Advertisement
ಕಾಟ ಕೊಡುತ್ತಿರುವ ಮಂಗಗಳನ್ನು ಹಿಡಿದು ಕಾಡಿಗೆ ಅಟ್ಟುವುದಕ್ಕೆ ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ ಕೃಷಿಕರು ಕೈಜೋಡಿಸಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ರಂಗಸ್ವಾಮಿ ಅವರನ್ನು ಕರೆಸಿಕೊಂಡಿದ್ದಾರೆ. ರಂಗಸ್ವಾಮಿ ಅವರ ಕಾಯಕ ಕೃಷಿಗೆ ಹಾನಿ ಮಾಡುತ್ತಿರುವ ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವುದು. ಅವರು ತನ್ನ ತಂದೆಯಿಂದ ಈ ವಿದ್ಯೆಯನ್ನು ಕಲಿತು ಅದನ್ನೇ ವೃತ್ತಿ ಮಾಡಿ ಕೊಂಡಿದ್ದಾರೆ. ಆಶ್ಚರ್ಯವೆಂದರೆ ರಂಗಸ್ವಾಮಿ ಮತ್ತವರ ಕುಟುಂಬಕ್ಕೆ 25 ವರ್ಷಗಳಿಂದ ಇದೇ ಪ್ರಮುಖ ಕಸುಬು ಮತ್ತು ಆದಾಯ ಮೂಲ. ಒಂದು ಊರಿನಲ್ಲಿ ತೋಟಕ್ಕೆ ಲಗ್ಗೆ ಹಾಕುವ ಕಪಿಗಳನ್ನು ಹಿಡಿದು ಕಾಡಿಗೆ ಬಿಡುವುದಕ್ಕೆ ಅವರು ವಿಧಿಸುವ ಶುಲ್ಕ 30ರಿಂದ 35 ಸಾವಿರ ರೂ.! ಸರಪಾಡಿ ಕೃಷಿಕರು 35,000 ರೂ. ಸಂಭಾವನೆಗೆ ರಂಗ ಸ್ವಾಮಿ, ತಂಡವನ್ನು ಕರೆಸಿಕೊಂಡಿದ್ದಾರೆ.
ಸಾಮಾನ್ಯವಾಗಿ ವಾನರ ಸೇನೆ ಒಬ್ಬ ಕೃಷಿಕರ ತೋಟಕ್ಕೆ ಲಗ್ಗೆ ಇಟ್ಟರೆ ಆ ಬಳಿಕ ಅಕ್ಕಪಕ್ಕದ ತೋಟಗಳಿಗೂ ನುಗ್ಗಿ ಹಣ್ಣು
ಹಂಪಲು, ತರಕಾರಿ ಸಹಿತ ಫಸಲನ್ನು ಕಿತ್ತು, ತಿಂದು ಹಾಕುತ್ತವೆ. ಏನೂ ಸಿಗದಿದ್ದರೆ ಬಾಳೆತಿರಿ, ಎಳೆಯ ಬಾಳೆಗಿಡ, ಚಿಗುರು, ಹೂವುಗಳನ್ನೂ ಮುಕ್ಕುತ್ತವೆ. ಕೃಷಿಕರು ತಮಗೆ ತಿಳಿದಿರುವ ವಿಧಾನಗಳನ್ನೆಲ್ಲ ಪ್ರಯೋಗಿಸಿ ಕಪಿ ಓಡಿಸಿ ಸುಸ್ತಾಗುತ್ತಾರೆಯೇ ಹೊರತು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದೇ ಇಲ್ಲ. ಹೀಗಿರುವಾಗ ರಂಗಸ್ವಾಮಿ ಬಗ್ಗೆ ತಿಳಿದ ಸರಪಾಡಿ ಗ್ರಾಮಸ್ಥರು ಅವರನ್ನು ಕರೆಸಿಕೊಳ್ಳುವ ತೀರ್ಮಾನ ಮಾಡಿದ್ದರು. ಜಿಲ್ಲೆಯಲ್ಲಿ ರೋಗಬಾಧೆಯಿಂದ ತೆಂಗಿನಕಾಯಿ ಉತ್ಪಾದನೆ ಕುಂಠಿತವಾಗಿದೆ, ಬೆಲೆ ಗಗನಕ್ಕೇರಿದೆ; ಹೀಗಿರುವಾಗ ಅಧಿಕ ಸಂಭಾವನೆ ಪಾವತಿಸಿ ರಂಗಸ್ವಾಮಿ ಮತ್ತು ತಂಡವನ್ನು ಕರೆಸಿಕೊಂಡರೂ ಅದರಿಂದ ನಷ್ಟವಾಗದು ಎಂಬ ಲೆಕ್ಕಾಚಾರ ಹಾಕಿದ್ದಾರೆ. ಸದ್ಯ ರಂಗಸ್ವಾಮಿ ಮತ್ತು ಅವರ ಪತ್ನಿ ಸರಪಾಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಸರಪಾಡಿ ಗ್ರಾಮದಲ್ಲಿರುವ ಎಲ್ಲ ಕೋತಿಗಳನ್ನು ಸೆರೆಹಿಡಿದು ಕಾಡಿಗೆ ಬಿಡುವ ತನಕ ರಂಗಸ್ವಾಮಿ ತಂಡ ಇಲ್ಲೇ ಠಿಕಾಣಿ ಹೂಡಿರುತ್ತದೆ. ಕಾರ್ಯಾಚರಣೆ ಹೇಗೆ ?
