ಸುರತ್ಕಲ್: ತಡಂಬೈಲ್ ನಲ್ಲಿ ರವಿವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ಕಾರಿನ ಟೈರ್ ಬ್ಲಾಸ್ ಆಗಿದ್ದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಉಡುಪಿ ಕಡೆಯಿಂದ ವೋಕ್ಸ್ ವ್ಯಾಗನ್ ಕಾರಿನಲ್ಲಿ ಇಬ್ಬರು ಯುವಕರು ಮತ್ತು ಓರ್ವ ಯುವತಿ ಇದ್ದರು ಎಂದು ತಿಳಿದು ಬಂದಿದೆ.
ಈ ವೇಳೆ ರಸ್ತೆ ಬದಿ ಮಲಗಿದ್ದ ಇಬ್ಬರು ಕೂದಲೆಯ ಅಂತರದಲ್ಲಿ ಜೀವ ಉಳಿಸಿಕೊಂಡಿದ್ದಾರೆ.
Related Articles
ಅಪಘಾತದ ರಭಸಕ್ಕೆ ಸಮೀಪದ ವೆಂಕಟರಮಣ ರಾವ್ ಅವರ ಮಾಲಕತ್ವದ ಕಟ್ಟಡವೊಂದಕ್ಕೆ ಹಾನಿಯಾಗಿದೆ. ಕಟ್ಟಡದ ಶೆಟರ್,ಮೇಲ್ಛಾವಣಿ ಹಾನಿಗೊಂಡಿದ್ದು ಎರಡು ಲಕ್ಷ ರೂ .ನಷ್ಟವಾಗಿದೆ.
ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಏರ್ ಬಲೂನ್ ಇದ್ದುದರಿಂದ ಹೆಚ್ವಿನ ಜೀವ ಹಾನಿ ಆಗಿಲ್ಲ. ಮೂವರಿಗೂ ಗಾಯಗಳಾಗಿದ್ದು, ಅವರನ್ನು ಇನ್ನೊಂದು ಕಾರಿನಲ್ಲಿದ್ದ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತ ವಲಯ ಕುರಿತು ಸುರತ್ಕಲ್ ಆಪದ್ಭಾಂಧವ ಸಂಸ್ಥೆಯ ಸ್ಥಾಪಕಾಧ್ಯಕ್ಷ ಉಮೇಶ್ ದೇವಾಡಿಗ ಇಡ್ಯಾ ಅವರು ಮಾತನಾಡಿ,ತಡಂಬೈಲ್ ಬಳಿ ಹೆದ್ದಾರಿಯನ್ನು ಅವೈಜ್ಞಾನಿಕವಾಗಿ ತಿರುವು ನೀಡಿ ನಿರ್ಮಿಸಿದ್ದರಿಂದ ಅಪಘಾತವಲಯವಾಗಿದೆ. ನಿತ್ಯ ಅಪಘಾತವಾಗಿ ಕೈ ಕಾಲು ಕಳೆದು ಕೊಳ್ಳುತ್ತಿದ್ದಾರೆ. ತಿರುವು ಫಲಕ, ರಿಫ್ಲೆಕ್ಟರ್ ಅಳವಡಿಕೆ ಮಾಡಿ ಇಲಾಖೆ ಅಧಿಕಾರಿಗಳು ವಾಹನ ಸವಾರರಿಗೆ ಮಾಹಿತಿ ನೀಡುವ ಕೆಲಸ ಆಗಬೇಕು.ತಡೆಬೇಲಿ ಸಂಪೂರ್ಣ ತುಂಡಾಗಿದ್ದು ಪುನರ್ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.