ನವದೆಹಲಿ: ಸರ್ಜಿಕಲ್ ದಾಳಿಯನ್ನು ಮತ್ತೆ ಮತ್ತೆ ವೈಭವೀಕರಿಸುವುದು ತಪ್ಪು ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಅವರು ಬೇಸರ ವ್ಯಕ್ತಪಡಿಸಿದ್ದು, ಇದೀಗ ರಾಜಕೀಯ ಕಾದಾ ಟಕ್ಕೂ ಕಾರಣವಾಗಿದೆ. ಮೇಜರ್ ಹೂಡಾ ಅವರ ಹೇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, “”ಮಿಸ್ಟರ್36ಗೆ ನಾಚಿಕೆಯೇ ಇಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿವೃತ್ತ ಲೆಫ್ಟಿನೆಂಟ್ ಜನರಲ್ ಡಿ.ಎಸ್.ಹೂಡಾ ಅವರು, ಸರ್ಜಿಕಲ್ ದಾಳಿಯನ್ನು ಹೆಚ್ಚು ವೈಭವೀಕರಣ ಮಾಡುವುದರಿಂದ ಸೇನೆಗೆ ಯಾವುದೇ ಲಾಭವಾಗುವುದಿಲ್ಲ. ಆರಂಭದಲ್ಲಿ ಯಶಸ್ಸಿನ ಖುಷಿ ಇರುತ್ತದೆ, ಅದನ್ನು ಅನು ಭವಿಸಬೇಕು ಅಷ್ಟೇ ಎಂದೂ ಹೇಳಿದ್ದಾರೆ. ಆದರೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು, ಮತ್ತೆ ಮತ್ತೆ ಪ್ರಸ್ತಾಪಿಸುವ ಮೂಲಕ ಹೈಪ್ ಮಾಡುವುದು ಸಲ್ಲದು ಎಂದಿದ್ದರು.
ಮೊದಲಿನಿಂದಲೂ ಸರ್ಜಿಕಲ್ ದಾಳಿಯನ್ನು ಬಿಜೆಪಿ ಲಾಭಕ್ಕಾಗಿ ಬಳಸಿಕೊಳ್ಳು ತ್ತಿದೆ ಎಂಬುದು ಕಾಂಗ್ರೆಸ್ ಆರೋಪವಾಗಿತ್ತು. ಹೀಗಾಗಿ ಹೂಡಾ ಅವರ ಹೇಳಿಕೆ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ನೇರವಾಗಿ ಪ್ರಧಾನಿಗೇ ಟಾಂಗ್ ನೀಡಿದ್ದಾರೆ. “”ಮಿ 36(36 ರಫೇಲ್ ವಿಮಾನಗಳ ಖರೀದಿ ಹಗರಣ)ಗೆ ನಾಚಿಕೆಯಾಗುವುದಿಲ್ಲ” ಎಂದು ರಾಹುಲ್ ಟೀಕಿಸಿದ್ದಾರೆ.
ಅತ್ತ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರು ಪ್ರತಿಕ್ರಿಯೆ ನೀಡಿದ್ದು, ಸರ್ಜಿಕಲ್ ದಾಳಿಯನ್ನು ಮುನ್ನ‚ಡೆಸಿದ ವರಲ್ಲಿ ಡಿ.ಎಸ್.ಹೂಡಾ ಅವರೂ ಒಬ್ಬರು. ಹೀಗಾಗಿ ಅವರ ವೈಯಕ್ತಿಕ ಹೇಳಿಕೆಗಳಿಗೆ ಬೆಲೆ ಕೊಡಬೇಕಾದದ್ದು ನಮ್ಮ ಕರ್ತವ್ಯ. ಹೀಗಾಗಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ, ಸೇನೆಯ ನಾರ್ದರ್ನ್ ಕಮಾಂಡ್ ಚೀಫ್ ಲೆ.ಜ. ರಣಬೀರ್ ಸಿಂಗ್ ಅವರು ಮಾತನಾಡಿ, ಸರ್ಜಿಕಲ್ ದಾಳಿಯು ಒಂದು ಯಶಸ್ವಿ ಕಾರ್ಯಾಚರಣೆಯಾಗಿದ್ದು, ಪಾಕಿಸ್ತಾನಕ್ಕೆ ದುಸ್ಸಾಹಸ ನಿಲ್ಲಿಸಿ ಎಂಬ ಸ್ಪಷ್ಟ ಸಂದೇಶ ವನ್ನು ರವಾನಿಸಿದೆ ಎಂದು ಹೇಳಿದ್ದಾರೆ.