Advertisement

15 ದಿನದಲ್ಲಿ ಸುರತ್ಕಲ್ ಟೋಲ್ ಗೇಟ್ ಸಮಸ್ಯೆ ಪರಿಹಾರ: ವತಾರೆ

07:13 PM Oct 13, 2022 | Team Udayavani |

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ನ ಸಮಸ್ಯೆ ಮುಂದಿನ 12 ರಿಂದ 15 ದಿನಗಳೊಗೆ ಸಂಪೂರ್ಣವಾಗಿ ಬಗೆಹರಿಯಲಿದೆ ಎಂದು ಭಾರತೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ. ವತಾರೆ ಭರವಸೆ ನೀಡಿದರು.

Advertisement

ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆಯಲ್ಲಿ ಹೆದ್ದಾರಿ ನಿರ್ಮಾಣ ಹಾಗೂ ನಿರ್ವಹಣೆಗಳಿಗೆ ಸಂಬಂಧಿಸಿದ ಜಿಲ್ಲಾಧಿಕಾರಿ ಡಾ‌. ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಬಹುದಿನಗಳಿಂದ  ಇತ್ಯರ್ಥ ಪಡಿಸಲು ಯತ್ನಿಸುತ್ತಿದ್ದ  ಸಮಸ್ಯೆ 15 ದಿನಗಳಲ್ಲಿ ಬಗೆಹರಿಯಲಿದೆ, ಅದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಅವರು ಮಾತನಾಡಿ, ಎನ್. ಐ. ಟಿ .ಕೆ. ಸುರತ್ಕಲ್ ನಿಂದ ನಂತೂರಿನವರೆಗೆ ರಸ್ತೆಗುಂಡಿಯಿಂದಾಗಿ ಅಪಘಾತಗಳು ಸಂಭವಿಸಿದರೆ ಸಂಬಂಧಿಸಿದ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೂಡಲೇ ಗುತ್ತಿಗೆದಾರರಿಗೆ ನೋಟಿಸ್ ನೀಡಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು, ಇಲ್ಲದಿದ್ದರೆ ಅವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

Advertisement

ಭಾರತೀಯ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮಂಗಳೂರು ವಿಭಾಗದ ಯೋಜನಾ ನಿರ್ದೇಶಕ ಲಿಂಗೇಗೌಡ ಮಾತನಾಡಿ, ಮುಂಬರುವ ಏಳು ದಿನದೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಲಾಗುವುದು, ತಪ್ಪಿದಲ್ಲಿ ಪ್ರಾಧಿಕಾರದಿಂದಲೇ ಸಂಬಂಧಿಸಿದ ಗುತ್ತಿಗೆದಾರರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಸುರತ್ಕಲ್ ನಿಂದ ಎನ್.ಐ.ಟಿ.ಕೆ ಜಂಕ್ಷನ್ ವರೆಗೆ ರಸ್ತೆಯನ್ನು ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಏಳು ದಿನಗಳೊಳಗೆ ದುರಸ್ತಿ ಪಡಿಸಬೇಕು ಎಂದು ನಿರ್ದೇಶನ ನೀಡಿದರು.

ನಂತೂರು ಜಂಕ್ಷನ್ ನಿಂದ ಬಿಸಿ ರಸ್ತೆವರೆಗೆ ವರೆಗಿನ 14 ಕಿ.ಮೀ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆಯನ್ನು ಕೂಡ  19 ಕೋಟಿ  ವೆಚ್ಚದಲ್ಲಿಯೇ ನಿರ್ಮಿಸಲಾಗುತ್ತಿದೆ ಎಂದು ಲಿಂಗೇಗೌಡರು ಸಭೆಗೆ ತಿಳಿಸಿದಾಗ, ಜಿಲ್ಲಾಧಿಕಾರಿಯವರು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಸರ್ವಿಸ್ ರೋಡ್ ದುರಸ್ತಿ ಪಡಿಸುತ್ತಿರುವ ಪಟ್ಟಿ ನೀಡುವಂತೆ ಸೂಚಿಸಿದರು.

ಅದರಂತೆ ಕೂಳೂರು ಮೇಲ್ಸೆತುವೆ ದುರಸ್ತಿ ಕಾರ್ಯ ಶೀಘ್ರದಲ್ಲಿ ಆಗಬೇಕು, ಮುಂದಿನ ಮಳೆಗಾಲದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಾಗಬಾರದು, ಪಂಪ್ ವೆಲ್‌ನಿಂದ ತಲಪಾಡಿಗೆ ರಸ್ತೆ ಗುಂಡಿಗಳು ಇರದಂತೆ ಕೂಡಲೇ ಅವುಗಳನ್ನು ಮುಚ್ಚಬೇಕು, ಯಾವುದೇ ಗುತ್ತಿಗೆದಾರರು ಸರ್ಕಾರದಿಂದ ಕಾಮಗಾರಿಗಳನ್ನು ಪಡೆದ ಮೇಲೆ ಅವರು ಕೂಡ ಸರ್ಕಾರದ ಒಂದು ಭಾಗವಾಗಿ ಕೆಲಸ ನಿರ್ವಹಿಸಬೇಕು, ಸಮಸ್ಯೆಗಳು ಎದುರಾದಲ್ಲಿ ಅವುಗಳನ್ನು ಜಿಲ್ಲಾಡಳಿತದ ಗಮನಕ್ಕೆ ತರಬೇಕು, ಜಿಲ್ಲಾಡಳಿತದಿಂದ ಅವುಗಳನ್ನು ಬಗೆಹರಿಸಲು ಯತ್ನಿಸುವುದು ಎಂದು ತಿಳಿಸಿದರು.

ಸಭೆಯಲ್ಲಿ ಅಡ್ಡ ಹೊಳೆ -ಪೆರಿಯಡ್ಕ, ಬಿಕರ್ನ ಕಟ್ಟೆ ವ್ಯಾಪ್ತಿಯಲ್ಲಿ ಭೂಸ್ವಾದಿನಾಪಡಿಸಿಕೊಳ್ಳುವ ಬಗ್ಗೆ, ನಗರದೊಳಗೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕೆಪಿಟಿ ಹಾಗೂ ನಂತೂರ್ ಜಂಕ್ಷನ್ ಗಳಲ್ಲಿ ಕಾಮಗಾರಿ ಕೈಗೊಳ್ಳುವ ಬಗ್ಗೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಮಹಾನಗರ ಪಾಲಿಕೆ ಆಯುಕ್ತ  ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಗುತ್ತಿಗೆದಾರರು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next