ಪಡುಬಿದ್ರಿ: ಸುರತ್ಕಲ್ ಟೋಲ್ ಬುಧವಾರ ಮಧ್ಯರಾತ್ರಿಯಿಂದ ರದ್ದಾಗಲಿದ್ದು,ಹೆಜಮಾಡಿ ಟೋಲ್ನಲ್ಲಿ ಪರಿಷ್ಕೃತ ದರ ಸದ್ಯ ಜಾರಿ ವಿಧಿಸುವ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಾಗಿದೆ.
ಹೆಜಮಾಡಿಯ ನವಯುಗ ಟೋಲ್ ಪ್ಲಾಝಾದೊಂದಿಗೆ ಸುರತ್ಕಲ್ ಟೋಲ್ ದರವನ್ನು ಹೊಂದಿಸಿಕೊಂಡು ಡಿ. 1ರಿಂದ ಸಂಗ್ರಹಿಸಲಾಗುವುದು ಎಂದು ಈಗಾಗಲೇ ಸರಕಾರ ತಿಳಿಸಿತ್ತು. ಆದರೆ ಟೋಲ್ಗಳ ವಿಲೀನ ಪ್ರಸ್ತಾವವು ಜಾರಿಗೆ ಬರುವ ಸೂಚನೆಗಳು ಲಭ್ಯವಾಗಿಲ್ಲ. ಹಾಗಾಗಿ ಹೆಜಮಾಡಿ ಟೋಲ್ ಗೇಟ್ನಲ್ಲಿ ಯಥಾಸ್ಥಿತಿಯು ಮುಂದುವರಿ ಯುವುದಾಗಿ ತಿಳಿದು ಬಂದಿದೆ.
ಹೆಜಮಾಡಿ ನವಯುಗ ಟೋಲ್ ಮತ್ತು ಎನ್ಎಚ್ಎಐ ನಡುವೆ ಯಾವುದೇ ಒಪ್ಪಂದಗಳು ನಡೆದ ಬಗೆಗೆ ಮಾಹಿತಿ ಇಲ್ಲ. ತಮ್ಮ ಕಂಪೆನಿಯ ಮುಖ್ಯಸ್ಥರಿಂದ ಈ ಕುರಿತಾದ ಯಾವುದೇ ಮಾಹಿತಿ ಬಂದಿಲ್ಲ. ಆದುದರಿಂದ ಡಿ. 1ರಿಂದ ಯಾವುದೇ ಬದಲಾವಣೆಗಳಿಲ್ಲ. ಹಿಂದಿನ ದರವೇ ಇರುತ್ತದೆ ಎಂದು ನವಯುಗ ಟೋಲ್ ಪ್ಲಾಝಾ ಮೂಲಗಳು ತಿಳಿಸಿವೆ.
ಸುರತ್ಕಲ್ ಟೋಲ್ನ್ನು ಹೆಜಮಾಡಿ ಟೋಲ್ನಲ್ಲಿ ವಿಲೀನಗೊಳಿಸಿ ದರ ಏರಿಸಿರುವ ಕುರಿತು ಉಡುಪಿಯ ಜನಪ್ರತಿನಿಧಿಗಳು ಮತ್ತು ಜನರು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.