ಮಂಗಳೂರು : ಸುರತ್ಕಲ್ ಕಡಲತೀರದಲ್ಲಿ ಶುಕ್ರವಾರ ಪತ್ತೆಯಾಗಿದ್ದ ತೈಲ ಜಿಡ್ಡಿನ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅಧ್ಯಯನ ನಡೆಸುತ್ತಿದ್ದು, ಇದು ಸಮುದ್ರದ ಆಳದಲ್ಲಿನ ಪಾಚಿ ಜೀವಿಗಳು ಮೇಲ್ಭಾಗಕ್ಕೆ ಬರುವಾಗ ಆದ ಬಣ್ಣ ಬದಲಾವಣೆ ಎಂಬ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಸುರತ್ಕಲ್‌ನ ದೊಡ್ಡಕೊಪ್ಪಲು ತೀರಕ್ಕೆ ಶುಕ್ರವಾರ ತೇಲಿಬಂದ ಭಾರೀ ಪ್ರಮಾಣದ ತೈಲಜಿಡ್ಡಿನ ಮಾದರಿಯನ್ನು ಪರೀಕ್ಷೆಗಾಗಿ ಕೇಂದ್ರೀಯ ಮೀನುಗಾರಿಕೆ ಸಂಶೋಧನ ಸಂಸ್ಥೆ (ಸಿಎಂಎಫ್‌ಆರ್‌ಐ)ಗೆ ನೀಡಲಾಗಿದೆ. ಕೆಲವು ದಿನಗಳಲ್ಲಿ ಪರೀಕ್ಷಾ ಫಲಿತಾಂಶ ಗೊತ್ತಾಗಲಿದೆ.
ಹಡಗುಗಳು ತ್ಯಾಜ್ಯ ತೈಲದ ಜಿಡ್ಡನ್ನು ಸಮುದ್ರಕ್ಕೆ ಸುರಿದಿದ್ದರಿಂದ ಈ ರೀತಿ ಸಮುದ್ರ ನೀರಿನ ಬಣ್ಣದಲ್ಲಿ ವ್ಯತ್ಯಾಸವಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಶನಿವಾರ ಎಂಆರ್‌ಪಿಎಲ್, ಎಸ್‌ಇಝಡ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು, ನೀರಿನ ಮಾದರಿಯನ್ನು ಸಂಗ್ರಹಿಸಿಕೊಂಡರು.
ಮಳೆಗಾಲಕ್ಕೆ ಮೊದಲು ಸಮುದ್ರ ಪಾಚಿ ಮೇಲ್ಭಾಗಕ್ಕೆ ಬಂದು ಸೂರ್ಯನ ಕಿರಣಕ್ಕೆ ಒಡ್ಡಿಕೊಂಡಾಗ ಈ ರೀತಿ ನೀರಿನ ಬಣ್ಣ ಬದಲಾಗುತ್ತದೆ. ಮುಂಗಾರು ಆರಂಭಕ್ಕೆ ಮುನ್ನ ಇದು ಸಾಮಾನ್ಯ ವಿದ್ಯಮಾನ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇದು ತೈಲ ಜಿಡ್ಡು ಎಂದು ಸ್ಥಳೀಯರು ಆರೋಪಿಸಿದ್ದಾರೆ.