Advertisement

ಯಶಸ್ವೀ ಸಾವಯವ ಕೃಷಿಕ ದಂಪತಿ ಸುರೇಶ್‌ ಗೌಡ-ಶೋಭಾ

10:00 AM Jan 03, 2020 | mahesh |

ನಾವು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಆದ್ದರಿಂದಲೇ ಭೂಮಿಯ ಜತೆಗೆ ಒಡನಾಡುವ ಕೃಷಿಗೆ ಮಹತ್ವದ ಸ್ಥಾನವಿದೆ. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್‌ ದಿನಾಚರಣೆ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿ ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.

Advertisement

ಹೆಸರು: ಸುರೇಶ್‌ ಗೌಡ (54), ಶೋಭಾ (44)
ಏನು ಕೃಷಿ: ಸಮಗ್ರ ಕೃಷಿ
ಕೃಷಿ ಪ್ರದೇಶ: ನಾಲ್ಕೂ ಮುಕ್ಕಾಲು ಎಕ್ರೆ

ವಿಟ್ಲ: ಪುಣಚ ಗ್ರಾಮದ ಸುರೇಶ್‌ ಗೌಡ-ಶೋಭಾ ದಂಪತಿ ಸಾವಯವ ಕೃಷಿಕರು. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು. 20 ವರ್ಷಗಳ ಹಿಂದೆ ಬಡತನವಿತ್ತು. ಜೀವನ ಸಂಕಷ್ಟವಿತ್ತು. 1 ಎಕ್ರೆ ಭೂಮಿಯಲ್ಲಿ ಅಡಿಕೆ ತೋಟವಿತ್ತು. ಉಳಿದ ಮೂರು ಮುಕ್ಕಾಲು ಎಕ್ರೆ ಭೂಮಿ ಬರಡಾಗಿತ್ತು. ಗುಡ್ಡವಾಗಿತ್ತು.

ವಿದ್ಯಾಭ್ಯಾಸವಿರಲಿಲ್ಲ. ರಸ್ತೆಯಿಲ್ಲ. ಮನೆಯಿಂದ ಪೇಟೆಗೆ ತೆರಳಲು ಎರಡು ಕಿ.ಮೀ. ದೂರ, ನಡೆದುಕೊಂಡೇ ಸಾಗಬೇಕು. ಆದಾಯ ಗಳಿಸುವುದಕ್ಕೆ ಇರುವ ತೋಟ ಸಾಲುವುದಿಲ್ಲ. ಜೀವನ ನಡೆಸುವ ಸವಾಲು ಗುಡ್ಡದೆತ್ತರಕ್ಕೆ ಬೆಳೆದು ನಿಂತಿತ್ತು. ಯೋಚಿಸಿ, ಯೋಜನೆಗಳನ್ನು ರೂಪಿಸಿ, ತೋಟವನ್ನು ವಿಸ್ತರಿಸಿದರು. ಇರುವ ಭೂಮಿಯಲ್ಲೆಲ್ಲ ಸ್ಪಷ್ಟ ಲೆಕ್ಕಾಚಾರದ ಕೃಷಿ ಆರಂಭಿಸಿದರು. ಅಡಿಕೆ, ತೆಂಗು, ಬಾಳೆ, ಕೊಕ್ಕೋ, ಕಾಳುಮೆಣಸು ಇತ್ಯಾದಿ ಉಪಬೆಳೆಗಳೊಂದಿಗೆ ದನ, ಆಡು ಸಾಕಿದರು. ಗದ್ದೆ ಬೇಸಾಯ, ಅಜೋಲಾ ಕೃಷಿಯನ್ನೂ ಮಾಡಿದರು. ಅಡುಗೆಗೆ ಗೋಬರ್‌ ಗ್ಯಾಸ್‌, ತೋಟಕ್ಕೆ ಸೆಗಣಿ, ಸ್ಲರಿ, ಸೊಪ್ಪು ಗೊಬ್ಬರಗಳನ್ನು ಬಳಸಿದರು.ಕೃಷಿಯಲ್ಲಿ ಹಿಡಿತ ಸಿಕ್ಕಿತು. ಹೆಚ್ಚು ಲಾಭದಾಯಕವಾದುದನ್ನು ಉಳಿಸಿಕೊಂಡು, ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡರು. ಈಗ ತೋಟದಲ್ಲಿ 1,100ಕ್ಕೂ ಹೆಚ್ಚು ಅಡಿಕೆ (ಸ್ಥಳೀಯ ತಳಿಗಳು), 130 ತೆಂಗು, 200 ರಬ್ಬರ್‌, ಕಾಳುಮೆಣಸು ಬೆಳೆಯುತ್ತಿದ್ದಾರೆ. 3 ಕೋಳಿ ಫಾರ್ಮ್ ಇದೆ. 6,000 ಕೋಳಿಗಳನ್ನು ಸಾಕುತ್ತಿದ್ದಾರೆ. ಹೈನುಗಾರಿಕೆಯಿದೆ. 7 ದನಗಳು ಹಾಲು, ಗೊಬ್ಬರ ನೀಡುತ್ತಿವೆ. 1 ಎಕರೆ ಭೂಮಿಯಲ್ಲಿ ದನಗಳಿಗಾಗಿ ಹುಲ್ಲು ಬೆಳೆಯುತ್ತಿದ್ದಾರೆ. ಹಾಲಿಗೂ ಸೆಗಣಿಗೂ ಮಾರುಕಟ್ಟೆಯಿದೆ. ಹಿಂಡಿಯನ್ನು ಖರೀದಿಸುತ್ತಿದ್ದಾರೆ. ಒಟ್ಟಿನಲ್ಲಿ ಸಮಗ್ರ ಕೃಷಿಯಿಂದ ಯಥೇತ್ಛವಾಗಿ ಆದಾಯ ಗಳಿಸುತ್ತಿದ್ದು, ಇದೀಗ ಸುಂದರ ಬದುಕು ಸಾಗಿಸುತ್ತಿದ್ದಾರೆ. ಓರ್ವ ಪುತ್ರ ಎಂ.ಎಸ್‌.ಸಿ. ಮಾಡಿ ಕಂಪೆನಿಯಲ್ಲಿ ಉದ್ಯೋಗಿ ಮತ್ತು ಇನ್ನೋರ್ವ ಪುತ್ರ ಬಿಕಾಂ ಓದುತ್ತಿದ್ದಾರೆ.

