ಕಲಬುರಗಿ: ಇಲ್ಲಿನ ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ (ಡಿಸಿಸಿ) ಬ್ಯಾಂಕ್ ನ ಹಂಗಾಮಿ ಅಧ್ಯಕ್ಷರಾಗಿ ಸುರೇಶ ಸಜ್ಜನ್ ಶುಕ್ರವಾರ ಅಧಿಕಾರ ವಹಿಸಿಕೊಂಡರು.
ಸರ್ಕಾರದಿಂದ ನಿರ್ದೇಶಕರಾಗಿ ನಾಮನಿರ್ದೇಶನಗೊಂಡು ಅಧ್ಯಕ್ಷರಾಗಿದ್ದ ಸೇಡಂ ಕ್ಷೇತ್ರದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ ತೆರವು ಆಗಿರುವ ಸ್ಥಾನಕ್ಕೆ ಬ್ಯಾಂಕ್ ನ ಹಾಲಿ ಉಪಾಧ್ಯಕ್ಷರಾಗಿರುವ ಸುರೇಶ ಸಜ್ಜನ ಹಂಗಾಮಿ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡರು.
ಹಂಗಾಮಿ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡ ನಂತರ ಬ್ಯಾಂಕ್ ನ ಆಡಳಿತ ಮಂಡಳಿ ಸಭೆ ನಡೆಸಿದ ಸಜ್ಜನ್ ಅವರು, ಬ್ಯಾಂಕ್ ನ ಆರ್ಥಿಕ ಸ್ಥಿತಿ ಹಾಗೂ ಸಾಲ ವಸೂಲಾತಿ ಮತ್ತು ವಿತರಣೆ ಬಗ್ಗೆ ಮಾಹಿತಿ ಪಡೆದುಕೊಂಡರು.
ರೈತರಿಗೆ ಹೊಸದಾಗಿ ಸಾಲ ವಿತರಿಸುವ ಹಾಗೂ ಸಾಲ ಮರುಪಾವತಿ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಬೆಂಬಲ ಅಗತ್ಯವಾಗಿದೆ ಎಂದು ಸಜ್ಜನ್ ಹೇಳಿದರು.
Related Articles
ನಿಯೋಗ: ರೈತರಿಗೆ ಹೊಸದಾಗಿ ಸಾಲ ವಿತರಿಸಲು ಅಪೆಕ್ಸ್ ಮತ್ತು ನಬಾರ್ಡ್ ದಿಂದ ಸಾಲ ದೊರಕುವಂತಾಗಲು ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರ ಬಳಿ ಎರಡು ವಾರದೊಳಗೆ ನಿಯೋಗ ಹೋಗಲಾಗುವುದು ಎಂದು ಸಭೆಯಲ್ಲಿ ಹಂಗಾಮಿ ಅಧ್ಯಕ್ಷ ಸುರೇಶ ಸಜ್ಜನ್ ಪ್ರಕಟಿಸಿದರು.
ಸಾಲ ನೀಡುವಿಕೆ ಹಾಗೂ ವಸೂಲಾತಿ ಬಗೆಗೆ ಹಾಗೂ ಸರ್ಕಾರದಿಂದ ಇರುವ ಸಾಲ ಸೌಲಭ್ಯಗಳ ಕುರಿತಾಗಿ ರೈತರು ಮತ್ತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ನಗರದ ಗಾಜಿಪುರದಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ಜರುಗಿದ ಎಲ್ಲ ನಿರ್ದೇಶಕರ ಸಭೆಯಲ್ಲಿ ಚರ್ಚೆ ನಡೆಸಿ ನಿಯಮದಂತೆ ಹಾಲಿ ಉಪಾಧ್ಯಕ್ಷ ಸುರೇಶ ಸಜ್ಜನ ಅವರನ್ನು ಸರ್ವಾನುಮತದಿಂದ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಆಯ್ಕೆಯಾಗುತ್ತಲೇ ಎಲ್ಲ ನಿರ್ದೇಶಕರು ಹಾಗೂ ಅಧಿಕಾರಿಗಳು ಸಜ್ಜನ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಬ್ಯಾಂಕಿನ ಮುಂಭಾಗದಲ್ಲಿ ಜಮಾಗೊಂಡಿದ್ದ ಅವರ ಬೆಂಬಲಿಗರು ಸುರೇಶ ಸಜ್ಜನ ಆಯ್ಕೆ ಘೋಷಣೆ ಮಾಡುತ್ತಲೇ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ್, ಕೆವೈಡಿಸಿಸಿ ನಿರ್ದೇಶಕರಾದ ಸೋಮಶೇಖರ ಗೋನಾಯಕ, ಶರಣಬಸಪ್ಪ ಪಾಟೀಲ್ ಅಷ್ಟಗಿ, ಬಾಪುಗೌಡ ಪಾಟೀಲ್ ಹುಣಸಗಿ, ಸಿದ್ರಾಮರಡ್ಡಿ ಕೌಳೂರ ಯಾದಗಿರಿ, ಗೌತಮ ಪಾಟೀಲ್ ಚಿಂಚೋಳಿ, ಬಸವರಾಜ ಪಾಟೀಲ್ ಹೇರೂರ, ಅಶೋಕ ಸಾವಳೇಶ್ವರ ಆಳಂದ, ಚಂದ್ರಶೇಖರ ತಳ್ಳಳ್ಳಿ, ನಿಂಗಣ್ಣ ದೊಡ್ಡಮನಿ, ಉತ್ತಮ ಬಜಾಜ ಮೊದಲಾದವರಿದ್ದರು. ಸಿಇಒ ಮತ್ತು ಎಂಡಿ ವಿಶ್ವನಾಥ ಮಲಕೂಡ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ತದನಂತರ ನಡೆದ ಸಂಭ್ರಮಾಚರಣೆಯಲ್ಲಿ ಕಿಶೋರ ಸೇಠ ಸುರಪುರ, ಪ್ರಕಾಶ ಸಜ್ಜನ, ರಾಜಾ ಮುಕುಂದ ನಾಯಕ, ಮಂಜುನಾಥ ಗುಳಗಿ, ಮಲ್ಲಿಕಾರ್ಜುನ ರಡ್ಡಿ ಹತ್ತಿಕುಣಿ, ಶಾಂತರಡ್ಡಿ ಚೌಧರಿ ಮುದನೂರ, ವಿಶ್ವರಾಧ್ಯ ಸತ್ಯಂಪೇಟೆ, ರೇವಣಸಿದ್ದಪ್ಪ ಸಂಕಾಲಿ, ಶರಣು ಬಿಲ್ಲಾಡ, ಚಂದ್ರಕಾಂತ ಗೌಡರ ಸೇರಿದಂತೆ ಅನೇಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.