ಸುರತ್ಕಲ್: ಸುರತ್ಕಲ್ ಸಮೀಪದ ಜನತಾ ಕಾಲನಿಯಲ್ಲಿ ಆಶ್ರಯ ವಸತಿ ಸಮುಚ್ಚಯ ನಿರ್ಮಾಣಗೊಳ್ಳುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಬಹುಪಾಲು ಜಾಗ ಖಾಸಗೀ ಮಾಲಕತ್ವದ್ದು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಶಾಲೆಗೆ ಮೀಸಲು ಇರಿಸಲಾದ ಜಾಗದಲ್ಲಿ ಇದೀಗ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಡವರಿಗೆ ಹಂಚಲು ತ್ರಿಪ್ಲಸ್ ಒನ್ ಆಶ್ರಯ ವಸತಿ ಸಮುಚ್ಚಯ ನಿರ್ಮಾಣವಾಗುತ್ತಿದ್ದು, ಬಹುತೇಕ ಮುಕ್ತಾಯ ಹಂತದಲ್ಲಿದೆ.
ಇಲ್ಲಿನ ಜನತಾ ಕಾಲನಿಯಲ್ಲಿ ಶಾಲೆ ಸೌಲಭ್ಯಕ್ಕಾಗಿ ಶಿಕ್ಷಣ ಇಲಾಖೆ ಇಡ್ಯಾ ಗ್ರಾಮದ ಸರ್ವೇ ನಂಬ್ರ 16ರಲ್ಲಿ ತಲಾ 1 ಎಕ್ರೆ ಹಾಗೂ 60 ಸೆಂಟ್ಸ್ ಜಾಗ ಎಡಿಸ್‌ಸಿಆರ್‌ನಂತೆ 169/94-95ರಂತೆ ಸರಕಾರಿ ಜಮೀನು ಕಾದಿರಿಸಲಾಗಿತ್ತು. ಇದೀಗ ಶಾಲೆಯ ಮೈದಾನಕ್ಕಿಟ್ಟಿದ್ದ ಜಾಗವನ್ನೇ ಹಂಚಿರುವುದು ಕಂಡು ಬಂದಿದೆ. 94ಸಿ ಅಡಿಯಲ್ಲಿ ಒಟ್ಟು 13 ಫಲಾನುಭವಿಗಳಿಗೆ ಶಾಲೆಯ ಜಾಗವನ್ನೇ ನಿವೇಶನವಾಗಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯು ಹಿಂದೂ ಮಂದಿರಕ್ಕೆ ನೀಡಿದ್ದ ಜಾಗವೂ ಪರಭಾರೆಯಾಗಿ ಇದೀಗ ಆಶ್ರಯ ವಸತಿ ಸಮುಚ್ಚಯ ತಲೆ ಎತ್ತುತ್ತಿದೆ.
ಪ್ರಸ್ತುತ ಶಾಲೆಯ ವ್ಯಾಪ್ತಿಯೊಳಗೆ ಸರ್ವೇ ನಂಬ್ರ 161/1ರಲ್ಲಿ 45 ಸೆಂಟ್ಸ್, ಹಾಗೂ 161/2ರಲ್ಲಿ 10 ಸೆಂಟ್ಸ್ ಖಾಸಗೀ ಜಮೀನು ಕೃಷ್ಣಾಪುರ ಮಠದ ದೇವರ ಖಾತೆಯಲ್ಲಿದೆ. ಉಳಿದಂತೆ ಪ್ರಸ್ತುತ ಶಾಲೆಯ ಆಟದ ಮೈದಾನವಿರುವ 161/1ರಲ್ಲಿ 22 ಸೆಂಟ್ಸ್, 161/2ರಲ್ಲಿ 49 ಸೆಂಟ್ಸ್ ಬೋಗಿ (ಗೇಣಿ) ಮಾಡುವವರ ಹೆಸರಿನಲ್ಲಿದ್ದು, ಕಮಲಾ ಶೆಡ್ತಿ ಮತ್ತಿತರರ ಹೆಸರಿನಲ್ಲಿ ಆರ್‌ಟಿಸಿಯಲ್ಲಿ ದಾಖಲಾಗಿದೆ.
ಸರಕಾರ ಮೀಸಲಿರಿಸಿದ ಜಾಗದಲ್ಲಿ ವಸತಿ ಸಮುಚ್ಚಯ, ನಿವೇಶನ ಬಂದಿ ರುವುದರಿಂದ ಸ್ಥಳೀಯ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ, ಕ್ರೀಡೆಗೆ ಪರ್ಯಾಯ ಸ್ಥಳವನ್ನು ನೀಡುವುದು ಅಗತ್ಯವಾಗಿದೆ.
ಗೊತ್ತಾದ ಬಗೆ…
ಒಂದು ತಿಂಗಳ ಹಿಂದೆ ಇಲ್ಲಿನ ಶಾಲೆಯ ಆಟದ ಮೈದಾನದಲ್ಲಿ ಖಾಸಗೀ ಮನೆ ನಿರ್ಮಾಣವಾಗುತ್ತಿದ್ದಂತೆ ಸ್ಥಳೀಯ ಸಂಘಟನೆಯವರು ಹೋರಾಟ ಸಮಿತಿ ರಚಿಸಿ ಶಾಲೆಯ ಆಟದ ಮೈದಾನ ಉಳಿಸಿ ಎಂದು ಹೋರಾಟ ಆರಂಭಿಸಿದ್ದರು. ಶಾಲೆಯ ಎಸ್‌ಡಿಎಂಸಿ ಸಹಿತ ಸಾರ್ವಜನಿಕರು ತನಿಖೆಗೆ ಆಗ್ರಹಿಸಿದಾಗ ತಹಶೀಲ್ದಾರ್ ಅವರು ಭೂ ಸರ್ವೇಗೆ ಆದೇಶಿಸಿ ವರದಿ ನೀಡುವಂತೆ ತಿಳಿಸಿದ್ದರು. ಅದರಂತೆ ತನಿಖೆ, ಸರ್ವೇ ನಡೆದಾಗ ಶಾಲೆ ಮೈದಾನಕ್ಕೆ ಮೀಸಲು ಇರಿಸಿದ ಜಾಗವೇ ಇದೀಗ ಅನ್ಯ ಉದ್ದೇಶಗಳಿಗೆ ಬಳಕೆಯಾಗಿರುವುದು ಬಯಲಿಗೆ ಬಂದಿದೆ.
ಶಾಲೆಯ ಮೈದಾನದಲ್ಲಿ ಖಾಸಗೀ ಕಟ್ಟಡ ನಿರ್ಮಾಣ ಕುರಿತಂತೆ ತಹಶೀಲ್ದಾರರ ಸೂಚನೆಯಂತೆ ಕಂದಾಯ ಇಲಾಖೆಯ ದಾಖಲೆ ಪರಿಶೀಲಿಸಿ, ಸ್ಥಳದ ಸರ್ವೇ ನಡೆದು ವರದಿ ನೀಡಲಾಗಿದೆ.
– ನವೀನ್,
ಉಪತಹಶೀಲ್ದಾರ್, ಸುರತ್ಕಲ್