ಕೃಷಿಕರ ಜತೆ ಮಂಗ ಹಿಡಿಯುವ ಖರ್ಚುವೆಚ್ಚದ ಬಗ್ಗೆ ಒಪ್ಪಂದ ಮಾಡಿಕೊಂಡ ಬಳಿಕ ರಂಗಸ್ವಾಮಿ ಮತ್ತು ತಂಡ ಕೃಷಿಕರ ತೋಟಗಳಿಗೆ ಆಗಮಿಸುತ್ತದೆ. ಅನಂತರ ಕೋತಿಗಳ ಚಲನವಲನದ ಬಗ್ಗೆ ನಿಗಾ ವಹಿಸುತ್ತಾರೆ. ಜತೆಗೆ ವಾನರ ತಂಡ ರಾತ್ರಿ ಎಲ್ಲಿ ಉಳಿದುಕೊಳ್ಳುತ್ತದೆ ಎಂಬುದನ್ನು ಕೂಡ ಗಮನಿಸುತ್ತಾರೆ. ಮಂಗಗಳು ಹೆಚ್ಚಾಗಿ ಓಡಾಡುವ ತೋಟದೊಳಗೆ ಒಂದೆಡೆ ಅಡಿಕೆ ಮರದ ಸಲಿಕೆಗಳಿಂದ ವಿಶೇಷವಾದ ಗೂಡು ನಿರ್ಮಿಸುತ್ತಾರೆ. ಈ ಗೂಡಿಗೆ ಹತ್ತಿರದಲ್ಲೇ ತೆಂಗಿನ ಗರಿಗಳ
ಮತ್ತೂಂದು ಗೂಡನ್ನು ನಿರ್ಮಿಸಿ ಅದರೊಳಗೆ ಕೋತಿಗಳ ಆಗಮನವನ್ನು ಕಾಯುತ್ತಿರುತ್ತಾರೆ. ಮಂಗಗಳನ್ನು ಸೆರೆಹಿಡಿಯುವ ಗೂಡಿಗೂ ರಂಗಸ್ವಾಮಿ ತಂಡ ಅವಿತಿರುವ ಗೂಡಿಗೂ ಹಗ್ಗದ ಸಂಪರ್ಕ ಇದ್ದು, ಕೋತಿಗಳು ಗೂಡಿನೊಳಗೆ ಪ್ರವೇಶಿಸಿದ ತತ್‌ಕ್ಷಣ ಹಗ್ಗದ ಮೂಲಕ ಅದರ ಬಾಗಿಲು ಮುಚ್ಚಿ ಸೆರೆ ಹಿಡಿಯುತ್ತಾರೆ.
Related Articles
Advertisement
ಕೂಡಿ ಹಾಕಿದ ಕಪಿಗಳು ಗಲಾಟೆ ಮಾಡದಂತೆ ಆಹಾರ ನೀಡಿ ಸುಮ್ಮನಿರಿಸಲಾಗುತ್ತದೆ. ಹಿಡಿದ ಕೋತಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ವಾಹನದಲ್ಲಿ ಅವುಗಳನ್ನು ದೂರದ ಕಾಡಿಗೆ ಒಯ್ದು ಬಿಡಲಾಗುತ್ತದೆ. ಸಾಮಾನ್ಯವಾಗಿ ರಂಗಸ್ವಾಮಿ ಈ ರೀತಿ ಕೋತಿಗಳನ್ನು ಹಿಡಿದು ಕಾಡಿಗೆ ಬಿಟ್ಟ ಅನಂತರ ಕೃಷಿಕರಿಗೆ ಅವುಗಳ ಕಾಟವಿರುವುದಿಲ್ಲ.
ಕೋತಿ ಸೆರೆ ವೃತ್ತಿಗೆ 25 ವರ್ಷಅರಸೀಕೆರೆ ತಾಲೂಕಿನ ಬಾಣಾವರ ಎಂಬ ಹಳ್ಳಿಯ ನಿವಾಸಿ ರಂಗಸ್ವಾಮಿಯವರ ತಂಡ ಕಳೆದ 25 ವರ್ಷಗಳಿಂದ ಕೋತಿ ಹಿಡಿದು ಕಾಡಿಗೆ ಬಿಡುವ ಕಾರ್ಯವನ್ನು ಮಾಡುತ್ತಿದೆ. ಒಂದು ಬಾರಿಗೆ ಗರಿಷ್ಠ ಸುಮಾರು 60 ಕೋತಿಗಳನ್ನು ಇವರು ಹಿಡಿದಿದ್ದಾರೆ. ಸ್ಥಳೀಯವಾಗಿ ಕೆಲವು ಮಂದಿ ಕೃಷಿಕರು ಸೇರಿ ಹಣಹೊಂದಿಸಿಕೊಂಡು ಇವರ ತಂಡವನ್ನು ಸಂಪರ್ಕಿಸುತ್ತಾರೆ. ಸೆರೆಹಿಡಿದ ಕೋತಿಗಳಿಗೆ ಆಹಾರವನ್ನು ಕೃಷಿಕರೇ ನೀಡಬೇಕಾಗುತ್ತದೆ.