Advertisement

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

11:56 PM Sep 16, 2024 | Team Udayavani |

ಸುರತ್ಕಲ್‌: ಕಾಟಿಪಳ್ಳ 3ನೇ ಬ್ಲಾಕ್‌ನಲ್ಲಿರುವ ಮಜ್ಜಿದುಲ್ಲಾ ಹುದಾಜುಮ್ಮಾ ಮಸೀದಿಗೆ ರವಿವಾರ ರಾತ್ರಿ ಕಲ್ಲು ಬಿಸಾಡಿ ಗಾಜುಗಳನ್ನು ಪುಡಿಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ಪೊಲೀಸರು ಕದ್ರಿಯಲ್ಲಿ ಬಂಧಿಸಿದ್ದಾರೆ.

Advertisement

ಕಟ್ಲ ಆಶ್ರಯ ಕಾಲನಿ ನಿವಾಸಿಗಳಾದ ಭರತ್‌ ಶೆಟ್ಟಿ, ಚೆನ್ನಪ್ಪ ಶಿವಾನಂದ ಛಲವಾದಿ, ಚೇಳಾರಿನ ನಿತಿನ್‌ ಹಡಪ, ಮುಂಚೂರಿನ ಸುಜಿತ್‌ ಶೆಟ್ಟಿ, ಹೊಸಬೆಟ್ಟುವಿನ ಅಣ್ಣಪ್ಪ, ಕಾಟಿಪಳ್ಳ ನಿವಾಸಿ ಪ್ರೀತಂ ಬಂಧಿತರು. ರವಿವಾರ ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ಮಸೀದಿಗೆ ದೀಪಾಲಂಕಾರ ಮಾಡಿ, ಮಸೀದಿಯ ಒಳಗಡೆ ಕಾರ್ಯಕರ್ತರೆಲ್ಲ ಕೆಲಸ ಮಾಡಿಕೊಂಡಿದ್ದು, ರಾತ್ರಿ ಕಿಡಿಗೇಡಿಗಳು ಎರಡು ಬೈಕ್‌ಗಳಲ್ಲಿ ಜನತಾ ಕಾಲನಿಯ ಶ್ಮಶಾನದ ಕಡೆಯಿಂದ ಬಂದವರು ಮಸೀದಿಯ ಹಿಂಭಾಗದ ರಸ್ತೆಯ ಕಡೆಯಿಂದ ಆಗಮಿಸಿ ಕಿಟಕಿ ಗಾಜುಗಳಿಗೆ ಕಲ್ಲು ಬಿಸಾಡಿ ಪರಾರಿಯಾಗಿದ್ದರು.

ಕಾರು, ಬೈಕ್‌, ಮೊಬೈಲ್‌ ವಶಕ್ಕೆ
ಹಿಂದೂ-ಮುಸ್ಲಿಂ ಜನಾಂಗದ ನಡುವೆ ದ್ವೇಷವನ್ನು ಉಂಟು ಮಾಡುವ ಉದ್ದೇಶದಿಂದ ಈ ರೀತಿ ಮಸೀದಿಗೆ ಕಲ್ಲು ಬಿಸಾಡಿ ಹಾನಿ ಮಾಡಿದ್ದಾಗಿದೆ ಎಂದು ಮಸೀದಿ ಅಧ್ಯಕ್ಷ ಕೆ.ಎಚ್‌. ಅಬ್ದುಲ್‌ ರಹಿಮಾನ್‌ ನೀಡಿದ ದೂರಿನಂತೆ ಸುರತ್ಕಲ್‌ ಪೊಲೀಸರು ಕಾರ್ಯಾಚರಣೆ ನಡೆಸಿದರು. ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ಮಾಹಿತಿ ಕಲೆ ಹಾಕಿ ಕ್ಷಿಪ್ರವಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ್ದ 1 ಸ್ವಿಫ್ಟ್‌ ಕಾರು, 2 ಬೈಕ್‌ ಹಾಗೂ 4 ಮೊಬೈಲ್‌ ಫೋನ್‌ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಶೇಷ ತಂಡ ರಚನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರವಾಲ್‌ ವಿಶೇಷ ತಂಡ ರಚಿಸಿ ಅವರ ಮಾರ್ಗದರ್ಶನದಲ್ಲಿ ಸುರತ್ಕಲ್‌ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕ ಮಹೇಶ್‌ ಪ್ರಸಾದ್‌ ಆವರ ನೇತೃತ್ವದಲ್ಲಿ ಸುರತ್ಕಲ್‌ ಪೊಲೀಸ್‌ ಠಾಣಾ ಉಪ ನಿರೀಕ್ಷಕರಾದ ರಾಘವೇಂದ್ರ, ಜನಾರ್ದನ್‌ ನಾಯ್ಕ ಮತ್ತು ಎಚ್‌.ಸಿ. ಉಮೇಶ್‌ ಕೊಟ್ಟಾರಿ, ಎಚ್‌.ಸಿ. ಅಣ್ಣಪ್ಪ ವಂಡ್ರೆ, ಎಚ್‌.ಸಿ. ದಿಲೀಪ್‌ರಾಜೇ ಅರಸ್‌, ಪಿ.ಸಿ. ಕಾರ್ತಿಕ್‌ ಕುಲಾಲ್‌, ಪಿ.ಸಿ. ವಿನೋದ್‌ ಕುಮಾರ್‌, ಪಿ.ಸಿ. ಮಂಜುನಾಥ್‌ ಆಯಟ್ಟಿ ಅವರ ತಂಡ ಕಾರ್ಯಾಚರಣೆ ನಡೆಸಿದೆ.

ನಾಗಮಂಗಲದ ಘಟನೆಯಿಂದ ಆಕ್ರೋಶ?
ನಾಗಮಂಗಲದಲ್ಲಿ ಗಣೇಶ ಮೂರ್ತಿ ವಿಸರ್ಜನ ಶೋಭಾಯಾತ್ರೆಯ ವೇಳೆ ಕಲ್ಲು ತೂರಾಟ ನಡೆಸಿ ಹಿಂದೂ ಧಾರ್ಮಿಕ ಆಚರಣೆಗೆ ಅಡ್ಡಿಪಡಿಸಿದ್ದರಿಂದ ಆರು ಮಂದಿ ಆಕ್ರೋಶಿತರಾಗಿ ಅವಕಾಶಕ್ಕಾಗಿ ಕಾಯುತ್ತಿದ್ದರೆ ಆಥವಾ ಶರಣ್‌ ಪಂಪ್‌ವೆಲ್‌ ಅವರಿಗೆ ಬಿ.ಸಿ. ರೋಡಿನ ವ್ಯಕ್ತಿಯೋರ್ವ ಬೆದರಿಕೆ ಹಾಕಿದ್ದರಿಂದ ಈ ಕೃತ್ಯ ಎಸಗಿದ್ದರೆ ಎಂಬುದರ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next