Advertisement

ಊರಿನ ಋಣ ತೀರಿಸುವ ಕಾರ್ಯ ದೊಡ್ಡದು

06:46 PM Jan 21, 2021 | Team Udayavani |

ಚಿತ್ರದುರ್ಗ: ಇದು ನಿಜಕ್ಕೂ ಸವಾಲಿನ ವರ್ಷ. ಪರಿಸ್ಥಿತಿ ಬದಲಾಗಿದ್ದು, ಶಾಲೆ ಶುಲ್ಕ ಕಟ್ಟಲು ಪೋಷಕರಿಗೆ ಸಾಧ್ಯವಾಗಿಲ್ಲ. ಇದರಿಂದ ಖಾಸಗಿ ಶಾಲೆ ಶಿಕ್ಷಕರ ವೇತನ ಸಿಕ್ಕಿಲ್ಲ. ಆದರೂ ಸರ್ಕಾರಿ ಶಾಲೆ ಶಿಕ್ಷಕರ ವೇತನ ವಿಳಂಬವಾಗದಂತೆ ನೋಡಿಕೊಂಡಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದರು.

Advertisement

ತಾಲೂಕಿನ ದಂಡಿನಕುರುಬರಹಟ್ಟಿ ಗ್ರಾಮದಲ್ಲಿ ರೈಲ್ವೆ ಇಲಾಖೆ ನಿವೃತ್ತ ನೌಕರ ಸಣ್ಣಕ್ಕಿ ಪ್ರಹ್ಲಾದ್‌ ನಿರ್ಮಿಸಿಕೊಟ್ಟಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ಇದನ್ನೂ ಓದಿ :  ‘ಪಠಾಣ್’ ಚಿತ್ರದ ಚಿತ್ರೀಕರಣದ ವೇಳೆ ನಿರ್ದೇಶಕರ ಮೇಲೆ ಹಲ್ಲೆ! ನಡೆದಿದ್ದೇನು?

ಮಕ್ಕಳನ್ನು ಶಾಲೆಗೆ ಸೇರಿಸಬೇಕು. ಆಗ ಮಾತ್ರ ಮುಂದಿನ ತರಗತಿಗೆ ಹೋಗಲು ಸಾಧ್ಯ. ಶಾಲಾವರಣದಲ್ಲಿ ವಿದ್ಯಾಗಮ ಆರಂಭವಾಗಿದೆ. 1 ರಿಂದ 4ರವರೆಗಿನ ಮಕ್ಕಳಿಗೆ ರೇಡಿಯೋದಲ್ಲಿ ನಲಿಯುತ್ತಾ ಕಲಿಯುವ ಕಾರ್ಯಕ್ರಮ ಮಾಡಿದ್ದೇವೆ ಎಂದರು.ಮಾತಾ-ಪಿತೃ ಋಣ ಹಾಗೂ ಊರಿನ ಋಣ ತೀರಿಸುವ ಕಾರ್ಯ ದೊಡ್ಡದು. ಮಕ್ಕಳನ್ನು ನೋಡಿದಾಗ ನಮ್ಮ ಜವಾಬ್ದಾರಿ ಹೆಚ್ಚುತ್ತದೆ. ಈ ಗ್ರಾಮದ ಪ್ರಹ್ಲಾದ್‌ ಮಾಡಿದ ಉದಾರ ಮನಸ್ಸಿನ ಕೆಲಸ ಎಲ್ಲರಿಗೂ ಮಾದರಿ. ಒಂದೇ ಕೊಠಡಿ ಇದ್ದರೂ ಅದರ ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದೇನೆ. ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಅವರು ಇನ್ನೂ ಎರಡು ಕೊಠಡಿಗಳನ್ನು ಡಿಎಂಎಫ್‌ ನಿಧಿಯಲ್ಲಿ ನಿರ್ಮಿಸಿಕೊಡಲಿದ್ದಾರೆ. ಸಮಾಜದ ಸಮಸ್ಯೆಗೆ ಪರಿಹಾರ ಹುಡುಕಲು ಈ ಮಕ್ಕಳಿಂದ ಮಾತ್ರ ಸಾಧ್ಯ. ಇಲ್ಲಿ ಕಲಿತ ಮಕ್ಕಳು ವಿದೇಶಕ್ಕೆ ಹಾರುವುದಿಲ್ಲ. ಮಹನೀಯರಾಗಿ ನಿರ್ಮಾಣ ಆಗುವಂತಹ ವ್ಯಕ್ತಿಗಳನ್ನು ಸೃಷ್ಟಿ ಮಾಡೋಣ ಎಂದು ತಿಳಿಸಿದರು.