ಪ್ರಶಸ್ತಿ -ಸಮ್ಮಾನ
 2007ರಲ್ಲಿ ಅಡ್ಯನಡ್ಕ ವಾರಣಾಶಿ ಸಂಶೋಧನ ಪ್ರತಿಷ್ಠಾನದ
ಪ್ರಶಸ್ತಿ ಪುರಸ್ಕೃತರು.
 2007ರಲ್ಲಿ ಶೋಭಾ ಅವರಿಗೆ ಜಿಲ್ಲಾ ಪ್ರಗತಿಶೀಲ ರೈತ ಮಹಿಳೆ ಪ್ರಶಸ್ತಿ. 2008ರಲ್ಲಿ ಗ್ರಾಮ ಗೌರವ.
 2009ರಲ್ಲಿ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರು.
 2009ರಲ್ಲಿ ಫೋಟೋಗ್ರಾಫರ್ ಅಸೋಸಿಯೇಶನ್‌
ಬಂಟ್ವಾಳ ವಲಯದ ಪ್ರಶಸ್ತಿ.
 2010ರಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್‌ ವತಿಯಿಂದ ಸಾಹಿತ್ಯ
ಸಮ್ಮೇಳನದಲ್ಲಿ ಸಮ್ಮಾನ.
 2010ರಲ್ಲಿ ನವೋದಯ ಪ್ರಶಸ್ತಿ.
 2012ರಲ್ಲಿ ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ
ವತಿಯಿಂದ ಸಮ್ಮಾನ.
 2016ರಲ್ಲಿ ಬದಿಯಡ್ಕ ವಿಶ್ವ ತುಳುವೆರೆ ಆಯನೊದಲ್ಲಿ ಸಮ್ಮಾನ.
2018ರಲ್ಲಿ ಬಂಟ್ವಾಳ ತಾ| ಸಾಹಿತ್ಯ ಪರಿಷತ್‌ ವತಿಯಿಂದ ಸಾಹಿತ್ಯ
ಸಮ್ಮೇಳನದಲ್ಲಿ ಸಮ್ಮಾನ.

Advertisement

ಜೀವನ ಯಶಸ್ವಿ
ಕೃಷಿಯಿಂದ ಲಾಭವಿದೆ. ಸಮಗ್ರ ಕೃಷಿ ಮಾಡಬೇಕು. ನನಗೆ ಅಡಿಕೆ, ತೆಂಗು ಕೃಷಿ ಜತೆ ಹೈನುಗಾರಿಕೆ, ಹುಲ್ಲು ಬೆಳೆ, ಕೋಳಿ ಫಾರ್ಮ್ ಇತ್ಯಾದಿ ಮಾಡುತ್ತೇನೆ. ಹಗಲು, ರಾತ್ರಿ ದುಡಿಯಬೇಕು. ಎಲ್ಲವೂ ಸಮಯಕ್ಕೆ ಸರಿಯಾಗಿ ನಡೆಯಬೇಕು. ಮದುವೆ, ಶುಭ ಸಮಾರಂಭ, ಜಾತ್ರೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು ಅಸಾಧ್ಯ. ಭಾಗವಹಿಸಿದರೂ ಸಮಯಕ್ಕೆ ಪ್ರಾಶಸ್ತ್ಯ ನೀಡಿ, ಮನೆಗೆ ತಲುಪಬೇಕು. ಕೆಲವೊಮ್ಮೆ ನಿದ್ದೆಗೆಡಲೂಬೇಕು. 24 ಗಂಟೆಗಳೂ ದುಡಿದ ದಿನಗಳಿವೆ. ಕಳೆದ 20 ವರ್ಷಗಳಲ್ಲಿ ಶೀತ, ಕೆಮ್ಮು ಬಿಟ್ಟರೆ ದೇವರ ದಯೆಯಿಂದ ಆರೋಗ್ಯ ಕೆಟ್ಟು ಕೃಷಿ ಕಾರ್ಯ ಬಾಕಿಯಾಗಲಿಲ್ಲ. ಸಮಯವಿದ್ದಾಗ ನಮ್ಮ ಮಕ್ಕಳೂ ಕೃಷಿ ಕಾರ್ಯದಲ್ಲಿ ಕೈಜೋಡಿಸುತ್ತಾರೆ. ಸ್ವತಂತ್ರವಾಗಿ ದುಡಿಯುತ್ತಾರೆ.
 -ಸುರೇಶ್‌ ಗೌಡ – ಶೋಭಾ
ಸಮಗ್ರ ಕೃಷಿಕರು
ಮೊಬೈಲ್‌ ಸಂಖ್ಯೆ- 8762908767

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next