Advertisement

ಎನ್‌ಐಟಿಕೆ ಟೋಲ್‌ಗೇಟ್‌ ಸ್ಥಳಾಂತರಕ್ಕೆ ನಿರ್ಧಾರ; ಸಂಸದರ ಮನವಿಗೆ ಹೆದ್ದಾರಿ ಸಚಿವರ ಸ್ಪಂದನೆ

02:28 AM Mar 16, 2022 | Team Udayavani |

ಮಂಗಳೂರು: ಕೆಲವು ವರ್ಷಗಳಿಂದ ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಗುರಿಯಾಗಿದ್ದ ಸುರತ್ಕಲ್‌ ಟೋಲ್‌ಗೇಟನ್ನು ಸ್ಥಳಾಂತರಿಸಿ ಎನ್‌ಎಂಪಿಟಿ ಗೇಟ್‌ನೊಳಗೆ ಸ್ಥಾಪಿಸಲು ಹೊಸದಿಲ್ಲಿಯಲ್ಲಿ ಮಾ. 15ರಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ಸುರತ್ಕಲ್‌ ಟೋಲ್‌ಗೇಟ್‌ ಸ್ಥಳಾಂತರ/ವಿಲೀನದ ಬಗ್ಗೆ ಚರ್ಚಿಸಲು ಸಂಸದ ನಳಿನ್‌ಕುಮಾರ್‌ ಕಟೀಲು ಹಾಗೂ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿದರು.

30 ಕಿ.ಮೀ. ಅಂತರದಲ್ಲಿ ಮೂರು ಟೋಲ್‌ಗೇಟ್‌ಗಳಿವೆ. ಅಲ್ಲದೆ ಕೇವಲ 9 ಕಿ.ಮೀ. ಅಂತರದಲ್ಲಿ ಎರಡು (ಎನ್‌ಐಟಿಕೆ ಮತ್ತು ಹೆಜಮಾಡಿ) ಟೋಲ್‌ಗೇಟ್‌ಗಳಿರುವ ಕಾರಣ ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಎನ್‌ಐಟಿಕೆ ಬಳಿಯಗೇಟನ್ನು ರದ್ದುಗೊಳಿಸಬೇಕು ಅಥವಾ ಹೆಜಮಾಡಿ ಗೇಟ್‌ ಜತೆಗೆ ವಿಲೀನಗೊಳಿಸಬೇಕೆಂದು ಸಂಸದ ನಳಿನ್‌ ಕುಮಾರ್‌ ಅವರು ಫೆ. 28ರಂದು ಮಂಗಳೂರಿಗೆ ಆಗಮಿಸಿದ್ದ ಸಚಿವ ನಿತಿನ್‌ ಗಡ್ಕರಿ ಅವರಿಗೆ ಮನವಿ ಮಾಡಿದ್ದರು. ವಿವಿಧ ಸಂಘಟನೆಗಳು, ಸಾರ್ವಜನಿಕರು ಕೂಡ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಇದರಲ್ಲಿ ಕಾನೂನಾತ್ಮಕ ವಿಚಾರಗಳು ಒಳಗೊಂಡಿರುವುದರಿಂದ ಹೊಸದಿಲ್ಲಿಯಲ್ಲಿ ಈ ಬಗ್ಗೆ ಅಧಿಕಾರಿಗಳ ಜತೆ ಶೀಘ್ರ ಸಭೆ ನಡೆಸುವುದಾಗಿ ಭರವಸೆ ನೀಡಿದ್ದರು.

ಮಹತ್ವದ ತೀರ್ಮಾನ
ಮಾ. 15ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೆಜಮಾಡಿಯಿಂದ ಎನ್‌ಐಟಿಕೆ ಬಳಿಯ ಟೋಲ್‌ಗೇಟ್‌ ವರೆಗೆ ಬೃಹತ್‌ ಪಾದಯಾತ್ರೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಹಿಜಾಬ್‌ ವಿಚಾರಕ್ಕೆ ಸಂಬಂಧಿಸಿ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ ಪರಿಣಾಮ ಪಾದಯಾತ್ರೆಯನ್ನು ಮಾ. 22ಕ್ಕೆ ಮುಂದೂಡಲಾಗಿತ್ತು. ಈ ನಡುವೆ ಕೇಂದ್ರ ಸರಕಾರದ ಈ ಮಹತ್ವದ ತೀರ್ಮಾನ ಪ್ರಕಟಿಸಿದೆ.

ಮಡಿಕೇರಿ ರಸ್ತೆ ಮೇಲ್ದರ್ಜೆಗೆ
ಮಾಣಿ – ಸಂಪಾಜೆ – ಮಡಿಕೇರಿ ಸಂಪರ್ಕಿಸುವ ರಸ್ತೆಯನ್ನು ಮಾಣಿಯಿಂದ ಸಂಪಾಜೆವರೆಗೆ ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆ ಗೇರಿಸುವ ಹಾಗೂ ಸಂಪಾಜೆಯಿಂದ ಮಡಿಕೇರಿವರೆಗಿನ ರಸ್ತೆಯನ್ನು ವಿಸ್ತರಿಸುವ ಬಗ್ಗೆ ಸಚಿವರು ಸಭೆಯಲ್ಲಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

Advertisement

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯ ಆರ್‌.ಕೆ. ಪಾಂಡೆ, ಹೆಚ್ಚುವರಿ ಕಾರ್ಯದರ್ಶಿ ಗೋ ಸಾಹೇಲ್‌, ರಾಷ್ಟ್ರೀಯ ಹೆದ್ದಾರಿ (ಟೋಲ್‌ ವಿಭಾಗ) ಸದಸ್ಯ ಮಹಾವೀರ್‌ ಸಿಂಗ್‌, ಕರ್ನಾಟ ಕದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌, ಸಂಸದರಾದ ಪ್ರತಾಪಸಿಂಹ, ಮುನಿಸ್ವಾಮಿ ಸಭೆಯಲ್ಲಿದ್ದರು.

ಎನ್‌ಎಂಪಿಟಿಗೆ ಬರುವ ವಾಹನಗಳಿಗಷ್ಟೇ ಟೋಲ್‌
ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿರುವ ದೃಷ್ಟಿಯಿಂದ ಸುರತ್ಕಲ್‌ ಟೋಲ್‌ಗೇಟನ್ನು ಸ್ಥಳಾಂತರಿಸಿ ಎನ್‌ಎಂಪಿಟಿ ಒಳಗೆ ಸ್ಥಾಪಿಸುವ ನಿರ್ಧಾರಕ್ಕೆ ಬರಲಾಯಿತು. ಎನ್‌ಎಂಪಿಟಿಯ ಒಳಗೆ ಬರುವ ಹಾಗೂ ಹೊರಗೆ ಹೋಗುವ ವಾಹನಗಳಿಂದ ಮಾತ್ರ ಟೋಲ್‌ ಸಂಗ್ರಹಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next