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಶಿಕ್ಷಣ ಸಚಿವರು ಗ್ರಾಮಕ್ಕೆ ಬಂದಿದ್ದು ಅದೃಷ್ಟ. ಮಂತ್ರಿ ಆಗಿರುವ ಭಾವನೆ ಅವರಲ್ಲಿಲ್ಲ. ಸುರೇಶ್‌ ಕುಮಾರ್‌ ಬದ್ಧತೆ ಇರುವ ರಾಜಕಾರಣಿ. ಗೋವಿಂದೇ ಗೌಡರ ಬಳಿಕ ಅತ್ಯಂತ ಕಳಕಳಿ ಹೊಂದಿದ ಸಚಿವರು ಶಿಕ್ಷಣ ಇಲಾಖೆಗೆ ಬಂದಿದ್ದಾರೆ ಎಂದು ಶ್ಲಾಘಿಸಿದರು.

Advertisement

ಜಿಲ್ಲೆಯಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಕಟ್ಟಡಗಳೇ ಹೆಚ್ಚಿವೆ. ಪುನರ್‌ ನಿರ್ಮಾಣಕ್ಕೆ ನೂರು ಕೋಟಿ ಬೇಕಾಗಬಹುದು. ಮಕ್ಕಳಿಗೆ ಶುಲ್ಕ ಪಾವತಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದಾರೆ. ಮಕ್ಕಳು  ಕೂಲಿ ಕೆಲಸಕ್ಕೆ ಹೋಗುತ್ತಿರುವುದು ಬೇಸರದ ಸಂಗತಿಯಾಗಿದೆ. ಅಕ್ಷರ ಕಲಿಯುವುದನ್ನು ಬಿಟ್ಟು ಕೂಲಿ ಮಾಡುತ್ತಿದ್ದಾರೆ. ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಸರ್ವ ಶಿಕ್ಷಣ ಅಭಿಯಾನದಲ್ಲಿ ಶಾಲಾ ಕೊಠಡಿ ಮಂಜೂರಾಗಿತ್ತು. ಈಗ ಸಚಿವರು ಜಿಲ್ಲೆಗೆ 35 ಕೋಟಿ ರೂ. ಅನುದಾನ ನೀಡಿದ್ದಾರೆ.  ಡಿಎಂಎಫ್‌ ನಿ ಯಿಂದಲೂ ಅನುದಾನಬರುವಂತೆ ಮಾಡಿದ್ದಾರೆ ಎಂದರು.

ಇದನ್ನೂ ಓದಿ : ಬುಡಕಟ್ಟು ಹಿನ್ನೆಲೆ  ಜಾತಿ ಎಸ್‌ಸಿ-ಎಸ್‌ಟಿ ಮೀಸಲಿಗೆ ಅರ್ಹ: ಪ್ರೊ| ಕೆ.ಎಂ. ಮೈತ್ರಿ

