ಸುರಪುರ: ಸ್ವಾಮಿ ವಿವೇಕಾನಂದರ ಸಂದೇಶಗಳು ಪ್ರತಿಯೊಬ್ಬರ ಬದುಕಿಗೆ ಸ್ಫೂರ್ತಿದಾಯಕ. ಪ್ರತಿಯೊಬ್ಬ ಭಾರತೀಯರಿಗೂ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಅಮರಯ್ಯಸ್ವಾಮಿ ಹಿರೇಮಠ ಜಾಲಿಬೆಂಚಿ ಹೇಳಿದರು.
ಸಮೀಪದ ಹಸನಾಪುರದ ಬಸವರಾಜಪ್ಪ ಅಪ್ಪಾ ವಾಣಿಜ್ಯ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಅಂಗವಾಗಿ ಜರುಗಿದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನ್ಮಭೂಮಿ ಬಗ್ಗೆ ಗೌರವ ಇಟ್ಟು ಕರ್ಮ, ಭಕ್ತಿ ಮತ್ತು ಯೋಗದಿಂದ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದೆಂದು ವಿವೇಕಾನಂದರು ಸಾರಿದ್ದರು ಎಂದು ತಿಳಿಸಿದರು.
ವೀರಪ್ಪ ನಿಷ್ಠಿ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ| ರವೀಂದ್ರ ನಾಗರಾಳ ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯಲ್ಲಿ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ವಿವೇಕಾನಂದರ ಆದರ್ಶದ ಕುರಿತು ಜಾಗೃತಿ ಮೂಡಿಸಲಾಗಿದೆ. ವಿದ್ಯಾರ್ಥಿಗಳಿಗೆ ತಂದೆ, ತಾಯಿ ಹಾಗೂ ಗುರುಗಳ ಆಶೀರ್ವಾದ ಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲ ನಾನಾಗೌಡ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಶರಣಬಸವ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ| ಅನಿಲಕುಮಾರ ಪಾಟೀಲ, ಶರಣಬಸವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಾ ವೇದಿಕೆಯಲ್ಲಿದ್ದರು. ಮೋಹನರಡ್ಡಿ ನಿರೂಪಿಸಿದರು. ಆನಂದಕುಮಾರ ಬಿರಾದಾರ ಸ್ವಾಗತಿಸಿದರು. ಈರಣ್ಣ ಮದರಿ ವಂದಿಸಿದರು.