು ಕುಳಿತು ತ್ಯಾಜ್ಯ ಎಸೆಯುವವರ ವಿರುದ್ಧ ತಂಡವಾಗಿಯೇ ಕಾರ್ಯಾಚರಣೆಯನ್ನು ನಡೆಸಲಿದ್ದು ಮುಂದಕ್ಕೆ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ನಯೀಂ ತಿಳಿಸುವಂತೆ ತ್ಯಾಜ್ಯ ಎಸೆಯುವುದು ನಿಲ್ಲಿಸುವವರೆಗೆ ತಂಡವಾಗಿ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಸ್ಥಳೀಯರೊಂದಿಗೆ ಗ್ರಾಮದ ಸ್ವಚ್ಛತೆಗಾಗಿ ಕೈ ಜೋಡಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.
ಈ ಸಂದರ್ಭ ಪಿ.ಡಿ.ಒ. ಇನಾಯತುಲ್ಲಾ ಬೇಗ್, ಉಪಾಧ್ಯಕ್ಷೆ ಪ್ರಭಾ ಬಿ.ಶೆಟ್ಟಿ, ಸದಸ್ಯರಾದ ಮೊಹಮ್ಮದ್ ನಯೀಂ, ಸುಗುಣಾ, ಸಿಬಂದಿ ಸರೋಜಾ ಸಾಲ್ಯಾನ್, ಸ್ಥಳೀಯರಾದ ಗ್ರೇಸಿ ಮೊಂತೆರೋ, ಶಾಂತಿ ಮೊಂತೆರೋ, ಸಿಂಥಿಯಾ ಡಿಸೋಜ, ಜೋಸೆಫ್ ಮೊಂತೆರೋ, ಫ್ರೀಡಾ ಪಿಂಟೋ, ವಿನ್ಸೆಂಟ್ ಪಿರೇರಾ, ಸ್ಟಾ ್ಯನಿ ಪಿರೇರಾ, ಡಯಾನಾ ಮೊಂತೆರೋ ಪಾಲ್ಗೊಂಡಿದ್ದರು.