ರಾಜ್ಯಸಭೆ ಮಾಜಿ ಸದಸ್ಯ ಎಚ್‌.ಹನುಮಂತಪ್ಪ ಮಾತನಾಡಿ, ಬಹುತೇಕರು ತಮ್ಮ ಹುಟ್ಟೂರು ಮರೆತು ಬಿಡುತ್ತಾರೆ. ಆದರೆ ಪ್ರಹ್ಲಾದ್‌ ಹೀಗೆ ಮಾಡಲಿಲ್ಲ. ಗ್ರಾಮಕ್ಕೆ ಮರಳಿ ಶಾಲೆ ಕಟ್ಟಿಸಿದರು. ಇತರರು ಪ್ರಹ್ಲಾದ್‌ ಅವರನ್ನು ಮಾದರಿಯಾಗಿ ಪರಿಗಣಿಸಿ ನೆರವು ನೀಡಿದರೆ ಸರ್ಕಾರಿ ಶಾಲೆಗೆ ಅನುಕೂಲ ಆಗಲಿದೆ ಎಂದು ಹೇಳಿದರು. ನೂತನ ಶಿಕ್ಷಣ ನೀತಿ ಬರುತ್ತಿದೆ. ಕಾಲ ಬದಲಾಗಿದ್ದು ಹಳ್ಳಿಗಳಲ್ಲಿ ವಿದ್ಯೆ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಸಿಗುತ್ತಿಲ್ಲ. ಆದರೂ ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಪ್ರಗತಿ ಕಾಣಿಸುತ್ತಿದೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದ ಅನೇಕರು ಉನ್ನತ ಸಾಧನೆ ಮಾಡಿದ್ದಾರೆ. ಆದರೆ ಸರ್ಕಾರಿ ಶಾಲೆಗೆ ನೆರವು ನೀಡಿದ್ದು ಕಡಿಮೆ. ಪ್ರಹ್ಲಾದ್‌ ಕಾರ್ಯ ಎಲ್ಲರಿಗೂ ಮಾದರಿ. ಶಾಲೆಗಳ ಹಲವು ಕೊಠಡಿಶಿಥಿಲಗೊಂಡಿವೆ. ಅವನ್ನು ಪುನರ್‌ ನಿರ್ಮಾಣಕ್ಕೆ ಸರ್ಕಾರ ಇನ್ನಷ್ಟು ಒತ್ತು ನೀಡಬೇಕು ಎಂದುಒತ್ತಾಯಿಸಿದರು.

ಜಿಪಂ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ತಾಪಂ ಅಧ್ಯಕ್ಷ ಲಿಂಗರಾಜು, ಡಯಟ್‌ ಪ್ರಾಂಶುಪಾಲ ಎಸ್‌.ಕೆ.ಬಿ ಪ್ರಸಾದ್‌, ಡಿಡಿಪಿಐ ರವಿಶಂಕರ ರೆಡ್ಡಿ ಮತ್ತಿತರರು ಇದ್ದರು.

 

ಬಿಸಿಯೂಟ ನೀಡಲಾಗದ್ದಕ್ಕೆ ಬೇಸರ

ಶಿಕ್ಷಕರ ವರ್ಗಾವಣೆ ದೊಡ್ಡ ಸಮಸ್ಯೆ. ಅದಕ್ಕಾಗಿ ನಾವು ಕಾನೂನು ತಂದಿದ್ದೇವೆ. ಆದರೆ ಶಿಕ್ಷಕರೇ ತಡೆಯಾಜ್ಞೆ ತಂದಿದ್ದಾರೆ ಎಂದು ವಿಷಾದಿಸಿದ ಸುರೇಶ್‌ಕುಮಾರ್‌, ಒಂದನೇ ತರಗತಿಯಿಂದ ಶಾಲೆ ಆರಂಭಿಸಲು ಅನೇಕರು ಹೇಳುತ್ತಿದ್ದಾರೆ. ಕೊರೊನಾ ಒಂದು ದಿನಕ್ಕೆ ಹೋಗುವುದಿಲ್ಲ. ಹೀಗಾಗಿ ಅದರೊಂದಿಗೆ ಬದುಕಬೇಕು. ಅಂತರ, ಮಾಸ್ಕ್ ಮೂಲಕ ಕೋವಿಡ್‌ ದೂರ ಮಾಡಬೇಕಿದೆ. ಮಕ್ಕಳು ಶಾಲೆಗೆ ಬಂದರೂ ಬಿಸಿಯೂಟ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಬೇಸರವಿದೆ ಎಂದು ಸಚಿವ ಸುರೇಶ್‌ ಕುಮಾರ್‌ ಹೇಳಿದರು.

 

ಇದನ್ನೂ ಓದಿ : ತಾಪಂಗೆ ಬೇಕಿದೆ ಅನುದಾನ-ಅಧಿಕಾರ

 

Advertisement

Udayavani is now on Telegram. Click here to join our channel and stay updated with the latest news.

Next