ರಾಮನಗರ: ಬೆಂ.ಗ್ರಾ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಮಂಡ್ಯಕ್ಕೆ ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯದಲ್ಲಿ ನಿಖಿಲ್ ಗೆದ್ದೇತೀರುತ್ತಾರೆ.
ತಮ್ಮ 38 ವರ್ಷದ ರಾಜಕಾರಣದ ಜೀವನದ ಅನುಭವನದ ಆಧಾರದ ಮೇಲೆ ನಿಖಿಲ್ ಗೆಲುವು ನಿಶ್ಚಿತ. ನಿಖಿಲ್ ಸಣ್ಣ ವಯಸ್ಸಿಗೆ ಪ್ರಬುದ್ಧ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ವಯಸ್ಸಿಗೆ ಮಿರಿ ಪಳಗಿದ್ದಾರೆ. ಆತ ಒಳ್ಳೆಯ ರಾಜಕಾರಣಿಯಾಗಿ ರೂಪುಗೊಳ್ಳುತ್ತಾರೆ. ರಾಜಕೀಯ ವಿಚಾರದಲ್ಲೂ ಆತ ಕುಮಾರಸ್ವಾಮಿ ಅವರಿಗೂ ಒಂದು ಹೆಜ್ಜೆ ಮುಂದೆ ಇರ್ತಾರೆ ಎಂದರು.
ಪ್ರಚೋದನೆ ಮಾತುಗಳು ಬೇಡ: ಚುನಾವಣೆ ಗೆಲ್ಲೋಕೆ ಇನ್ನೊಬ್ಬರನ್ನು ಪ್ರಚೋದಿಸುವ ಮಾತುಗಳು ಬೇಡ ಎಂದು ತಾವು ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಸಲಹೆ ನೀಡಿದ್ದೇವೆ. ದರ್ಶನ ಮನೆ ಮೇಲೆ ಕಲ್ಲು ತೂರಾಟ ನಡೆದಿರುವುದು ಸರಿಯಲ್ಲ. ಆದರೆ, ಅವರು ಸಿಸಿ ಕ್ಯಾಮರಾಗಳು ಆಫ್ ಆಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಡಿಎಸ್ ಒತ್ತಾಯದ ಮೇರೆಗೆ ನಿಖಿಲ್ ಸ್ಪರ್ಧೆ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸುಮಲತಾಗೆ ಬೆಂಬಲ ವ್ಯಕ್ತಪಡಿಸಿ, ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಜೆಡಿಎಸ್‌ಗೆ ಲಾಭವಾಗಿದೆ. ಮಂಡ್ಯ ಕ್ಷೇತ್ರ ವ್ಯಾಪ್ತಿಯಲ್ಲಿ 7 ಮಂದಿ ಜೆಡಿಎಸ್ ಶಾಸಕರಿದ್ದಾರೆ. ಜೆಡಿಎಸ್ ಮುಖಂಡ ಎಲ್.ಆರ್.ಶಿವರಾಮೇಗೌಡರೇ ನಿಖಿಲ್ ಹೆಸರನ್ನು ಪ್ರಸ್ತಾಪಿಸಿದ್ದು, ನಿಖಿಲ್ ಸ್ಪರ್ಧೆ ಬಗ್ಗೆ ನಡೆದ ಚರ್ಚೆಯ ವೇಳೆ ಎಲ್ಲಾ ಮುಖಂಡರ ಒಪ್ಪಿಗೆಯನ್ನು ಪಡೆದೇ ನಿಖಿಲ್ ಸ್ಪರ್ಧಿಸುತ್ತಿದ್ದಾರೆ ಎಂದರು.
