ಬೆಂಗಳೂರು: ಹೊಸಪೇಟೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ವಾಗ್ಧಾಳಿ ನಡೆಸಿರುವುದಕ್ಕೆ ರಾಜ್ಯ ಬಿಜೆಪಿ ವಕ್ತಾರ ಎಸ್.ಸುರೇಶ್ ಕುಮಾರ್ ಖಂಡಿಸಿದ್ದಾರೆ.
ರಾಹುಲ್‌ಗಾಂಧಿ ಕರ್ನಾಟಕದ ಪ್ರವಾಸದಲ್ಲೂ ಗುಜರಾತ್ ಚುನಾವಣೆ ವೇಳೆ ಮಾಡಿದ್ದ ಭಾಷಣವನ್ನೇ ಮಾಡಿದ್ದಾರೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿದ್ದರೂ ಅವುಗಳನ್ನು ಪ್ರಸ್ತಾಪಿಸದೇ ಇರುವುದು ಕನ್ನಡಿಗರಿಗೆ ಮತ್ತು ಕರ್ನಾಟಕಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‌ಗಾಂಧಿ ಭಾಷಣದಲ್ಲಿ ನಿರುದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ, 3500ಕ್ಕೂ ಅಧಿಕ ರೈತರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅತ್ಮಹತ್ಯೆಗೆ ಶರಣಾಗಿದ್ದಾರೆ. ಆ ಬಗ್ಗೆ ಪ್ರಸ್ತಾಪ ಯಾಕೆ ಮಾಡಿಲ್ಲ? ಇದೇನಾ ರೈತರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷರಿಗೆ ಇರುವ ಕಾಳಜಿ ಎಂದು ಪ್ರಶ್ನಿಸಿದರು.
ಮಹದಾಯಿ ವಿವಾದ ಇತ್ಯರ್ಥಕ್ಕೆ ಕಾಂಗ್ರೆಸ್‌ನಿಂದ ತಡೆಯಾಗಿದ್ದಾರೂ ರಾಹುಲ್ ಗಾಂಧಿ ಇದನ್ನು ಪ್ರಸ್ತಾಪಿಸಿಲ್ಲ. ರಾಹುಲ್‌ಗಾಂಧಿಯವರ ಮೌನ ರಾಜ್ಯದ ರೈತರಿಗೆ ಮಾಡಿದ ಮಹಾದ್ರೋಹ ಎಂದು ದೂರಿದರು.
ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಚಕಾರ ಎತ್ತಿಲ್ಲ. ಮುಖ್ಯಮಂತ್ರಿ ದುಬಾರಿ ವಾಚು, ಗೋವಿಂದರಾಜು ಡೈರಿ, ಸ್ಟೀಲ್ ಬ್ರಿಡ್ಜ್ ವ್ಯವಹಾರ ಪ್ರಸ್ತಾಪಿಸಿಲ್ಲ ಎಂದು ತಿರುಗೇಟು ನೀಡಿದರು.