ದೇವೇಗೌಡರ ಸ್ಪರ್ಧೆಗೆ ವಿರೋಧ ಸಲ್ಲದು: ತುಮಕೂರು ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ದೇವೇಗೌಡರ ಸ್ಪರ್ಧೆ ಎರಡೂ ಪಕ್ಷಗಳ ನಿರ್ಧಾರ. ಪಕ್ಷಗಳ ಮೇಲ್ಮಟ್ಟದಲ್ಲಿ ಆಗಿರುವ ನಿರ್ಧಾರಗಳನ್ನು ಎಲ್ಲರೂ ಒಪ್ಪಲೇ ಬೇಕಾಗುತ್ತದೆ. ಮುದ್ದಹನುಮೇಗೌಡರು ಸಹ ಒಪ್ಪ ಬೇಕಾಗಿದೆ. ತಮ್ಮ ರಾಜಕೀಯ ಹಿರಿತನಕ್ಕೆ ಸಚಿವ ಸ್ಥಾನ ಸಿಗಲಿಲ್ಲ. ಆದರೂ ತಾವು ವಿಚಲಿತರಾಗಲಿಲ್ಲ. ಪಕ್ಷದ ಸಿದ್ಧಾಂತದ ಚೌಕಟ್ಟಿನಲ್ಲಿರುವ ಎಲ್ಲಾ ಕಾರ್ಯಕರ್ತರು ಪಕ್ಷಗಳ ಹೈಕಮಾಂಡ್ ನಿರ್ಧಾರವನ್ನು ಒಪ್ಪಲೇ ಬೇಕಾಗಿದೆ ಎಂದು ತಿಳಿಸಿದರು.
ಮೈತ್ರಿ ಮುಂದುವರಿಯುವ ವಿಶ್ವಾಸ: ರಾಜ್ಯದಲ್ಲಿ ಮೈತ್ರಿ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ಬೇರು ಮಟ್ಟದ ಕಾರ್ಯಕರ್ತರಲ್ಲಿರುವ ಅಸಮಾಧಾನ ಮತ್ತು ಇತರ ಸಮಸ್ಯೆಗಳು ಶೇ.80ರಷ್ಟು ನೀಗಿವೆ. ದಿನ ಕಳೆದಂತೆ ಎಲ್ಲವೂ ಸರಿ ಹೋಗುತ್ತೆ. ರಾಜ್ಯದ ಜನತೆಯ ದೃಷ್ಠಿಯಿಂದ ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಲಿದ್ದಾರೆ. ಚುನಾವಣೆ ನಂತರ ಮೈತ್ರಿ ಮುಂದುವರಿಯುತ್ತೆ ಮುಂದುವರಿಯಲೇ ಬೇಕು ಎಂದರು.
ಜೋಡಿ ಕಳ್ಳ ಎತ್ತುಗಳು ಹೇಳಿಕೆ ತಪ್ಪು: ಚಿತ್ರನಟರಾದ ಯಶ್ ಮತ್ತು ದರ್ಶನ್ ಬಗ್ಗೆ ಸಿಎಂ ಕುಮಾರಸ್ವಾಮಿ ಜೋಡಿ ಕಳ್ಳ ಎತ್ತುಗಳು ಎಂಬ ಹೇಳಿಕೆಗಳು ತಪ್ಪು. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ಅವರ ಹೇಳಿಕೆಗಳು ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ. ಜೋಡಿ ಕಳ್ಳ ಎತ್ತುಗಳು ಎಂಬ ಹೇಳಿಕೆ ಅವರಿಂದ ಬರಬಾರದಿತ್ತು ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು.
ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಹೇಳಲಾಗೋಲ್ಲ: ರಾಜ್ಯದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಈಗ ಹೇಳ್ಳೋಕೆ ಆಗಲ್ಲ ಎಂದು ಬಸವರಾಜ ಹೊರಟ್ಟಿ ಜಾರಿಕೊಂಡರು. ಬಿಜೆಪಿಯವರು ತಾವು ಅಂದುಕೊಂಡಂತೆ ಕ್ಷೇತ್ರಗಳನ್ನು ಗೆಲ್ಲೋಕೆ ಸಾಧ್ಯವಿಲ್ಲ. ಮೋದಿ ಪ್ರಧಾನಿ ಆಗುವುದು ಸಹ ಸುಲಭವಲ್ಲ ಎಂದರು.